ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್‌ ಭಾರತದ ಅತ್ಯಂತ ಶ್ರೀಮಂತ ಮಹಿಳೆ

  • ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಹಿಂದಿಕ್ಕಿದ ಗುಜರಾತ್‌ನ ಫಲ್ಗುಣಿ ನಾಯರ್‌
  • ನೈಕಾ ಸಂಸ್ಥಾಪಕಿಯ ಸಂಪತ್ತು ಕಳೆದ ಒಂದು ವರ್ಷದಲ್ಲಿ ಶೇ. 345ರಷ್ಟು ಏರಿಕೆ

ಭಾರತದ ಇ-ಕಾಮರ್ಸ್‌ ಕಂಪನಿ ನೈಕಾದ ಸಂಸ್ಥಾಪಕಿ ಫಲ್ಗುಣಿ ನಾಯರ್‌ ಭಾರತದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಬುಧವಾರ ಅನಾವರಣಗೊಂಡ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2022ರ ಪ್ರಕಾರ, ಫಲ್ಗುಣಿ ಅವರು 38,700 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಈ ಮೂಲಕ ಅವರು ಭಾರತದ ಅಗ್ರ 100 ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. ಫಲ್ಗುಣಿ ನಾಯರ್‌ ಮತ್ತು ಅವರ ಕುಟುಂಬದ ಸಂಪತ್ತು ಕಳೆದ ಒಂದು ವರ್ಷದಲ್ಲಿ ಶೇ. 345ರಷ್ಟು ಹೆಚ್ಚಾಗಿದೆ.

ಐಐಎಫ್‌ಎಲ್‌ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ, 59 ವರ್ಷದ ಉದ್ಯಮಿ ರೇಖಾ ಜುಂಜುನ್‌ವಾಲಾ ಅವರು ಎಡರನೇ ಸ್ಥಾನದಲ್ಲಿದ್ದಾರೆ. ರೇಖಾ ಅವರ ಒಟ್ಟು ಆಸ್ತಿ ಮೌಲ್ಯ 37,200 ಕೋಟಿ ರೂ. ಉಳಿದಂತೆ ಪಟ್ಟಿಯಲ್ಲಿರುವ ಇತರ ಮಹಿಳೆಯರಲ್ಲಿ ಗೋದ್ರೇಜ್‌ನ ಸ್ಮಿತಾ ವಿ ಕೃಷ್ಣ (32,000 ಕೋಟಿ ರೂ), ಜೊಹೊ ಕಾರ್ಪೊರೇಷನ್‌ನ ರಾಧಾ ವೆಂಬು (30,500 ಕೋಟಿ ರೂ) ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ (24,800 ಕೋಟಿ ರೂ) ಮತ್ತು ಇತರರು ಸೇರಿದ್ದಾರೆ.

ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌-ಶಾ ಅವರನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ, ಸ್ವಯಂ ನಿರ್ಮಿತ ಭಾರತೀಯ ಮಹಿಳೆ ಎಂಬ ಫಲ್ಗುಣಿ ಕೀರ್ತಿಗೆ ಪಾತ್ರರಾಗಿದ್ದಾರೆ.

ಫಲ್ಗಣಿ ನಾಯರ್ ಅವರು ಮಾಜಿ ಬ್ಯಾಂಕ್ ಅಧಿಕಾರಿಯಾಗಿದ್ದವರು. ತಮ್ಮ 50ನೇ ವಯಸ್ಸಿನಲ್ಲಿ ಉದ್ಯಮ ಕ್ಷೇತ್ರಕ್ಕೆ ಪದಾಪರ್ಣೆ ಮಾಡಿದವರು. 2012ರಲ್ಲಿ ಇ-ಕಾಮರ್ಸ್ ಉದ್ಯಮ ಆರಂಭಿಸಿದ ನಾಯರ್, ʻನೈಕಾʼ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್‌ನ ಮೂಲಕ ಸೌಂದರ್ಯ ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳ ಮಾರಾಟ ನಡೆಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ?: ಸಿದ್ದರಾಮಯ್ಯ ಕುಹಕ

ಮೂಲತಃ ಗುಜರಾತಿನವರಾದ ಫಲ್ಗುಣಿ ಅವರು ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದು ಬ್ಯಾಂಕ್‌ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ನೈಕಾ ಉದ್ಯಮವನ್ನು ಪ್ರಾರಂಭಿಸುವ ಮೊದಲು ಅವರು ಕೋಟಕ್‌ ಮಹೀಂದ್ರಾ ಕ್ಯಾಪಿಟಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ರೋಶಿನಿ ನಾಡರ್‌ ಮಲ್ಹೋತ್ರಾ ಶ್ರೀಮಂತ ಮಹಿಳೆ: ಕೋಟಕ್‌ ಹುರುನ್‌

ಕೋಟಕ್‌ ಪ್ರೈವೇಟ್‌ ಬ್ಯಾಂಕಿಂಗ್‌ ಹುರುನ್‌ ಜುಲೈನಲ್ಲಿ ಬಿಡುಗಡೆ ಮಾಡಿದ್ದ ಭಾರತದ ಪ್ರಮುಖ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಅಧ್ಯಕ್ಷೆ ರೋಶಿನಿ ನಾಡರ್‌ ಮಲ್ಹೋತ್ರಾ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದರು. 2021 ಡಿಸೆಂಬರ್‌ 31 ಅವಧಿಯಲ್ಲಿ ಭಾರತದ ಮಹಿಳಾ ಉದ್ಯಮಗಳು ಹೊಂದಿರುವ ಸಂಪತ್ತಿನ ಕುರಿತು ಕೋಟಕ್‌ ಹುರುನ್‌ ಪಟ್ಟಿ ಬಿಡುಗಡೆ ಮಾಡಿತ್ತು.

ಮಹಿಳೆಯರ ಸೌಂದರ್ಯ ಮತ್ತು ಫ್ಯಾಷನ್‌ ಉತ್ಪನ್ನಗಳ ಮಾರಾಟ ಉದ್ಯಮದಲ್ಲಿ ಪರಿಚಿತ ಹೆಸರಾಗಿರುವ ʼನೈಕಾʼದ ಫಲ್ಗುಣಿ ನಾಯರ್‌ ಅವರು ಬಯೋಕಾನ್‌ನ ಕಿರಣ್‌ ಮಜುಂದಾರ್‌ ಶಾ ಅವರನ್ನು ಹಿಂದಿಕ್ಕಿದ್ದರು. ಈ ಹೊಸ ಪಟ್ಟಿಯಲ್ಲಿ ಇಪ್ಪತ್ತೈದು ಹೊಸಬರು ಸ್ಥಾನ ಪಡೆದಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್