ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ | ನ.30ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

  • ಪದವೀಧರರ ಶಿಕ್ಷಕ ವೃದಂದ ಹುದ್ದೆಗಳಿಗೆ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ
  • ನೇಮಕಾತಿಗೆ ಸಂಬಂಧಿಸಿದಂತೆ 1:1 ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಶಿಕ್ಷಣ ಇಲಾಖೆ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ವಿಸ್ತರಿಸಿ ಅವಕಾಶ ನೀಡಿದೆ.

ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯ ಕುರಿತು ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಆಕ್ಷೇಪಣೆ ಸಲ್ಲಿಸಲು 2022 ನವೆಂಬರ್ 19ರಿಂದ ನವೆಂಬರ್ 23ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಅಭ್ಯರ್ಥಿಗಳು ಮತ್ತು ಪೋಷಕರ ಒತ್ತಾಯದ ಮೇರೆಗೆ ಈಗ ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು 2022ರ ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.

6 ರಿಂದ 8ನೇ ತರಗತಿಯ ಪದವೀಧರರ ಪ್ರಾಥಮಿಕ ಶಿಕ್ಷಕ ವೃದಂದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:1ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ನವೆಂಬರ್ 18ರಂದು ಪ್ರಕಟವಾಗಿತ್ತು.

ಆಕ್ಷೇಪಣೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಮತ್ತು ನೇಮಕಾತಿ ಪ್ರಾಧಿಕಾರದ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ. ಹಾಗೆಯೇ ಕೊನೆಯ ದಿನಾಂಕದ ನಂತರ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

15,000 ಶಿಕ್ಷಕರ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಬರೆದು, 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 13,363 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದ 1,624 ಹುದ್ದೆಗಳಿಗೆ ಯಾವುದೇ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗದ ಕಾರಣ ಆ ಹುದ್ದೆಗಳು ಖಾಲಿ ಉಳಿದಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿತ್ತು. ಆ ಭಾಗದಲ್ಲಿ 4,187 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ನಾರ್ವೆಯ ಅಗ್ದರ್ ವಿವಿ ಜೊತೆ ಮಂಗಳೂರು ವಿವಿ ಒಪ್ಪಂದ

ಇಂಗ್ಲಿಷ್ ಭಾಷೆಯಲ್ಲಿ ಖಾಲಿ ಇದ್ದ 1,807 ಹುದ್ದೆಗಳಿಗೆ 1,768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಖಾಲಿ ಇದ್ದ 6,500 ಹುದ್ದೆಗಳಿಗೆ 5,550 ಅಭ್ಯರ್ಥಿಗಳು, ಸಮಾಜ ವಿಷಯದಲ್ಲಿ 4,693 ಹುದ್ದೆಗಳಿಗೆ 4,521 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಇನ್ನು, ಜೀವ ವಿಜ್ಞಾನದ 2,000 ಹುದ್ದೆಗಳಿಗೆ 1,624 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇನ್ನು 1,624 ಹುದ್ದೆಗಳು ಖಾಲಿ ಉಳಿದಿವೆ. ಹಾಗಾಗಿ ಆಕ್ಷೇಪಣೆ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ.

ಪ್ರಥಮ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಮತ್ತು 19 ಇಂಜಿನಿಯರಿಂಗ್ ಪದವೀಧರರು ಆಯ್ಕೆಯಾಗಿದ್ದಾರೆ. ಜೀವವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ಶಿಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180