ಎನ್‌ಇಪಿ2020 | ಹೊಸ ಪಠ್ಯಕ್ರಮ ಸಿದ್ದತೆ: ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕೇಂದ್ರ ಸರ್ಕಾರ

  • ಆನ್‌ಲೈನ್ ಸಮೀಕ್ಷೆಯ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
  • 23 ಭಾಷೆಗಳಲ್ಲಿ ಸಮೀಕ್ಷೆ ನಡೆಸಲು ಮುಂದಾದ ಕೇಂದ್ರ ಸರ್ಕಾರ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಅನ್ವಯ ಪಠ್ಯಕ್ರಮ ಸಿದ್ದಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಸಮೀಕ್ಷೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ. 

ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು (ಎನ್‌ಸಿಎಫ್) ರೂಪಿಸುವ ಸಲುವಾಗಿ ಪಠ್ಯಕ್ರಮ, ಪಠ್ಯಪುಸ್ತಕಗಳು ಹಾಗೂ ಪಠ್ಯಕ್ಕೆ ಸಂಬಂಧಿಸಿದ ಇತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಆನ್‌ಲೈನ್‌ ಸಮಾಲೋಚನಾ ಸಮೀಕ್ಷೆಯಲ್ಲಿ ಸಾರ್ವಜನಿಕರು ಭಾಗಿಯಾಗಿ, ತಮ್ಮ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಶಿಕ್ಷಣ ಸಚಿವಾಲಯ ಮನವಿ ಮಾಡಿದೆ. 

“ಜಾಗತೀಕರಣ, ತಾಂತ್ರೀಕರಣದ ಕಾಲದಲ್ಲಿ ಹಳೆಯ ಸಂಪ್ರದಾಯವನ್ನು ಮುರಿದು, ದೇಶದ ಅಭಿವೃದ್ದಿಗಾಗಿ ಹೊಸ ಹೊಸ ಆವಿಷ್ಕಾರ, ಕ್ರಿಯಾತ್ಮಕ ಹಾಗೂ ಭವಿಷ್ಯದ ದೃಷ್ಟಿಕೋನದಿಂದ ಹೊಸ ರೀತಿಯಲ್ಲಿ ಪಠ್ಯಕ್ರಮವನ್ನು ಸಿದ್ದಪಡಿಸಬೇಕು. ವಸಾಹತುಶಾಹಿ ಶಿಕ್ಷಣದಿಂದ ಮುಕ್ತವಾಗಬೇಕು” ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ. 

“ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಭಿವೃದ್ದಿ ಪಡಿಸುವ ಸಲುವಾಗಿ, ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಈ ಮೂಲಕ ಕ್ರಿಯಾತ್ಮಕ 'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು' ರಚನೆಗೆ ಸಮೀಕ್ಷೆ ಪ್ರಮುಖ ಪಾತ್ರವಹಿಸುತ್ತದೆ” ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. 

"ಸಂವಿಧಾನಾತ್ಮಕವಾಗಿ ಜಿಲ್ಲಾ ಸಮಾಲೋಚನಾ ಸಮಿತಿಗಳು, ರಾಜ್ಯ ಮತ್ತು ರಾಷ್ಟ್ರೀಯ ಕೇಂದ್ರಿಕೃತ ಸಂಘಟನೆಗಳು ಹಾಗೂ ಕಾರ್ಯನಿರ್ವಹಕ ಸಮಿತಿಗಳ ಮೂಲಕ ಎನ್‌ಸಿಎಫ್ ರೂಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಉದ್ದೇಶಕ್ಕಾಗಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಸಹ ಅಭಿವೃದ್ಧಿಪಡಿಸಲಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.

ಸಮೀಕ್ಷೆಗಾಗಿ ಸ್ಥಳೀಯ ಮಟ್ಟದಲ್ಲಿ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಮುಂತಾದ ಮಧ್ಯಸ್ಥಗಾರರನ್ನು ತಲುಪಲು ಯೋಜಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮಾಲೋಚನೆ ಮತ್ತು ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಮೀಕ್ಷೆಗಳನ್ನು ನಡೆಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ದಲಿತ ವಿದ್ಯಾರ್ಥಿನಿ ಕುಟುಂಬಕ್ಕೆ ಸೂರು ಕಲ್ಪಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ

ಶಾಲಾ ಶಿಕ್ಷಣದ ಭವಿಷ್ಯ, ಬಾಲ್ಯದ ಆರೈಕೆ ಹಾಗೂ ವಯಸ್ಕರ ಶಿಕ್ಷಣದ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಯೋಜನೆ ಇದಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಶಾಲೆ ಮತ್ತು ಶಿಕ್ಷಕರ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವವರು 23 ಭಾಷೆಗಳಲ್ಲಿ ನಡೆಸುತ್ತಿರುವ ಆನ್‌ಲೈನ್‌ ಸಮೀಕ್ಷೆಯಲ್ಲಿ ಭಾಗವಹಿಸಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್