ಸುಪ್ರೀಂ ಕೋರ್ಟ್‌ನಿಂದ ಪರಿಹಾರ ದೊರೆಯಲಿದೆ ಎಂದು ಭಾವಿಸಿ‌ದ್ದರೆ ಅದು ತಪ್ಪು: ಕಪಿಲ್‌ ಸಿಬಲ್‌ ವಿಷಾದ

Kapil sibal
 • ಎಷ್ಟೇ ಮಹತ್ವದ ತೀರ್ಪು ನೀಡಿದರೂ ಅದು ವಾಸ್ತವದಲ್ಲಿ ಜಾರಿಯಾಗುವುದಿಲ್ಲ: ಸಿಬಲ್
 • ಸಿಬಲ್ ಈ ರೀತಿ ಹೇಳಿಕೆ ನೀಡಿರುವುದು ನಿಜಕ್ಕೂ ದುರಾದೃಷ್ಟಕರ ಎಂದ ವಕೀಲರ ಸಂಘ

"ಸುಪ್ರೀಂಕೋರ್ಟ್ ಮೇಲೆ ನನಗೆ ಯಾವುದೇ ಭರವಸೆ ಉಳಿದಿಲ್ಲ. ಕೆಲ ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕೆಲವು ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ಮಾತ್ರ ವಹಿಸಲಾಗುತ್ತಿದೆ" ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಿಬಲ್, "ಸುಪ್ರೀಂಕೋರ್ಟ್‌ನಿಂದ ಪರಿಹಾರ ದೊರೆಯಲಿದೆ ಎಂದು ನೀವು ಭಾವಿಸಿದರೆ ಅದು ದೊಡ್ಡ ತಪ್ಪು. 50 ವರ್ಷಗಳ ಕಾಲ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ಈ ಮಾತು ಹೇಳುತ್ತಿದ್ದೇನೆ. ಮಹತ್ವದ ತೀರ್ಪು ನೀಡಿದರೂ ಅದು ವಾಸ್ತವಕ್ಕೆ ಹತ್ತಿರದಲ್ಲಿರುವುದಿಲ್ಲ" ಎಂದು ಸಿಬಲ್ ಹೇಳಿದ್ದಾರೆ.

