ಆಂಟ್ರಿಕ್ಸ್- ದೇವಾಸ್ ಒಪ್ಪಂದ| ನಿರ್ಮಲಾ ಸೀತಾರಾಮನ್‌ ಸೇರಿ 11 ಜನರ ವಿರುದ್ಧ ನಿರ್ಬಂಧ ಹೇರುವಂತೆ ಅಮೆರಿಕದಲ್ಲಿ ಅರ್ಜಿ

nirmala sitharaman
  • ಆಂಟ್ರಿಕ್ಸ್‌ -ದೇವಾಸ್‌ ಒಪ್ಪಂದ ಮುರಿದಿದ್ದ ಭಾರತ ಸರ್ಕಾರ
  • ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿದ ಆಂಟ್ರಿಕ್ಸ್ ಸಮರ

ಭಾರತದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹನ್ನೊಂದು ಭಾರತೀಯ ಅಧಿಕಾರಿಗಳ ವಿರುದ್ಧ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ಹೇರುವಂತೆ ಒತ್ತಾಯಿಸಿ ಭಾರತೀಯ ಮೂಲದ ರಾಮಚಂದ್ರನ್‌ ವಿಶ್ವನಾಥನ್‌ ಅವರು ಅಮೆರಿಕದ ವಿದೇಶಾಂಗ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌, ಆಂಟ್ರಿಕ್ಸ್‌ ಸಿಇಒ ರಾಕೇಶ್‌ ಶಶಿಭೂಷಣ್‌, ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರು, ಆಶಿಶ್‌ ಪರೀಕ್‌ (ಸಿಬಿಐ), ಸಂಜಯ್‌ ಕುಮಾರ್‌ ಮಿಶ್ರಾ, ಆರ್‌ ರಾಜೇಶ್‌, ಎ ಸಾದಿಕ್ ಮೊಹಮ್ಮದ್ ನೈಜ್ನಾರ್ ಹೆಸರನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅರ್ಜಿ ಸಲ್ಲಿಕೆಯು ಭಾರತ ಸರ್ಕಾರ ಮತ್ತು ದೇವಾಸ್‌ ನಡುವೆ ನಡೆಯುತ್ತಿರುವ ಹೋರಾಟದ ಭಾಗವಾಗಿದೆ. 

2005ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ಘಟಕ ಆಂಟ್ರಿಕ್ಸ್‌ ಮತ್ತು ದೇವಾಸ್‌ ಮಲ್ಟಿಮೀಡಿಯಾ ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು. ಇದರ ಪ್ರಕಾರ ಆಂಟ್ರಿಕ್ಸ್‌ ಸಂಸ್ಥೆಯು ದೇವಾಸ್‌ ಮಲ್ಟಿಮೀಡಿಯಾ ಸಂಸ್ಥೆಗೆ ಎರಡು ಉಪಗ್ರಹಗಳನ್ನು ನಿರ್ಮಿಸಿ, ಉಡಾವಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿತ್ತು. ನಂತರದಲ್ಲಿ ಈ ಒಪ್ಪಂದ ರದ್ದಾಯಿತು. ಈ ಹಿನ್ನೆಲೆಯಲ್ಲಿ ಆಂಟ್ರಿಕ್ಸ್‌ ಸಂಸ್ಥೆ ಸುಮಾರು 9,000 ಕೋಟಿ ರೂಪಾಯಿ (1.2 ಬಿಲಿಯನ್‌ ಡಾಲರ್‌) ದಂಡ ಪಾವತಿಸುವಂತೆ ಅಮೆರಿಕ ನ್ಯಾಯಾಲಯ ಆದೇಶಿಸಿತ್ತು. 

ಯುಪಿಎ ಸರ್ಕಾರವು ದೇವಾಸ್‌ ಮತ್ತು ಇಸ್ರೋ ನಡುವಿನ ಒಪ್ಪಂದವನ್ನು ರದ್ದುಗೊಳಿಸಿತು. ಹಾಗಾಗಿ, ಹೂಡಿಕೆದಾರರು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಪ್ರಯತ್ನಿಸಿದರು. ಆದರೆ, ಭಾರತ ಸರ್ಕಾರ ಅದಕ್ಕೆ ಮುಂದಾಗಲಿಲ್ಲ. ಆದರೆ, ದೇವಾಸ್‌ ಸಂಸ್ಥಾಪಕ ವಿಶ್ವನಾಥ್‌ ಅವರು ಕೆನಡಾದಲ್ಲಿರುವ ಏರ್‌ ಇಂಡಿಯಾ ಆಸ್ತಿ ಮತ್ತು ಫ್ರಾನ್ಸ್‌ನಲ್ಲಿರುವ ಭಾರತೀಯ ಸರ್ಕಾರಿ ಸ್ವಾಮ್ಯದ ಆಸ್ತಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. 

