ಸುದ್ದಿ ವಿವರ | ದೇಶದಲ್ಲಿ ರೈತ ಹೋರಾಟದ ನೇತೃತ್ವ ವಹಿಸಿದ್ದ ಬಿಕೆಯು ವಿಭಜನೆ

Rakesh Tikait
  • ರೈತ ಹೋರಾಟದ ಮುಂಚೂಣಿಯಲ್ಲಿದ್ದ  ಭಾರತೀಯ ಕಿಸಾನ್ ಸಂಘ ವಿಭಜನೆ
  • ರಾಜಕೀಯೇತರ ಸಂಘಟನೆ ಹುಟ್ಟು ಹಾಕಿದ ಭಿನ್ನಮತೀಯ ರೈತ ನಾಯಕರು

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ 13 ತಿಂಗಳಷ್ಟು ಧೀರ್ಘ ಕಾಲ ರೈತ ಹೋರಾಟದ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಸಂಘಟನೆಯ (ಬಿಕೆಯು), ಭಾನುವಾರ ವಿಭಜನೆಯಾಗಿ ರಾಜಕೀಯೇತರ ಬಿಕೆಯು ಸಂಘಟನೆ ಹುಟ್ಟಿಕೊಂಡಿದೆ.

ರೈತ ನಾಯಕರಾದ ರಾಕೇಶ್ ಟಿಕಾಯತ್ ಮತ್ತು ಅವರ ಸಹೋದರ ನರೇಶ್ ಟಿಕಾಯತ್ ರೈತ ಸಂಘಟನೆಗಳ ಮೌಲ್ಯಗಳಿಗೆ ವಿರುದ್ಧವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೈತ ಹೋರಾಟದ ಸಂದರ್ಭದಲ್ಲಿ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮಯದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿರುವ ಬಿಕೆಯು ಒಂದು ಭಾಗವು ಭಾರತೀಯ ಕಿಸಾನ್ ಸಂಘಟನೆ (ರಾಜಕೀಯೇತರ) (ಬಿಕೆಯು ರಾಜಕೀಯೇತರ) ಎನ್ನುವ ಸಂಘಟನೆಯನ್ನು ಲಖನೌನಲ್ಲಿ ಭಾನುವಾರ ರಚಿಸಿದ್ದಾರೆ.

ರೈತ ಹೋರಾಟಗಳ ಸಂದರ್ಭದಲ್ಲಿ ಟಿಕಾಯತ್ ಸಹೋದರರು ನೀಡಿರುವ ರಾಜಕೀಯ ಹೇಳಿಕೆಗಳಿಗೆ ತಮ್ಮ ಸಹಮತವಿಲ್ಲ ಎಂದು ಹೊಸ ಸಂಘಟನೆ ಹೇಳಿದೆ.

ಟಿಕಾಯತ್ ಹೋರಾಟದ ವೇದಿಕೆ ಬಿಕೆಯು

ಬಿಕೆಯು ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ (1935- 2011) ನಿಧನದ ವಾರ್ಷಿಕ ಪುಣ್ಯಸ್ಮರಣೆಯ ದಿನದಂದು ಈ ಪ್ರಮುಖ ಬೆಳವಣಿಗೆ ನಡೆದಿದೆ.  ಮಹೇಂದ್ರ ಸಿಂಗ್ ಟಿಕಾಯತ್ 1986ರಲ್ಲಿ ಬಿಕೆಯು ಸ್ಥಾಪಿಸಿದ್ದರು. 2011ರಲ್ಲಿ ಅವರ ಮರಣದ ನಂತರ ಮಕ್ಕಳಾದ ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ಸಂಘಟನೆಯ ನೇತೃತ್ವ ವಹಿಸಿದ್ದಾರೆ. ನರೇಶ್ ಬಿಕೆಯು ಅಧ್ಯಕ್ಷರಾಗಿದ್ದರೆ, ರಾಕೇಶ್ ವಕ್ತಾರರಾಗಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ 13 ತಿಂಗಳ ಹೋರಾಟದ ಸಂದರ್ಭದಲ್ಲಿ ರಾಕೇಶ್ ಟಿಕಾಯತ್ ದೇಶಾದ್ಯಂತ ರೈತರನ್ನು ಪ್ರತಿನಿಧಿಸುವ ವ್ಯಕ್ತಿ ಎನ್ನುವ ವರ್ಚಸ್ಸು ಪಡೆದಿದ್ದಾರೆ. 

ಹೊಸ ಸಂಘಟನೆ ಹುಟ್ಟು ಹಾಕಿದವರು ಯಾರು?

