ನೂಪುರ್ ಶರ್ಮಾ ಹೇಳಿಕೆ | ನಿರೂಪಕಿ ನಾವಿಕಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಆದೇಶ

navika kumarr
  • ನಾವಿಕಾ ಕುಮಾರ್‌ ವಿರುದ್ಧದ ವಿಚಾರಣೆಗೆ ತಡೆ ನೀಡುವಂತೆ ಮನವಿ 
  • ಉಳಿದ ಪ್ರತಿವಾದಿಗಳೂ ವಿಚಾರಣೆಗೆ ಹಾಜರಾಗಲಿ ಎಂದ ನ್ಯಾಯಾಲಯ

ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಿರೂಪಕಿ ನಾವಿಕಾ ಕುಮಾರ್‌ ಅವರ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ಪಶ್ಚಿಮಬಂಗಾಳ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ.

ನಾವಿಕಾ ಪರ ವಾದ ಮಂಡಿಸಿದ ಮುಕುಲ್‌ ರೋಹ್ಟಗಿ, ನಿರೂಪಕಿ ಏನನ್ನೂ ಹೇಳಲಿಲ್ಲ. ಬದಲಾಗಿ ಆಕೆ ಚರ್ಚೆಯ ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಯತ್ನಿಸಿದರು ಎಂದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮಬಂಗಾಳ ಸರ್ಕಾರ ಹೆಚ್ಚುವರಿ ಆಸಕ್ತಿ ತೋರುತ್ತಿರುವುದಕ್ಕೆ ರೋಹ್ಟಗಿ ಆಕ್ಷೇಪ ವ್ಯಕ್ತಪಡಿಸಿದರು.

ರೋಹ್ಟಗಿ ಅವರು ನಾವಿಕಾ ವಿರುದ್ಧದ ವಿಚಾರಣೆಗೆ ತಡೆ ನೀಡುವಂತೆ ಕೋರಿದಾಗ, ಉಳಿದ ಪ್ರತಿವಾದಿಗಳೂ ವಿಚಾರಣೆಗೆ ಹಾಜರಾಗಲಿ ಎಂದು ನ್ಯಾಯಮೂರ್ತಿಗಳು ಹೇಳಿದರು.  

ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸುವಂತೆ ಅಥವಾ ಒಂದು ರಾಜ್ಯಕ್ಕೆ ವರ್ಗಾಯಿಸುವಂತೆ ಕೋರಿ ನಾವಿಕಾ ಕುಮಾರ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಪಾತ್ರಾಚಲ್ ಭೂ ಹಗರಣ| ಶಿವಸೇನೆ ಸಂಸದ ಸಂಜಯ್‌ ರಾವತ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ

ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ನೂಪುರ್‌ ಶರ್ಮಾ ನೀಡಿದ್ದ ಹೇಳಿಕೆ ದೇಶದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದರಿಂದಾಗಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ವಕ್ತಾರೆ ಸ್ಥಾನದಿಂದ ಬಿಜೆಪಿ ವಜಾಗೊಳಿಸಿತ್ತು. ದೇಶದಲ್ಲಿ ಉಲ್ಬಣಗೊಂಡಿರುವ ಎಲ್ಲ ಸಮಸ್ಯೆಗಳಿಗೆ ನೂಪುರ್‌ ಶರ್ಮಾ ಅವರೇ ನೇರ ಕಾರಣ ಎಂದು ಸುಪ್ರೀಂಕೋರ್ಟ್‌ ಛೀಮಾರಿ ಹಾಕಿ, ಸಾರ್ವಜನಿಕರ ಕ್ಷಮೆಯಾಚಿಸುವಂತೆ ಸೂಚಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180