ಒಡಿಶಾ | ವಿದ್ಯಾರ್ಥಿನಿಯನ್ನು ಚುಂಬಿಸುವಂತೆ ವಿದ್ಯಾರ್ಥಿಗೆ ಒತ್ತಡ; ರ್‍ಯಾಗಿಂಗ್‌ ಆರೋಪದಲ್ಲಿ ಐವರ ಬಂಧನ

  • ಚುಂಬಿಸುವಂತೆ ವಿದ್ಯಾರ್ಥಿನಿಯನ್ನು ಒತ್ತಾಯಿಸಿದ ವಿದ್ಯಾರ್ಥಿಗಳು
  • ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿನಿಗೆ ರ್‍ಯಾಗಿಂಗ್‌

ಹೊಸದಾಗಿ ಕಾಲೇಜಿಗೆ ಸೇರಿಕೊಂಡಿರುವ ವಿದ್ಯಾರ್ಥಿನಿಗೆ ಮತ್ತೊಬ್ಬ ವಿದ್ಯಾರ್ಥಿಯನ್ನು ಚುಂಬಿಸುವಂತೆ ಬಲವಂತಪಡಿಸಿ ರ್‍ಯಾಗಿಂಗ್‌ ಮಾಡಿದ ಐವರು ವಿದ್ಯಾರ್ಥಿಗಳನ್ನು ಒಡಿಶಾದಲ್ಲಿ ಬಂಧಿಸಲಾಗಿದೆ.

ಚುಂಬಿಸುವಂತೆ ವಿದ್ಯಾರ್ಥಿಗಳು ವಿದ್ಯಾರ್ಥಿನಿಗೆ ಒತ್ತಡ ಹೇರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳ ಮೇಲೆ ಬಂಧಿಸಲಾಗಿದೆ.

Eedina App

ಕಳೆದ ತಿಂಗಳು ಸರ್ಕಾರಿ ಕಾಲೇಜಿಗೆ ಸೇರಿದ್ದ ಪ್ರಥಮ ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಮತ್ತೊಬ್ಬ ವಿದ್ಯಾರ್ಥಿಗೆ ಬಲವಂತಪಡಿಸಿ ಚುಂಬಿಸಲು ಹೇಳಿದ್ದರು. ಆ ವಿಡಿಯೋ ಸದ್ಯ ವೈರಲ್ ಆಗಿದೆ. ವಿರೋಧಿಸಿ ಸ್ಥಳದಿಂದ ಹೊರಡಲು ಮುಂದಾಗಿದ್ದ ವಿದ್ಯಾರ್ಥಿನಿಯನ್ನು ಬಲವಂತವಾಗಿ ಯುವಕನೊಬ್ಬ ಎಳೆದು ಕೂರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.  

ಜೊತೆಗೆ, ಚುಂಬಿಸಲು ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗೂ ಕೈಯಲ್ಲಿ ದೊಣ್ಣೆ ಹಿಡಿದಿದ್ದ ಆರೋಪಿ ಕಪಾಳಮೋಕ್ಷ ಮಾಡಿದ್ದಾನೆ. ಸುತ್ತ ನಿಂತಿದ್ದ ಇತರ ವಿದ್ಯಾರ್ಥಿಗಳು ಅವರನ್ನು ವಿರೋಧಿಸದೆ ನಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಸುದ್ದಿ ಓದಿದ್ದೀರಾ? ತೆಲಂಗಾಣ ಹಾಸ್ಟೆಲ್‌ನಲ್ಲಿ ರ್‍ಯಾಗಿಂಗ್; ಓರ್ವ ವಿದ್ಯಾರ್ಥಿಗೆ 12 ಮಂದಿ ಯುವಕರಿಂದ ಹಲ್ಲೆ

ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಶಿಸ್ತು ಸಮಿತಿ ಮತ್ತು 'ಆ್ಯಂಟಿ ರ್‍ಯಾಗಿಂಗ್‌' ಸೆಲ್ ಐವರನ್ನು ಕಾಲೇಜಿನಿಂದ ಅಮಾನತು ಮಾಡಲು ನಿರ್ಧರಿಸಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

“ಐವರು ವಿದ್ಯಾರ್ಥಿಗಳನ್ನು ರ್‍ಯಾಗಿಂಗ್‌, ಪೋಕ್ಸೊ ಕಾಯ್ದೆ ಹಾಗೂ ಐಟಿ ಕಾಯ್ದೆಯಡಿ ಬಂಧಿಸಲಾಗಿದೆ. ಬಂಧಿತ ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆ ಹೈದರಾಬಾದ್‌ನ ಕಾಲೇಜೊಂದರಲ್ಲಿ ಹೊಸದಾಗಿ ಕಾಲೇಜಿಗೆ ಸೇರಿಕೊಂಡಿದ್ದ ವಿದ್ಯಾರ್ಥಿಗೆ ದೈಹಿಕವಾಗಿ ಹಿಂಸಿಸಿದ ಘಟನೆ ಹೀಗೆ ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕ, ಸಾರ್ವಜನಿಕ ವಲಯದಿಂದ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app