ಹರ್ನಾಮ್ ಸಿಂಗ್ ವರ್ಮ್ (ಲಖನೌ), ಧರ್ಮೇಂದ್ರ ಮಲಿಕ್ (ಮುಜಾಫರ್‌ನಗರ), ದಿಗಂಬರ್ ಸಿಂಗ್ (ಬಿಜ್ನೋರ್). ಮಂಗೇರಾಮ್ ತ್ಯಾಗಿ (ಬುಲಂದರ್‌ಶಹರ್) ಮತ್ತು ಅನಿಲ್ ತಲನ್ ಮೊದಲಾದವರು ಹೊಸ ರಾಜಕೀಯೇತರ ಬಿಕೆಯು ಭಾಗವಾಗಿದ್ದಾರೆ. ಹೊಸ ಸಂಘಟನೆಯಲ್ಲಿ ರಾಜೇಶ್ ಚೌಹಾಣ್‌ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಮತ್ತು ಗತವಾಲಾ ಮಲಿಕ್ ಖಾಪ್‌ನ ಚೌಧರಿ ರಾಜೇಂದ್ರ ಸಿಂಗ್ ಮಲಿಕ್ ಪೋಷಕ ಸದಸ್ಯರು. ದಿಗಂಬರ್ ಸಿಂಗ್ ಅವರನ್ನು ಹೊಸ ಸಂಘಟನೆಯ ಯುವ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹರ್ನಾಮ್ ಸಿಂಗ್ ಅವರನ್ನು ಉತ್ತರ ಪ್ರದೇಶದ ರಾಜ್ಯಾಧ್ಯಕ್ಷರನ್ನಾಗಿ ಆರಿಸಲಾಗಿದೆ. ಮಂಗೇರಾಮ್ ತ್ಯಾಗಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರೆ, ಧರ್ಮೇಂದ್ರ ಮಲಿಕ್ ರಾಷ್ಟ್ರೀಯ ವಕ್ತಾರ.

“2018ರಲ್ಲಿ ರಾಕೇಶ್ ಟಿಕಾಯತ್ ಅವರು ದೆಹಲಿಯ ಹರಿದ್ವಾರದಿಂದ ಗಾಜಿಪುರಕ್ಕೆ ಕಿಸಾನ್ ಕ್ರಾಂತಿ ಯಾತ್ರೆ ಮಾಡಿರುವ ಉದ್ದೇಶವೇನು? ಅವರು ಸಂಘಟನೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಹೀಗಾಗಿ ಹೊಸ ಸಂಘಟನೆ ಹುಟ್ಟು ಹಾಕಬೇಕಾಯಿತು. ನಾವು ಬೆಂಬಲ ಬೆಲೆ  ಮತ್ತು ಇತರ ರೈತರ ಬೇಡಿಕೆಗೆ ಒತ್ತು ನೀಡಿ ಹೋರಾಟ ಮುಂದುವರಿಸಲಿದ್ದೇವೆ” ಎಂದು ಹರ್ನಮ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಇದೀಗ ರಾಜಕೀಯೇತರ ಸಂಘಟನೆ ರೂಪಿಸಿರುವುದರಿಂದ ಪ್ರತೀ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ಪ್ರಶ್ನಿಸುವ ಅಧಿಕಾರ ಸಿಕ್ಕಿದೆ ಎಂದು ಹೊಸ ಸಂಘಟನೆ ಅಭಿಪ್ರಾಯಪಟ್ಟಿದೆ. 

Image
Farmers Protest

ವಿಭಜನೆಗೆ ಆಡಳಿತದ ಒತ್ತಡ ಕಾರಣವೆ?

ಮತ್ತೊಂದೆಡೆ ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಹೊಸ ಸಂಘಟನೆ ಹುಟ್ಟು ಹಾಕಿದವರು "ಆಡಳಿತ ಪಕ್ಷದ ಒತ್ತಡ ಮತ್ತು ನಿರ್ದೇಶನಗಳ ಮೇಲೆ” ಒಟ್ಟಾರೆ ಹೋರಾಟದ ವಿಭಜನೆಗೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಹೊರಿಸಿದ್ದಾರೆ. ಬಿಕೆಯುನ ಲಖನೌ ಕಚೇರಿ ರಾಜೇಶ್ ಚೌಹಾಣ್‌ ಹೆಸರಲ್ಲಿರುವುದರಿಂದ ಮತ್ತು ಅವರ ಅಗತ್ಯ ಹೊಸ ಸಂಘಟನೆಗೆ ಇರುವುದರಿಂದ ಅವರನ್ನು ಸೇರಿಸಿಕೊಂಡಿದ್ದಾರೆ ಎಂದು ಟಿಕಾಯತ್ ಹೇಳಿದ್ದಾರೆ.

