
- ರೈಲ್ವೇ ಸಚಿವಾಲಯದ ಆಹಾರದ ಮೆನುವಿನಲ್ಲಿ ಸಿಗಲಿದೆ ಸಿರಿಧಾನ್ಯ
- ಸಿರಿಧಾನ್ಯ ವರ್ಷಾಚರಣೆ ಸಂದರ್ಭದಲ್ಲಿ ರೈಲ್ವೇಯಿಂದ ನಿರ್ಧಾರ
ನವದೆಹಲಿಯಿಂದ ಹೊರಡುವ ರೈಲುಗಳಲ್ಲಿ ಇನ್ನು ಮುಂದೆ ಪ್ರಯಾಣಿಕರಿಗೆ ರುಚಿಕರ ಮತ್ತು ಆರೋಗ್ಯಕರ ಸಿರಿಧಾನ್ಯ ಊಟ ಹಾಗೂ ಮಕ್ಕಳ ಆಹಾರವೂ ಸಿಗಲಿದೆ.
ರೈಲ್ವೇ ಮಂಡಳಿ ವತಿಯಿಂದ ಐಆರ್ಸಿಟಿಸಿಗೆ ಕಳುಹಿಸಲಾಗಿರುವ ಟಿಪ್ಪಣಿಯೊಂದರಲ್ಲಿ ಈ ಅಂಶಗಳ ಉಲ್ಲೇಖವಾಗಿದ್ದು, ರೈಲಿನಲ್ಲಿ ಪ್ರಯಾಣಿಸುವ ಮಕ್ಕಳು, ವೃದ್ಧರು ಹಾಗೂ ಮಧುಮೇಹ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಊಟವನ್ನು ನೀಡಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.
ʼಇಂಡಿಯನ್ ರೈಲ್ವೇ ಕೆಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ʼನ ಆಹಾರ ಪಟ್ಟಿಯಲ್ಲಿ ಹೆಚ್ಚಿನ ಆಯ್ಕೆಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಕ್ರಮದಿಂದ ರೈಲುಗಳಲ್ಲಿ ಅಡುಗೆ ಸೇವೆಗಳನ್ನು ಸುಧಾರಿಸುವ ಗುರಿ ಹೊಂದಿದ್ದು, ಊಟದ ವಿಚಾರದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗುವುದು ಎಂದು ರೈಲ್ವೇ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಇಲಾಖೆ, "ಹಬ್ಬಗಳ ಸಂದರ್ಭದಲ್ಲಿ ತಯಾರಿಸಲಾಗುವ ವಿಶೇಷ ಅಡುಗೆ, ಆರೋಗ್ಯಕ್ಕೆ ಪೂರಕವಾಗಿರುವ ಸಿರಿಧಾನ್ಯಗಳ ಆಹಾರ, ಚಿಕ್ಕ ಮಕ್ಕಳಿಗೂ ಆಹಾರ ಕಾಯ್ದಿರಿಸಲು ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಆಹಾರ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದೆ.
ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳ ಬಳಕೆ ಉತ್ತೇಜಿಸಲು 2023ರನ್ನು ʼಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷʼ ಎಂದು ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಪೂರಕವಾಗಿ ಐಆರ್ಸಿಟಿಸಿ ಆಹಾರ ಪಟ್ಟಿಯಲ್ಲಿ ಸಿರಿಧಾನ್ಯಗಳ ಆಹಾರ ಪರಿಚಯಿಸಲಾಗುತ್ತಿದೆ. ಈ ಬಗೆಯ ಆಹಾರ ಪದಾರ್ಥವನ್ನು ಪ್ರೀಮಿಯಂ, ಎಕ್ಸ್ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳಲ್ಲಿ ಮಾರಲು ಅನುಮತಿ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೃಷಿ ಕಾನೂನುಗಳ ರದ್ದತಿಗೆ ವರ್ಷ | ʼವಿಜಯ್ ದಿವಸ್ʼ ಆಚರಣೆಗೆ ಸಂಯುಕ್ತ ಕಿಸಾನ್ ಮೋರ್ಚಾ ಸಿದ್ಧತೆ
ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯ ದರದಲ್ಲಿ ಮಾರಲಾಗುವುದು. ಪ್ರಯಾಣಿಕರಿಗೆ ತಮ್ಮ ಆಹಾರದ ಆಯ್ಕೆಗೆ ಅವಕಾಶವಿರಲಿದೆ. ಆದರೆ ಐಆರ್ಸಿಟಿಸಿ ಆಹಾರದ ದರ ನಿಗದಿಪಡಿಸಲಿದೆ. ರೈಲ್ವೇ ಸಚಿವಾಲಯದ ಈ ಕ್ರಮವು ವಿವಿಧ ರಾಜ್ಯಗಳಿಂದ ದೆಹಲಿಗೆ ಪ್ರಯಾಣಿಸುವವರ ಊಟದ ಸಮಸ್ಯೆ ಸುಧಾರಿಸುವ ನಿಟ್ಟಿನಲ್ಲಿ ಉಪಯುಕ್ತವೆನಿಸಬಹುದು.