ಎನ್‌ಸಿಆರ್‌ಬಿ ವರದಿ| ದಲಿತರು– ಆದಿವಾಸಿಗಳ ವಿರುದ್ಧದ ದೌರ್ಜನ್ಯ ಪ್ರಕರಣ ಏರಿಕೆ

  • ಉತ್ತರಪ್ರದೇಶದಲ್ಲಿ ಎಸ್‌ಸಿಗಳ ಮೇಲಿನ ದೌರ್ಜನ್ಯ ಪ್ರಕರಣ ಅತಿ ಹೆಚ್ಚು  
  • ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲೆ ಹೆಚ್ಚು ದೌರ್ಜನ್ಯ ಪ್ರಕರಣ ದಾಖಲು

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಭಾರತದಾದ್ಯಂತ ದಲಿತರು ಮತ್ತು ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ವರದಿ ಪ್ರಕಾರ ಪರಿಶಿಷ್ಟ ಜಾತಿಗಳ ವಿರುದ್ಧದ ದೌರ್ಜನ್ಯಗಳು 2020ರಲ್ಲಿ 50,291 ಪ್ರಕರಣಗಳು ದಾಖಲಾಗಿದ್ದು, 2021ರಲ್ಲಿ 50,900 ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.1.2ರಷ್ಟು ಹೆಚ್ಚಾಗಿವೆ.

2021ರಲ್ಲಿ ಉತ್ತರಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ ಮೇಲೆ 13,146(ಶೇ.25.82) ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾದ ರಾಜ್ಯವಾಗಿದೆ. ರಾಜಸ್ಥಾನ 7,524 (ಶೇ.14.7) ಮಧ್ಯಪ್ರದೇಶದಲ್ಲಿ 7,214(ಶೇ.14.1), ಬಿಹಾರ 5,842(ಶೇ.11.4) ಮತ್ತು ಒಡಿಶಾ 2,327(ಶೇ.4.5) ಮೇಲಿನ ಐದು ರಾಜ್ಯಗಳು ಪರಿಶಿಷ್ಟ ಜಾತಿಗಳ ವಿರುದ್ಧ ಶೇ.70.8ರಷ್ಟು ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

2021ರಲ್ಲಿ ಆದಿವಾಸಿಗಳ ಮೇಲೆ 8,802(ಶೇ.6.4) ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. 2020ರಲ್ಲಿ 8,272 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಮಧ್ಯಪ್ರದೇಶದಲ್ಲಿ 2,627(ಶೇ.29.8) ಪರಿಶಿಷ್ಟ ಪಂಗಡಗಳ (ಎಸ್ಟಿ) ವಿರುದ್ಧ ಅತಿ ಹೆಚ್ಚು ದೌರ್ಜನ್ಯ ಪ್ರಕರಣ ವರದಿಯಾಗಿವೆ. ರಾಜಸ್ಥಾನದಲ್ಲಿ 2,121 (ಶೇ.24) ಮತ್ತು ಒಡಿಶಾದಲ್ಲಿ 676 (ಶೇ.7.6), ಮಹಾರಾಷ್ಟ್ರದಲ್ಲಿ 628 (ಶೇ.7.13) ಮತ್ತು ತೆಲಂಗಾಣದಲ್ಲಿ 512 (ಶೇ.5.81) ಪ್ರಕರಣಗಳು ದಾಖಲಾಗಿವೆ. ಮೇಲಿನ ಐದು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧ ಶೇ.74.57 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

2021ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು (ಅಪ್ರಾಪ್ತರನ್ನು ಒಳಗೊಂಡಂತೆ) ದೇಶದಾದ್ಯಂತ 3,893 (ಶೇ.7.64) ಪ್ರಕರಣಗಳು ವರದಿಯಾಗಿವೆ. ಆ ಪೈಕಿ ದಲಿತ ಮಹಿಳೆಯರ ವಿರುದ್ಧ 2,585 ಅತ್ಯಾಚಾರ ಪ್ರಕರಣಗಳು ಮತ್ತು 1,285 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

ಬಾಕಿ ಇರುವ ಪ್ರಕರಣಗಳು

2021ರ ಅಂತ್ಯದ ವೇಳೆಗೆ ಪರಿಶಿಷ್ಟ ಜಾತಿ ಮೇಲಿನ ಒಟ್ಟು 70,818 ದೌರ್ಜನ್ಯ ಪ್ರಕರಣಗಳು ತನಿಖೆಯಾಗದೆ ಬಾಕಿ ಉಳಿದಿವೆ. 12,159 ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳು ಬಾಕಿ ಇವೆ. ಎಸ್ಸಿಗಳ ಮೇಲಿನ ದೌರ್ಜನ್ಯದ ಒಟ್ಟು 52,159 ಪ್ರಕರಣಗಳು ಮತ್ತು ಎಸ್ಟಿಗಳ ಮೇಲಿನ 8,825 ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ಇತ್ಯರ್ಥ ಮಾಡಿದ್ದಾರೆ.

ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಮಾಹಿತಿ ಆಧರಿತ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180