ಸಿಬಲ್‌ ಮಾತಿನ ಮುಖ್ಯ ಅಂಶಗಳು

 • ಸುಪ್ರೀಂ ಕೋರ್ಟ್‌ ಪರಿಹಾರ ನೀಡುತ್ತದೆ ಎಂದು ಭಾವಿಸಿದ್ದರೆ ಅದು ದೊಡ್ಡ ತಪ್ಪು. 50 ವರ್ಷಗಳ ಅನುಭವದ ಮೇಲೆ ನಾನು ಈ ಮಾತು ಹೇಳುತ್ತಿದ್ದೇನೆ. 
 • ನೀವು ದೊಡ್ಡ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ. ಆದರೆ ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ನ್ಯಾಯಾಲಯ ಹೇಳುವುದೇ ಒಂದು, ತಳಮಟ್ಟದಲ್ಲಿ ನಡೆಯುವುದೇ ಇನ್ನೊಂದು. ಸುಪ್ರೀಂ ಕೋರ್ಟ್‌ ಉತ್ತಮ, ಪ್ರಗತಿಪರವಾದ ತೀರ್ಪುಗಳನ್ನು ನೀಡಿದೆ ಎನ್ನುತ್ತೀರಿ, ಆದರೆ ತಳಮಟ್ಟದಲ್ಲಿ ಏನಾಗಿದೆ ಹೇಳಿ?
 • ಸರ್ಕಾರಗಳು ಜನರನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ನಡೆಸಿಕೊಳ್ಳುವ ಸಂಸ್ಕೃತಿ ಇರುವ ಕಡೆ ಯಾವುದೇ ಸಂಸ್ಥೆ ಸ್ವತಂತ್ರವಾಗಿರಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಮತ್ತೆ ಬೇಕು ಎಂದು ಎದ್ದು ನಿಂತರೆ ಮಾತ್ರ ಸ್ವಾತಂತ್ರ್ಯ ಸಿಗುತ್ತದೆ. ಇಂದು ನಾವು ಸ್ವತಂತ್ರರಲ್ಲ, ಇದು ಭಾರತದ ವಾಸ್ತವ.
 • ನೀವು ಗೌಪ್ಯತೆಯ ತೀರ್ಪು ನೀಡಿದ್ದೀರಿ. ಆದರೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿ ನಿಮ್ಮ ಮನೆಗೆ ಬಂದಾಗ, ಗೌಪ್ಯತೆ ಎಲ್ಲಿ ಉಳಿಯುತ್ತದೆ? ಕಾಗದದ ಮೇಲೆ ಬರೆಯುವುದು ಬೇರೆ, ಅದನ್ನು ಕಾರ್ಯಗತಗೊಳಿಸುವುದು ಬೇರೆ.
 • ಈ ದೇಶದ ಅತ್ಯಂತ ಅಪಾಯಕಾರಿ ಸಂಸ್ಥೆ ಎಂದರೆ ಅದು ಜಾರಿ ನಿರ್ದೇಶನಾಲಯ. ಆದರೆ, ಆ ಸಂಸ್ಥೆ ಇಂದು ವೈಯಕ್ತಿಕ ಸ್ವಾತಂತ್ರ್ಯದ ಎಲ್ಲ ಗಡಿಗಳನ್ನೂ ಉಲ್ಲಂಘಿಸಿದೆ.
 • ಸುಪ್ರೀಂ ಕೋರ್ಟ್‌ನ ಮತ್ತೊಂದು ಸತ್ಯ ಏನೆಂದರೆ ಎಲ್ಲ ಸೂಕ್ಷ್ಮ ಪ್ರಕರಣಗಳು ಕೆಲವೇ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಹೋಗುತ್ತವೆ. ಬಳಿಕ ಅದರ ಫಲಿತಾಂಶ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ.
 • ರಾಜಿ ಪ್ರಕ್ರಿಯೆಗೊಳಗಾಗಿ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ನ್ಯಾಯಾಲಯದಲ್ಲಿ ವ್ಯವಸ್ಥೆ ಎಂಬುದು ಇರುವುದಿಲ್ಲ. ಯಾವ ಪ್ರಕರಣವನ್ನು ಯಾರು ಮತ್ತು ಯಾವಾಗ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸುವ ಕಡೆಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅಂತಹ ನ್ಯಾಯಾಲಯ ಎಂದಿಗೂ ಸ್ವತಂತ್ರವಾಗಿರಲು ಸಾಧ್ಯವಿಲ್ಲ. 
 • ನ್ಯಾಯಾಲಯದ ಆಚೆಗೆ ಅನೇಕ ಸಂಗತಿಗಳಿರುತ್ತವೆ ಎಂಬುದು ವಾಸ್ತವಾಂಶ. ಅವರು ಕೂಡ ಮನುಷ್ಯರೇ, ನಾವೆಲ್ಲರೂ ಮನುಷ್ಯರೇ… ನಾವು ಪ್ರಭಾವಕ್ಕೊಳಗಾಗುತ್ತೇವೆ. ಇಡೀ ವ್ಯವಸ್ಥೆಯನ್ನೇ ಹಿಡಿತಕ್ಕೆ ತೆಗೆದುಕೊಂಡಾಗ ಅದು ಪ್ರಕರಣವನ್ನು ನಿರ್ಧರಿಸುವವರ ಮೇಲೂ ಪ್ರಭಾವ ಬೀರುತ್ತದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಪರಿಹರಿಸಬೇಕಾಗಿದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಅನುಷ್ಠಾನಕ್ಕೆ ತರದೆ ಅವುಗಳನ್ನು ಕೇವಲ ವಿಶ್ಲೇಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
 • ಸಲಿಂಗಕಾಮ ಅಪರಾಧ ಎನ್ನುತ್ತಿದ್ದ ಐಪಿಸಿ ಸೆಕ್ಷನ್‌ 377ನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬಗ್ಗೆ ನಾವು ಮಾತನಾಡುತ್ತೇವೆ. ಏನಾಗುತ್ತಿದೆ ನೋಡಿ, ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆಯೇ? ಇಲ್ಲ. ಈ ದೇಶದಲ್ಲಿ ಮಹಿಳೆಯರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದೆಯೇ? ಇಲ್ಲ!
 • ಧರ್ಮ ಸಂಸದ್ ರೀತಿಯ ಭಾಷಣಗಳು ನಾವು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಆಶ್ಚರ್ಯಪಡುವಂತೆ ಮಾಡುತ್ತವೆ. ನಾವು ಈ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಮುಂದಿಟ್ಟಾಗ ಅದು ಏನು ಮಾಡಿತು? ಕನಿಷ್ಠ ಕ್ರಮ ತೆಗೆದುಕೊಂಡಿತೇ? ಯಾರನ್ನಾದರೂ ಬಂಧಿಸಲಾಗಿದೆಯೇ? ಹಾಗೊಂದು ವೇಳೆ ಆದರೂ, ಒಂದೆರಡು ದಿನಗಳಲ್ಲಿ ಅವರು ಜಾಮೀನು ಪಡೆಯುತ್ತಾರೆ.

