ತೀಸ್ತಾ ಬಂಧನ | ಅಹಮದ್‌ ಪಟೇಲ್ ಸದಾ ಮೋದಿ ಪರ ವಕಾಲತ್ತು ವಹಿಸುತ್ತಿದ್ದರು: ಪತ್ರಕರ್ತ ಕಿಂಗ್‌ಶುಕ್‌ ನಾಗ್‌

Ahmed Patel
  • ಸದಾ ನರೇಂದ್ರ ಮೋದಿ ಪರವಾಗಿದ್ದ ಅಹ್ಮದ್ ಪಟೇಲ್ 
  • ಲೇಖನದಲ್ಲಿ ವಿವರ ನೀಡಿದ ಪತ್ರಕರ್ತ ಕಿಂಗ್‌ಶುಕ್‌ ನಾಗ್‌

2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ಸಂದರ್ಭ ಅಧಿಕಾರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉರುಳಿಸಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಪಿತೂರಿ ನಡೆಸಿದ್ದರು, ಅದಕ್ಕೆ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಸೂಚನೆಯಂತೆ ಅಹ್ಮದ್‌ ಪಟೇಲ್‌ ಅವರು ಕುಮ್ಮಕ್ಕು ನೀಡಿದ್ದರು ಎನ್ನುವ ಆರೋಪ ಸುಳ್ಳು ಎಂದು 'ಟೈಮ್ಸ್‌ ಆಫ್‌ ಇಂಡಿಯಾ'ದ ಸಂಪಾದಕರಾಗಿದ್ದ ಪತ್ರಕರ್ತ ಕಿಂಗ್‌ಶುಕ್‌ ನಾಗ್‌ ಹೇಳಿದ್ದಾರೆ.

'ದಿ ವೈರ್‌'ಗೆ ಅವರು ಬರೆದ ಲೇಖನದಲ್ಲಿ, ಅಹ್ಮದ್‌ ಪಟೇಲ್‌ರ ಮೇಲಿನ ಆರೋಪ "ಹಾಸ್ಯಾಸ್ಪದ" ಎಂದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಬರೆದಿರುವ ಅವರು, ಗುಜರಾತ್‌ ಗಲಭೆಯ ಸಂದರ್ಭ ಅಹ್ಮದ್‌ ಪಟೇಲ್‌ ಅವರನ್ನು ನರೇಂದ್ರ ಮೋದಿ ಪರವಾಗಿ ಮಾತನಾಡುವ ವ್ಯಕ್ತಿಯೆಂದೇ ಕಾಂಗ್ರೆಸ್ ವಲಯದಲ್ಲಿ ನೋಡಲಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪಟೇಲ್ ನಿಧನದ 20 ತಿಂಗಳ ನಂತರ ಆರೋಪಿಸುವುದು ರಾಜಕೀಯ ಸೇಡು ಎಂದ ಪಿ ಚಿದಂಬರಂ

“ಅಹ್ಮದ್ ಪಟೇಲ್ ಅವರು ಯಾವಾಗಲೂ ನರೇಂದ್ರ ಮೋದಿಯವರ ಪರವಾಗಿದ್ದರು ಎಂದೇ ಕುಖ್ಯಾತಿ ಗಳಿಸಿದ್ದರು. ನಿಸ್ಸಂಶಯವಾಗಿ ಅವರು ಮೋದಿ ಅವರನ್ನು  ರಕ್ಷಿಸುವ ಕಾಂಗ್ರೆಸ್ ನಾಯಕರಾಗಿದ್ದರು. ಅವರನ್ನು ಸಮರ್ಥಿಸಿಕೊಂಡು ಬೆನ್ನ ಹಿಂದೆ ನಿಂತಿದ್ದರು. ಸಾಮಾಜಿಕ ಕಾರ್ಯಕರ್ತರ ಸಮುದಾಯದಲ್ಲಿ ಈ ಭಾವನೆ ಗಾಢವಾಗಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಸಲಹೆಗಾರರಾಗಿ ಪಟೇಲ್‌ ಅವರ ಸಲಹೆಯನ್ನು ಸೋನಿಯಾ ಗಾಂಧಿ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು ಎನ್ನುವುದು ನನ್ನ ಭಾವನೆ" ಎಂದು ಕಿಂಗ್‌ಶುಕ್‌ ಬರೆದಿದ್ದಾರೆ.  

“ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2002ರ ಗುಜರಾತ್ ಗಲಭೆಗಳಾದ ಸುಮಾರು ಎರಡು ವರ್ಷಗಳ ನಂತರ 2004ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಗುಜರಾತ್‌ ಸೇರಿ ವಿವಿಧ ಗಲಭೆ ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿರುವ ಬಗ್ಗೆ 2007-08ರಲ್ಲಿ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಾಗ ಕಾಂಗ್ರೆಸ್ ನ್ಯಾಯಾಲಯದ ಪರವಾಗಿ ನಿಂತಿತ್ತು. ಈ ಸಂದರ್ಭದಲ್ಲಿ ಬಹುತೇಕ ಪ್ರಕರಣಗಳು ಸುಪ್ರೀಂಕೋರ್ಟ್‌ನ ಆದೇಶದ ಮೇಲೆ ತನಿಖೆಯಾಗಿದ್ದವು. ಅದರಿಂದ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಅಸಮಧಾನವಿತ್ತು. ಆದರೆ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಮುಖ ಪಾತ್ರ ವಹಿಸಿತ್ತು. 2002ರಿಂದಲೇ ಈ ಪ್ರಕರಣದಲ್ಲಿ ಆಯೋಗ ಪ್ರಮುಖ ಪಾತ್ರವಹಿಸಿತ್ತು. ಅದರ ಜೊತೆಗೆ ತೀಸ್ತಾ ಸೆಟಲ್‌ವಾಡ್‌ ಕೂಡ ಮುಖ್ಯವಾಗಿ ಹೋರಾಡಿದ್ದರು. ಆದರೆ ಕಾಂಗ್ರೆಸ್ ಎಲ್ಲೂ ಚಿತ್ರಣದಲ್ಲೇ ಇರಲಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಆದರೆ ಗಲಭೆ ಪ್ರಕರಣಗಳು ಮತ್ತು ನಕಲಿ ಎನ್‌ಕೌಂಟರ್‌ಗಳಂತಹ ವಿಚಾರದಲ್ಲಿ ನರೇಂದ್ರ ಮೋದಿ ಅವರನ್ನು ಉಗ್ರವಾಗಿ ಗುರಿಯಾಗಿಸುವುದು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಲಿದೆ ಎಂಬ ನಂಬಿಕೆಯನ್ನು ಅಹ್ಮದ್‌ ಪಟೇಲ್‌ ಕಾಂಗ್ರೆಸ್‌ನಲ್ಲಿ ಮೂಡಿಸಿದ್ದರು. 2007ರ ಗುಜರಾತ್ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು 'ಸಾವಿನ ಸರದಾರ' ಎಂದು ವಾಗ್ದಾಳಿ ನಡೆಸಿದ್ದರು. ಆದರೆ ಇದನ್ನೇ ತನ್ನ ಪರವಾಗಿ ಬದಲಿಸುವಲ್ಲಿ ಮೋದಿ ಯಶಸ್ವಿಯಾಗಿದ್ದರು. ನಂತರ ಕಾಂಗ್ರೆಸ್‌ ಮೋದಿ ಅವರ 'ಉತ್ತಮ ಆಡಳಿತಗಾರ' ಎನ್ನುವ ಕಲ್ಪನೆಯನ್ನು ಹುಸಿ ಮಾಡಲು ಪ್ರಯತ್ನಿಸಿತೇ ವಿನಾ, ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅವರನ್ನು ಟೀಕಿಸಲು ಪ್ರಯತ್ನಿಸಲಿಲ್ಲ. ಇದೇ ಕಾರಣದಿಂದ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿಯವರು ಹರೇನ್‌ ಪಾಂಡ್ಯ ಹತ್ಯಾ ಪ್ರಕರಣವನ್ನು ಪುನರ್‌ಪರಿಶೀಲಿಸಲು ಪ್ರಯತ್ನಿಸಲಿಲ್ಲ.

