ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ: ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

Chandrachud
  • ಕಾನೂನಾತ್ಮಕತೆ ಮತ್ತು ನೈತಿಕತೆಯ ನಡುವಿನ ವ್ಯತ್ಯಾಸ ಅರಿಯಿರಿ
  • ನ್ಯಾಯಯುತವಾಗಿರುವುದು ಕಾನೂನಾತ್ಮಕವಾಗಿ ಇರದಿರಬಹುದು

ಕಾನೂನಾತ್ಮಕವಾಗಿರುವುದೇ ಬಹುಶಃ ಅನ್ಯಾಯದಿಂದಲೂ ಕೂಡಿರಬಹುದು. ಅದೇ ರೀತಿ ನ್ಯಾಯಯುತವಾಗಿರುವುದು ಕಾನೂನಾತ್ಮಕವಾಗಿ ಇರದೆ ಹೋಗಬಹುದು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ.

ಗಾಂಧಿನಗರದಲ್ಲಿ ನಡೆದ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಕಾನೂನು ಪದವೀಧರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾನೂನಾತ್ಮಕತೆ ಮತ್ತು ನೈತಿಕತೆಯ ನಡುವಿನ ವ್ಯತ್ಯಾಸ ಅರಿಯಿರಿ. ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ ಎಂದು ಅಭಿಪ್ರಾಯಪಟ್ಟ ಅವರು, ಕಾನೂನನ್ನು ವಿಮರ್ಶಿಸಲು, ತಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ಹಾಗೂ ನ್ಯಾಯೋಚಿತವಾಗಿ ನಡೆಯುವಂತೆ ಕಾನೂನು ಪದವೀಧರರಿಗೆ ತಿಳಿಸಿದರು.

ಭಾಷಣದ ಪ್ರಮುಖ ವಿಚಾರಗಳು

  • ನಿಮ್ಮ ವೃತ್ತಿ ಜೀವನದ ಅನೇಕ ಸಂದರ್ಭಗಳಲ್ಲಿ ಕಾನೂನಾತ್ಮಕವಾಗಿರುವುದು ಬಹುಶಃ ಅನ್ಯಾಯದಿಂದ ಕೂಡಿರಬಹುದು ಮತ್ತು ನ್ಯಾಯಯುತವಾದುದು ಕಾನೂನಾತ್ಮಕವಾಗಿಲ್ಲದೆ ಇರಬಹುದು.
  • ಕಾನೂನು ಮತ್ತು ನ್ಯಾಯದ ನಡುವಿನ ವ್ಯತ್ಯಾಸದ ಮಹತ್ವವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನ್ಯಾಯವನ್ನು ಮುನ್ನಡೆಸುವ ಹೆಜ್ಜೆಯಾಗಿ ಕಾನೂನನ್ನು ವಿಮರ್ಶಿಸಬೇಕು. ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ.
  • ರಾಜಕೀಯ, ಸಾಮಾಜಿಕ ಹಾಗೂ ನೈತಿಕ ಘರ್ಷಣೆಗಳ ಗದ್ದಲ ಮತ್ತು ಗೊಂದಲದ ನಡುವೆ ಹೊಸ ಪದವೀಧರರಾಗಿ ಜಗತ್ತಿಗೆ ಕಾಲಿಡುತ್ತಿರುವ ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ನ್ಯಾಯೋಚಿತವಾಗಿ ನಡೆಯಬೇಕು.
  • ಅಧಿಕಾರದಲ್ಲಿರುವವರಿಗೆ ಸತ್ಯವನ್ನೇ ಹೇಳಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ದೃಢತೆ ಕಾಯ್ದುಕೊಳ್ಳಿ.
  • ಇತರರ ಅಭಿಪ್ರಾಯ ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಯಾವುದೇ ರೀತಿಯಲ್ಲಿ ಕುರುಡು ಅನುಸರಣೆ ಆಗದು. ಹಾಗೆ ಸಹಿಸಿಕೊಂಡವರು ದ್ವೇಷ ಭಾಷಣದ ವಿರುದ್ಧ ನಿಲ್ಲುವುದಿಲ್ಲ ಎಂದರ್ಥವಲ್ಲ.
  • ಪರಿಸ್ಥಿತಿ ಮೊದಲಿಗಿಂತಲೂ ಚೆನ್ನಾಗಿದೆ ಅಥವಾ ಬೇರೆಡೆಗಳಿಗಿಂತಲೂ ಇಲ್ಲಿ ಉತ್ತಮವಾದ ಸ್ಥಿತಿ ಇದೆ ಎಂದು ಹೇಳುವ ಜನ ನಿಮಗೆ ಎದುರಾಗಬಹುದು. ಆದರೆ ನ್ಯಾಯದೆಡೆಗಿನ ಪಯಣ ಮಧ್ಯದಲ್ಲೇ ನಿಲ್ಲುವುದಿಲ್ಲ ಅಥವಾ ಇತರರಿಗಿಂತಲೂ ಕಡಿಮೆ ಅನ್ಯಾಯ ನಮಗಾಗಿದೆ ಎಂದು ಭಾವಿಸುವಲ್ಲಿಗೆ ಮುಗಿಯಲ್ಲ.
  • ಸಾಂಸ್ಕೃತಿಕ ಯಜಮಾನಿಕೆಯ ಅಪಾಯಗಳ ಕುರಿತು ಮಾತನಾಡುತ್ತಾ ಅಮೆರಿಕದ ಚಿಂತಕಿ, ರಾಜ್ಯಶಾಸ್ತ್ರಜ್ಞೆ ಐರಿಸ್‌ ಯಂಗ್‌ ಚರ್ಚಿಸುವಂತೆ ಸಾಂಸ್ಕೃತಿಕ ಯಜಮಾನಿಕೆ ಎಂಬುದು ಸಮಾಜದಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ದಬ್ಬಾಳಿಕೆಯ ಅನೇಕ ಮುಖಗಳಲ್ಲಿ ಒಂದಾಗಿದೆ. ಪ್ರಬಲ ಸಂಸ್ಕೃತಿ ಸದಾ ಅಂತಹ ಸಮುದಾಯಗಳನ್ನು ದಾರಿ ತಪ್ಪಿರುವಂತಹವು ಎಂದು ವ್ಯಾಖ್ಯಾನಿಸುತ್ತವೆ ಎಂಬುದು ಆಕೆಗೆ ತಿಳಿದಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಕೆಲವೊಮ್ಮೆ ಅಂಚಿನ ಸಮುದಾಯಗಳ ಆತ್ಮಾಭಿಮಾನದ ರಾಜಕಾರಣ ಆ ಉಪ ಸಮುದಾಯಗಳನ್ನು ಮತ್ತಷ್ಟು ಅಂಚಿಗೆ ತಳ್ಳಬಹುದು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಮೀಸಲಾತಿ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್‌ 10 ಕೊನೆಯ ದಿನ

  • ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಪಡೆಯಲು ಕಾರಣವಾಗುವ ಬಹಳಷ್ಟು ಕೆಲಸಗಳು ಸಾಮಾಜಿಕ ಚಳವಳಿ, ರಾಜಕೀಯ ನಂಬಿಕೆ ಮತ್ತು ಸಾಂಸ್ಕೃತಿಕ ತಿಳಿವಳಿಕೆಯ ಮೂಸೆಯಲ್ಲಿ ಮತ್ತು ಕಾನೂನಿಗೆ ಅತೀತವಾಗಿ ನಡೆಯುತ್ತವೆ. ಕಾನೂನು ಮತ್ತು ನ್ಯಾಯದ ನಡುವಿನ ಸೂಕ್ಷ್ಮವನ್ನು ಅರಿಯಲು ನಮ್ಮದೇ ಸಂದರ್ಭಗಳನ್ನು ನಾವು ಗಮನಿಸಬಹುದು. 2005ರಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲಾಗಿದೆ.
  • ನಮ್ಮ ಇತಿಹಾಸದಲ್ಲಿ ಬಹಳ ಕಾಲದವರೆಗೆ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಿಸುವ ಕಾನೂನು ಇರಲಿಲ್ಲ. ಇತ್ತೀಚಿನ ಕಾರ್ಮಿಕ ಚಳವಳಿಗಳ ಪರಿಣಾಮವಾಗಿ ವಿಶ್ವದೆಲ್ಲೆಡೆ ಕನಿಷ್ಠ ವೇತನ ಜಾರಿಯಲ್ಲಿದೆ. ಸಮ್ಮತಿ ಹೊಂದಿರುವ ವಯಸ್ಕರ ನಡುವೆ ಸಲಿಂಗ ಸಂಬಂಧ ಅಪರಾಧವೆಂದು ಪರಿಗಣಿಸಿದ್ದ ಐಪಿಸಿ ಸೆಕ್ಷನ್‌ 377 ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್‌ ಪೀಠದ ಭಾಗ ನಾನಾಗಿದ್ದೆ.
  • ಬಡತನದ ಹಿನ್ನೆಲೆಯ ಪದವೀಧರರು ಶೈಕ್ಷಣಿಕ ಸಾಲ ಪಡೆದವರಾಗಿದ್ದು ಅವರಿಗೆ ಹೆಚ್ಚಿನ ಸಂಬಳದ ಉದ್ಯೋಗ ಅಗತ್ಯವಿರುವುದರಿಂದ ಸಾಮಾಜಿಕ ನ್ಯಾಯದ ಪರವಾಗಿ ವಕೀಲಿಕೆ ಮಾಡುವುದು ಸಾಧ್ಯವಾಗದೆ ಹೋಗಬಹುದು. ಆದರೆ ನಿಮ್ಮ ವೃತ್ತಿ ಯಾವುದೇ ಇರಲಿ ನಿಮ್ಮ ವೃತ್ತಿ ಜೀವನದಲ್ಲಿ ಸಾಂವಿಧಾನಿಕ ನೈತಿಕತೆ ಅಳವಡಿಸಿಕೊಂಡರೆ ಅಂತಹವರು ಸಾಂವಿಧಾನಿಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಬಹುದು.
  • ಕಾನೂನನ್ನು ವಿಮರ್ಶಿಸುವುದರ ಜೊತೆಗೆ ಅವುಗಳನ್ನು ಉತ್ತಮಪಡಿಸಲು ಮತ್ತು ಹೆಚ್ಚು ನ್ಯಾಯಯುತವಾಗಿಸಲು ಅವುಗಳನ್ನು ಮರುರೂಪಿಸುವ ಮತ್ತು ಮರುವ್ಯಾಖ್ಯಾನಿಸಬಹುದಾದ ಮಾರ್ಗಗಳನ್ನು ಒಟ್ಟಿಗೆ ಕಂಡುಕೊಳ್ಳುವುದು ಮುಖ್ಯ. 
ನಿಮಗೆ ಏನು ಅನ್ನಿಸ್ತು?
2 ವೋಟ್