ಅಮೆರಿಕನ್ ಗ್ಲೋಬಲ್ ಮ್ಯಾಗ್ನಿಟ್ಸ್ಕಿ ಮಾನವ ಹಕ್ಕುಗಳ ಹೊಣೆಗಾರಿಕೆ ಕಾಯಿದೆಯಡಿ ಈಗ ಸಲ್ಲಿಸಿರುವ ಅರ್ಜಿಯು ಭಾರತ ಸರ್ಕಾರವನ್ನು ಸಂಧಾನಕ್ಕೆ ಕರೆಯುವ ಮತ್ತೊಂದು ಪ್ರಯತ್ನವಾಗಿದೆ. ಅಮೆರಿಕನ್ ಗ್ಲೋಬಲ್ ಮ್ಯಾಗ್ನಿಟ್ಸ್ಕಿ ಕಾಯಿದೆಯು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ವಿದೇಶಿ ಅಧಿಕಾರಿಗಳ ಅಮೆರಿಕ ಪ್ರವೇಶ ನಿರ್ಬಂಧಿಸಲು ಅಧಿಕಾರ ನೀಡುತ್ತದೆ.

ಈ ಸುದ್ದಿ ಓದಿದ್ದೀರಾ?: ರಾಜಸ್ಥಾನ| ಪ್ರತಿಭಟನಾನಿರತ ಭೀಮ್ ಆರ್ಮಿ ಕಾರ್ಯಕರ್ತರ ಮೇಲೆ ಪೋಲಿಸ್ ಲಾಠಿ ಚಾರ್ಜ್

ಭಾರತ ಸರ್ಕಾರವು ಮಾನವ ಹಕ್ಕುಗಳನ್ನು ಎಷ್ಟು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎಂಬುದನ್ನು ಸಾಬೀತು ಪಡಿಸಲು ವಿಶ್ವನಾಥನ್‌ ಅವರು, ತಮ್ಮ ಬಂಧನ ಮತ್ತು ಹಸ್ತಾಂತರಕ್ಕಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್‌ ಪೊಲೀಸ್‌ ಸಂಸ್ಥೆ (The International Criminal Police Organization)ಗೆ ರೆಡ್‌ ನೋಟಿಸ್‌ (ಆರೋಪಿಯ ಹಸ್ತಾಂತರ, ಶರಣಾಗತಿ ಅಥವಾ ಅಂಥದ್ದೇ ಕಾನೂನು ಕ್ರಮಕ್ಕೆ ಬೇಕಾಗಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ವಿಶ್ವದಾದ್ಯಂತ ಜಾರಿಗೊಳಿಸಿರುವ ವಿಧಾನ) ನೀಡಿದೆ. ಅಲ್ಲದೆ, ಉದ್ದೇಶಪೂರ್ವಕವಾಗಿ ವಂಚನೆ, ಅಪರಾಧ ಕ್ರಮದ ನಕಲಿ ಹಕ್ಕುಗಳನ್ನು ಮುಂದಿಟ್ಟಿದೆ ಎಂದೂ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪೂರಕವಾಗಿ ಜುಲೈನಲ್ಲಿ ಅಮೆರಿಕ ಸೆನೆಟರ್‌ ಚಕ್‌ ಗ್ರಾಸ್ಲೆ ಬರೆದ ಪತ್ರವನ್ನೂ ಉಲ್ಲೇಖಿಸಿ, ಅಮೆರಿಕದ ಅಟಾರ್ನಿ ಜನರಲ್‌ ಮೆರಿಕ್‌ ಗಾರ್ಲ್ಯಾಂಡ್‌ ಅವರಿಗೆ ಪತ್ರ ಕಳಿಸಿದ್ದಾರೆ.

ಭಾರತ ಮತ್ತು ಇತರೆ ವಿದೇಶಿ ಸರ್ಕಾರಗಳು ಪರಸ್ಪರ ಕಾನೂನು ನೆರವು ಒಪ್ಪಂದಗಳು ಮತ್ತು ಇಂಟರ್‌ಪೋಲ್‌ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್