“ನೀವು ಗುಜರಾತ್‌ನ ಮೋದಿ ನೇತೃತ್ವದ ಸರ್ಕಾರದ ಪರವಾಗಿರುವ ನಾಯಕನಾಗಿ ಏಕೆ ಕಾಣಿಸುತ್ತೀರಿ ಎಂದು ಒಮ್ಮೆ ನಾನು ಅಹ್ಮದ್ ಪಟೇಲ್ ಅವರನ್ನು ಕೇಳಿದೆ. ಅವರು ಉತ್ತರ ನೀಡಲು ಕೆಲವು ಕ್ಷಣ ಕಾಲ ಬೆಚ್ಚಿಬಿದ್ದರು. ನಂತರ ಉತ್ತರಿಸಿದ ಅವರು, "ಗುಜರಾತ್‌ನಲ್ಲಿ ಪರಿಸ್ಥಿತಿ ಬದಲಾಗಿದೆ" ಎಂದರು. "ಪರಿಣಾಮ ಎದುರಿಸದೆ ಮೋದಿ ಅವರನ್ನು ಗುಜರಾತ್‌ ಮುಖ್ಯಮಂತ್ರಿಯಾಗಿ ನಿಯಂತ್ರಿಸುವುದು ಸಾಧ್ಯವಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು. ಗುಜರಾತ್‌ನಲ್ಲಿ ಮುಸ್ಲಿಂ ನಾಯಕರೊಬ್ಬರು ಚುನಾವಣೆ ಗೆಲ್ಲುವ ಸ್ಥಿತಿಯಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು” ಎಂದು ಕಿಂಗ್‌ಶುಕ್‌ ವಿವರಿಸಿದ್ದಾರೆ. 

"ಸೋನಿಯಾ ಗಾಂಧಿ ಅವರ ಕಣ್ಣು ಮತ್ತು ಕಿವಿ ಎನ್ನುವಷ್ಟು ಆಪ್ತರಾಗಿದ್ದ ಪಟೇಲ್, 1977ರಲ್ಲಿ ಗುಜರಾತ್‌ನ ಭರೂಚ್‌ನಿಂದ ಲೋಕಸಭಾ ಸಂಸದರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಆದರೆ 1993ರಲ್ಲಿ ಅವರು ರಾಜ್ಯಸಭೆಗೆ ಬಂದರು. ಅವರು ರಾಜ್ಯಸಭೆಯಲ್ಲಿ ಐದು ಅವಧಿಗೆ ಮತ್ತು ಲೋಕಸಭೆಯಲ್ಲಿ ಮೂರು ಅವಧಿಗೆ ಸೇವೆ ಸಲ್ಲಿಸಿದರು. ಆದರೆ 2017ರಲ್ಲಿ ಗುಜರಾತ್‌ನ ಹಲವಾರು ಕಾಂಗ್ರೆಸ್ ಶಾಸಕರು ಗಾಂಧಿನಗರದಿಂದ ಅಹಮದಾಬಾದ್‌ಗೆ ಸ್ಥಳಾಂತರಗೊಂಡರು. ಈ ಕಾಂಗ್ರೆಸ್ ಶಾಸಕರು ರಾಜ್ಯಸಭೆಗೆ ಮತ್ತೊಂದು ಅವಧಿಗೆ ಸ್ಪರ್ಧಿಸಿದ್ದ ಪಟೇಲ್ ವಿರುದ್ಧ ಮತ ಚಲಾಯಿಸಲು ಹವಣಿಸುತ್ತಿದ್ದಾರೆ ಎಂದು ಈ ಬದಲಾವಣೆಯಾಗಿತ್ತು. ಅಹ್ಮದ್ ಪಟೇಲ್ ಅವರು ಪ್ರಬಲ ಕಾಂಗ್ರೆಸ್ ನಾಯಕರಾಗಿದ್ದರು. ಆದರೆ ಅವರು ಸರ್ಕಾರದಲ್ಲಿ ಮಂತ್ರಿಯಾಗಲಿಲ್ಲ. ಆದರೆ ಪಕ್ಷದೊಳಗೆ ಉನ್ನತ ಸ್ಥಾನದಲ್ಲಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಆಪ್ತರಾಗಿದ್ದರು" ಎಂದು ಕಿಂಗ್‌ಶುಕ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್