ಒಂದು ನಿಮಿಷದ ಓದು | ಮಹಿಳೆ- ಮಕ್ಕಳ ವಿರುದ್ಧದ ಅಪರಾಧಕ್ಕಿಲ್ಲ ನಿರೀಕ್ಷಣಾ ಜಾಮೀನು; ತಿದ್ದುಪಡಿ ಮಂಡನೆ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧದ ಆರೋಪಿಗಳಿಗೆ ಇನ್ನು ಮುಂದೆ ಉತ್ತರ ಪ್ರದೇಶದಲ್ಲಿ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಉತ್ತರ ಪ್ರದೇಶ ಸರ್ಕಾರವು ಈ ಬಗ್ಗೆ ಸಿಆರ್‌ಪಿಸಿಯ ಸೆಕ್ಷನ್ 438ರಲ್ಲಿ ತಿದ್ದುಪಡಿಗಳನ್ನು ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದೆ.

ಪ್ರಸ್ತಾವನೆಯ ಪ್ರಕಾರ, ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಲ್ಲಿ ಡಿಎನ್‌ಎ ಮತ್ತು ಜೈವಿಕ ಪುರಾವೆಗಳ ತ್ವರಿತ ಸಂಗ್ರಹ ಖಚಿತಪಡಿಸುವುದು. ಅಂತಹ ಜೈವಿಕ ಪುರಾವೆಗಳು ನಾಶವಾಗದಂತೆ ತಡೆಯುವುದು, ಸಂಬಂಧಿತ ಸಾಕ್ಷ್ಯಗಳ ನಾಶದ ಸಾಧ್ಯತೆಯನ್ನು ಕಡಿಮೆ ಮಾಡುವುದು ಹಾಗೂ ಸಂತ್ರಸ್ತರಿಗೆ ಬೆದರಿಕೆ ಹಾಕುವುದರಿಂದ ಆರೋಪಿಗಳನ್ನು ತಡೆಯುವುದು ತಿದ್ದುಪಡಿಯ ಉದ್ದೇಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಅಪರಾಧಗಳಲ್ಲಿ ನಿರೀಕ್ಷಣಾ ಜಾಮೀನು ನಿಬಂಧನೆಗೆ ವಿನಾಯಿತಿಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರವು ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) (ಉತ್ತರ ಪ್ರದೇಶ) ಸೆಕ್ಷನ್ 438ರಲ್ಲಿ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ.

ಉತ್ತರ ಪ್ರದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಎಗ್ಗಿಲ್ಲದೇ ನಡೆಯುತ್ತಿವೆ. ದಲಿತ ಸಹೋದರಿಯರಿಬ್ಬರ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿದ್ದ ಆಘಾತಕಾರಿ ಪ್ರಕರಣ ಲಖಿಂಪುರ ಖೇರಿಯಲ್ಲಿ ನಡೆದಿತ್ತು.

ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಅಪ್ರಾಪ್ತೆಯನ್ನು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ ಅಪ್ರಾಪ್ತ ಯುವತಿಯು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ ಘಟನೆ ಕಳೆದವಾರವಷ್ಟೆ ಎಲ್ಲೆಡೆ ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180