
- ಐಐಎಫ್ಎಲ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಕಿರಿಯ ಉದ್ಯಮಿ
- ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಭಾರತೀಯ-ಅಮೆರಿಕ ಮಹಿಳಾ ಉದ್ಯಮಿ ನೇಹಾ ನಾರ್ಖೆಡೆ
ಪುಣೆ ಮೂಲದ ಉದ್ಯಮಿ ನೇಹಾ ನಾರ್ಖೆಡೆ, ಬುಧವಾರ ಬಿಡುಗಡೆಯಾದ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2022ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ʻಸ್ಟ್ರೀಮಿಂಗ್ ಡೇಟಾ ಟೆಕ್ನಾಲಜಿ ಕಂಪನಿ ಕನ್ಫ್ಲುಯೆಂಟ್ʼನ ಸಹಸಂಸ್ಥಾಪಕಿ, 37 ವರ್ಷದ ನೇಹಾ ನಾರ್ಖೆಡೆ, ಭಾರತೀಯ-ಅಮೆರಿಕನ್ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿ ಎಂದು ಹೆಸರಿಸಿದ್ದಾರೆ.
2014ರಲ್ಲಿ ಕನ್ಫ್ಲುಯೆಂಟ್ ಕಂಪನಿ ಸ್ಥಾಪಸಿದ ನೇಹಾ ಅವರು ಪ್ರಸ್ತುತ ಅಂದಾಜು 4,700 ಕೋಟಿ ರೂ ಸಂಪತ್ತು ಹೊಂದಿದ್ದು, ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 336ನೇ ಸ್ಥಾನ ಪಡೆದಿದ್ದಾರೆ.
ಶ್ರೀಮಂತರ ಪಟ್ಟಿಗೆ ಸೇರಿದ ನೇಹಾ ಪುಣೆ ಮೂಲದವರು
ನಾರ್ಖೆಡೆ ಅವರು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದವರು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ಪುಣೆ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್ನಲ್ಲಿ ವಿಜ್ಞಾನ ಪದವಿ ಪಡೆದರು. ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ಹಾರಿದ ನೇಹಾ ಜಾರ್ಜಿಯಾ ಟೆಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಅಧ್ಯಯನ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಎಂಎಸ್ ಟ್ರಸ್ಟ್ ವಿವಾದ | ಅಶ್ವತ್ಥ ನಾರಾಯಣ ರಾಜೀನಾಮೆಗೆ ಎಚ್ಡಿಕೆ ಪಟ್ಟು; ಆಸ್ತಿ ಮುಟ್ಟುಗೋಲಿಗೆ ಆಗ್ರಹ
ಕನ್ಫ್ಲುಯೆಂಟ್ ಕಂಪನಿಯ ಜೊತೆಯಲ್ಲಿ ನೇಹಾ ಅವರು, ಓಪನ್ ಸೋರ್ಸ್ ಮೆಸೇಜಿಂಗ್ ಸಿಸ್ಟಮ್ ಅಪಾಚೆ ಕಾಫ್ಕಾದ ಸಹ-ರಚನೆಕಾರರು ಆಗಿದ್ದಾರೆ. ಹಾಗೆಯೇ, ಬಹು ತಂತ್ರಜ್ಞಾನ ಕಂಪನಿಗಳಿಗೆ ಹೂಡಿಕೆದಾರರಾಗಿ ಮತ್ತು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಕನ್ಫ್ಲುಯೆಂಟ್ ಕಂಪನಿಯನ್ನು ಪ್ರಾರಂಭಿಸುವ ಮೊದಲು, ನಾರ್ಕೆಡೆ ಅವರು ಲಿಂಕ್ಡ್ಇನ್ ಮತ್ತು ಒರಾಕಲ್ನಲ್ಲಿ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಅವರು ಅಪಾಚೆ ಕಾಫ್ಕಾ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದರು. ಈ ಸಾಫ್ಟ್ವೇರ್ ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸಲು ಲಿಂಕ್ಡ್ಇನ್ಗೆ ಸಾಫ್ಟ್ವೇರ್ ಸಹಾಯ ಮಾಡುತ್ತದೆ.
ಫೋರ್ಬ್ಸ್ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಗಳ ಪಟ್ಟಿ: ನೇಹಾ 57ನೇ ಸ್ಥಾನ
ಫೋರ್ಬ್ಸ್ ಸಂಗ್ರಹಿಸಿದ 2022ರ ಅಮೆರಿಕದ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ನೇಹಾ 57ನೇ ಸ್ಥಾನವನ್ನು ಪಡೆದಿದ್ದಾರೆ. 2018ರಲ್ಲಿ ಫೋರ್ಬ್ಸ್ನ ವಿಶ್ವದ ಟಾಪ್ 50 ಟೆಕ್ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಹುರುನ್ ಇಂಡಿಯಾದ ಪ್ರಕಾರ, ಒಟ್ಟು 1,103 ವ್ಯಕ್ತಿಗಳು 1,000 ಕೋಟಿ ರೂ ಸಂಪತ್ತನ್ನು ಹೊಂದಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶ್ರೀಮಂತ ವ್ಯಕ್ತಿಗಳ ಸಂಖ್ಯೆಯಲ್ಲಿ (96) ಹೆಚ್ಚಳವಾಗಿದೆ.