ಆದರೆ, “ನಾವು ರೈತರು ಮತ್ತು ಸರ್ಕಾರದ ಒತ್ತಡಕ್ಕೆ ಮಣಿಯಲು ಅಪರಾಧಿಗಳೇನಲ್ಲ” ಎಂದು ಹೊಸ ಸಂಘಟನೆ ಆರೋಪವನ್ನು ತಳ್ಳಿ ಹಾಕಿದೆ. 

ಪ್ರತ್ಯೇಕ ಸಂಘಟನೆ ಕಟ್ಟಿದ ಏಳು ನಾಯಕರನ್ನು ‘ರೈತ ವಿರೋಧಿಗಳು’ ಎಂದು ಉಚ್ಛಾಟಿಸಿರುವುದಾಗಿ ಬಿಕೆಯು ನಂತರ ಹೇಳಿದೆ.

“ಬಿಕೆಯು ಜೊತೆಗೆ ಸಹಮತವಿಲ್ಲದ ಕಾರಣ ರಾಜಕೀಯೇತರ ಬಿಕೆಯು ಹುಟ್ಟಿಕೊಂಡಿದೆ. ಮಹೇಂದ್ರ ಸಿಂಗ್ ಟಿಕಾಯತ್ ಅವರ ಮೂಲ ಉದ್ದೇಶಗಳ ಪ್ರಕಾರ ಹತ್ತು ಬೇಡಿಕೆಗಳನ್ನು ಇಟ್ಟು ಸರ್ಕಾರದ ಬಳಿಗೆ ಹೋದಾಗ ನಾಲ್ಕು ಬೇಡಿಕೆಗಳು ಈಡೇರಿದರೂ ಹೋರಾಟ ಹಿಂತೆಗೆದುಕೊಳ್ಳಬೇಕು. ಆದರೆ ಈಗಿನ ಸ್ಥಿತಿ ಹೇಗಿದೆ? ಪ್ರತಿಭಟನೆ 13 ತಿಂಗಳುಗಳ ಕಾಲ ನಡೆಯಿತು ಮತ್ತು ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿದೆ. ಆದರೆ ಇನ್ನೂ ಹೋರಾಟಗಾರರಿಗೆ ಸಮಾಧಾನವಿಲ್ಲ” ಎಂದು ಹೊಸದಾಗಿ ರಚನೆಯಾದ ಸಂಘಟನೆಯ ಅಧ್ಯಕ್ಷ ಹರ್ನಾಮ್‌ ಸಿಂಗ್ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಈ ಸುದ್ದಿಯನ್ನು ಓದಿದ್ದೀರಾ?ರೈತ ಹೋರಾಟಗಾರರ ಬಂಧನ | ಠಾಣೆಯೆದುರು ಅನಿರ್ದಿಷ್ಟಾವಧಿ ಧರಣಿಗೆ ಮುಂದಾದ ರಾಕೇಶ್ ಟಿಕಾಯತ್ 

ವಿಫಲವಾಗಿದ್ದ ಸಂಧಾನ

ಕಳೆದ ಕೆಲವು ವಾರಗಳಿಂದ ಬಿಕೆಯು ವಿಭಜನೆಯ ಹಾದಿಯಲ್ಲಿ ಸಾಗಿತ್ತು. ಸಂಘಟನೆಯೊಳಗಿನ ಭಿನ್ನಮತವನ್ನು ಶಮನಗೊಳಿಸಲು ಹಲವು ರೀತಿಯ ಪ್ರಯತ್ನಗಳೂ ನಡೆದಿದ್ದವು. ಕೆಲ ದಿನಗಳ ಹಿಂದೆ ಲಖನೌಗೆ ಭೇಟಿ ನೀಡಿ ಬಿಕೆಯುನ ರಾಜಕೀಯ ಚಟುವಟಿಕೆಗಳ ವಿರುದ್ಧ ಬಂಡೆದ್ದ ನಾಯಕರನ್ನು ಭೇಟಿಯಾಗಿ ಸಮಾಧಾನಿಸುವ ಪ್ರಯತ್ನವನ್ನು ರಾಕೇಶ್ ಟಿಕಾಯತ್ ಮಾಡಿದ್ದರು. ಆದರೆ ಸಭೆಯಲ್ಲಿ ಒಮ್ಮತದ ನಿರ್ಧಾರವಾಗಿರಲಿಲ್ಲ. 

ನಿಮಗೆ ಏನು ಅನ್ನಿಸ್ತು?
1 ವೋಟ್