ಸಿಬಲ್‌ ಹೇಳಿಕೆಗೆ ವಕೀಲರ ಸಂಘ ಖಂಡನೆ

ಕಪಿಲ್‌ ಸಿಬಲ್‌ ಅವರ ಈ ಹೇಳಿಕೆಗೆ ಅಖಿಲ ಭಾರತ ವಕೀಲರ ಸಂಘ ಖಂಡನೆ ವ್ಯಕ್ತಪಡಿಸಿದೆ. "ಕಪಿಲ್ ಸಿಬಲ್ ಒಬ್ಬ ಅನುಭವಿ, ಹಿರಿಯ ವಕೀಲರಾಗಿದ್ದಾರೆ. ಅವರು ಮಂಡಿಸಿದ್ದ ವಾದವನ್ನು ನ್ಯಾಯಾಂಗ ಒಪ್ಪಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶರು ಮತ್ತು ತೀರ್ಪುಗಳನ್ನು ಅಲ್ಲಗಳೆಯುವುದು ಅವರಿಗೆ ಯೋಗ್ಯವಲ್ಲ" ಎಂದಿದೆ.  

ಈ ಸುದ್ದಿ ಓದಿದ್ದೀರಾ?: ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ: ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

"ನ್ಯಾಯಾಂಗದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ತೀರ್ಪು ಬಂದಾಗ, ಆ ವ್ಯಕ್ತಿಯು ನ್ಯಾಯಾಧೀಶರು ಪಕ್ಷಪಾತಿ ಅಥವಾ ನ್ಯಾಯಾಂಗ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಧೀಶರನ್ನು ನಿಂದಿಸುವುದು ಅವಹೇಳನಕಾರಿಯಾಗಿದೆ. ಅದರಲ್ಲೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ ಅಧ್ಯಕ್ಷರೂ ಆಗಿದ್ದ ಕಪಿಲ್ ಸಿಬಲ್ ಅವರು ಈ ರೀತಿ ಹೇಳಿಕೆ ನೀಡಿರುವುದು ನಿಜಕ್ಕೂ ದುರಾದೃಷ್ಟಕರ" ಎಂದು ವಕೀಲರ ಸಂಘದ ಅಧ್ಯಕ್ಷ ಡಾ. ಆದೀಶ್ ಸಿ ಅಗರ್ವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
4 ವೋಟ್