ನಾಸಾ | ಗಗನಯಾತ್ರಿ ತರಬೇತಿಗೆ ಕೇರಳ ಮೂಲದ ಅಥಿರಾ ಪ್ರೀತಾ ಆಯ್ಕೆ

  • ನಾಸಾ ನಡೆಸುವ ಗಗನಯಾತ್ರಿ ತರಬೇತಿ
  • ವಿಶ್ವದ 12 ಮಂದಿ ಈ ತರಬೇತಿಗೆ ಆಯ್ಕೆ

ಆಕಾಶದಲ್ಲಿ ಹಾರಾಡಬೇಕು, ಹೊಳೆಯುವ ನಕ್ಷತ್ರಗಳನ್ನೊಮ್ಮೆ ಹತ್ತಿರದಿಂದ ನೋಡಬೇಕು, ಮುಟ್ಟಬೇಕು ಎನ್ನುತ್ತಿದ್ದ ಅಥಿರಾ ಪ್ರೀತಾ ರಾಣಿಯ ಕನಸು ಸಾಕಾರಗೊಳ್ಳುವ ಹಾದಿಯಲ್ಲಿದೆ. ನಾಸಾ ನಡೆಸುವ ಗಗನಯಾತ್ರಿ ತರಬೇತಿಗೆ ತಿರುವನಂತಪುರ ಮೂಲದ ಅಥಿರಾ ಆಯ್ಕೆಯಾಗಿದ್ದಾರೆ.

ಕೇರಳದ ಮೊದಲ ಗಗನಯಾತ್ರಿ ಅಥಿರಾ. ಈ ತರಬೇತಿಯನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದಲ್ಲಿ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್‌ ನಂತರ ಬಾಹ್ಯಾಕಾಶಕ್ಕೆ ಹಾರುವ ಮುಂದಿನ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಕೇರಳದ ಪೇಯಡ್‌ನ ನಿವಾಸಿಗಳಾದ ವಿ ವೇಣು ಮತ್ತು ಪ್ರೀತಾ ದಂಪತಿಯ ಪುತ್ರಿ ಅಥಿರಾ, ಬಾಲ್ಯದಿಂದಲೂ ಬಾಹ್ಯಾಕಾಶ ಮತ್ತು ಗಗನಯಾತ್ರಿಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ತಿರುವನಂತಪುರದಲ್ಲಿ ನಡೆಯುತ್ತಿದ್ದ ಖಗೋಳಶಾಸ್ತ್ರದ ತರಗತಿಗಳು ಇವರ ಅರಿವನ್ನು ವಿಸ್ತರಿಸಿದವು.

ದುಡಿಯುತ್ತಲೇ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ ಅಥಿರಾ ಅವರಿಗೆ ಪೈಲೆಟ್‌ ಆಗುವ ಬಯಕೆಯಿತ್ತು. ಈ ಗುರಿ ಅವಳ ಕನಸು ನನಸಾಗಿಸಲು ಸಹಕಾರಿಯಾಗಿತ್ತು. ಕೆನಡಾದ ಒಟ್ಟಾವದಲ್ಲಿನ ಅಲ್ಗೋನ್‌ಕ್ವೀನ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಸ್ಕಾಲರ್‌ಶಿಪ್‌ನೊಂದಿಗೆ ರೋಬೋಟಿಕ್ಸ್‌ ಕೋರ್ಸ್‌ಗೆ ಸೇರಿದರು. ಕೆನಡಾದಲ್ಲಿ ಏರ್‌ಫೋರ್ಸ್‌ಗೆ ಸೇರದೆ ಪೈಲಟ್ ಆಗಲು ತರಬೇತಿ ಪಡೆಯಬಹುದು ಎಂಬುದನ್ನು ತಿಳಿದ ಅವರು, ಸಣ್ಣಪುಟ್ಟ ಕೆಲಸ ಮಾಡುತ್ತಲೇ ಹಣ ಕೂಡಿಟ್ಟರು. ಹಾಗೆಯೇ ರೊಬೊಟಿಕ್ಸ್ ಕೋರ್ಸ್‌ನಲ್ಲಿ ಹೆಚ್ಚು ಅಂಕ ಗಳಿಸಿ ಪಾಸಾದರು.

ಈ ಸುದ್ದಿ ಓದಿದ್ದೀರಾ?: ಈ ದಿನ ವಿಶೇಷ: ಅದಲು ಬದಲು ಸೂತ್ರದ ಮೂಲಕ ವಾರ್ಡ್ ಮೀಸಲಿಗೆ ಸೆಡ್ಡು ಹೊಡೆಯುತ್ತಿರುವ ಕಾಂಗ್ರೆಸ್‌

ಗೋಕುಲ್ ಅವರನ್ನು ಮದುವೆಯಾದ ನಂತರ ಇಬ್ಬರೂ ಬಾಹ್ಯಾಕಾಶ ಅಧ್ಯಯನಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ಕೆನಡಾದಲ್ಲಿ ಸ್ಟಾರ್ಟ್‌ಅಪ್‌ ಆರಂಭಿಸಿದರು. ಕಳೆದ ತಿಂಗಳಷ್ಟೆ ಎಕ್ಸೋ ಜಿಯೋ ಏರೋಸ್ಪೇಸ್‌ ಕಂಪನಿ ಸಹ ಆರಂಭಿಸಿದ್ದಾರೆ.

ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋನಾಟಿಕಲ್ ಸೈನ್ಸ್ ನಡೆಸುವ ಗಗನಯಾತ್ರಿ ತರಬೇತಿ ಕಾರ್ಯಕ್ರಮಕ್ಕೆ ಅಥಿರಾ ಆಯ್ಕೆಯಾಗಿದ್ದಾರೆ. ತರಬೇತಿ ಕಾರ್ಯಕ್ರಮವನ್ನು ನಾಸಾ, ಕೆನಡಾದ ಬಾಹ್ಯಾಕಾಶ ಸಂಸ್ಥೆ ಮತ್ತು ಕೆನಡಾದ ರಾಷ್ಟ್ರೀಯ ಸಂಶೋಧನಾ ಮಂಡಳಿ ಜಂಟಿಯಾಗಿ ನಡೆಸುತ್ತವೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಅಥಿರಾ ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಪ್ರಪಂಚದ ವಿವಿಧ ಭಾಗಗಳಲ್ಲಿ ಒಟ್ಟು ಹನ್ನೆರಡು ಮಂದಿ ಈ ತರಬೇತಿ ಪಡೆಯಲಿದ್ದಾರೆ. ಈ ತರಬೇತಿಯು 3ರಿಂದ 5 ವರ್ಷಗಳವರೆಗೆ ಇರುತ್ತದೆ. ಈ ತರಬೇತಿಯ ನಂತರ ಬಯೋಆಸ್ಟ್ರೊನಾಟಿಕ್ಸ್‌ನಲ್ಲಿ ಸಂಶೋಧನೆ ಮಾಡುವ ಆಸೆ ಇದೆ ಎನ್ನುತ್ತಾರೆ ಅಥಿರಾ.

ನಿಮಗೆ ಏನು ಅನ್ನಿಸ್ತು?
0 ವೋಟ್