
- ನಾಟಕ ಪ್ರದರ್ಶಿಸಿ ಸಮುದಾಯದ ಸಮಸ್ಯೆಯ ವಿವರ
- 2008ರಿಂದ ನಮ್ಮ ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ
ಬೆಂಗಳೂರಿನಲ್ಲಿ ನಡೆಯುತ್ತಿರುವ ನಮ್ಮ ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬವನ್ನು ಉದ್ದೇಶಿಸಿ ಮಾತನಾಡಿರುವ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಉಮಾ, "ಏನೇ ಅಡೆತಡೆಗಳು ಬರಲಿ, ನಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ನಮ್ಮ ಸಮುದಾಯದ ಗುರುತಿನೊಂದಿಗೆ ಮೆರವಣಿಗೆ ನಡೆಸುತ್ತೇವೆ" ಎಂದು ತಿಳಿಸಿದರು.
ನಾವು ಈ ಸಮಾಜದ ಭಾಗವೇ ಎಂಬುದನ್ನು ತೋರಿಸಲು ಕಳೆದ 15 ವರ್ಷಗಳಿಂದ ನಮ್ಮ ಪ್ರೈಡ್ ಹೆಸರಿನಲ್ಲಿ ಸ್ವಾಭಿಮಾನದ ನಡಿಗೆ ನಡೆಸುತ್ತಲೇ ಬಂದಿದ್ದೇವೆ. ಆದರೆ, ಈ ನಡಿಗೆಗೆ ಸರ್ಕಾರ ತಡೆ ನೀಡಿರುವುದು ಬೇಸರದ ಸಂಗತಿ. ಎಲ್ಜಿಬಿಟಿಕ್ಯೂ ಸಮುದಾಯದವರು ಈ ಸಮಾಜದ ಭಾಗವೇ ಸರ್ಕಾರಗಳು ಸಮುದಾಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ, ನಡಿಗೆಗೆ ಅವಕಾಶ ನೀಡಬೇಕು" ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಉಮಾ ತಿಳಿಸಿದರು.
"ಪ್ರತಿ ವರ್ಷ ಸ್ವಾಭಿಮಾನದ ನಡಿಗೆ ಮಾಡುತ್ತಿದ್ದೆವು. ಆದರೆ, ಈ ವರ್ಷ ನಡಿಗೆಗೆ ಸರ್ಕಾರ ಅವಕಾಶ ನೀಡಲಿಲ್ಲ" ಎಂದು ಹೇಳಿದರು.
"ವರ್ಷದಿಂದ ವರ್ಷಕ್ಕೆ ಸಮುದಾಯದವರೆಂದು ಗುರುತಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸಮುದಾಯದ ಪರವಾಗಿ ಹಲವಾರು ಕಾನೂನುಗಳು ಬಂದಿವೆ. ಆದರೆ, ಆ ಕಾನೂನುಗಳು ಅನುಷ್ಠಾನಗೊಳ್ಳುವಲ್ಲಿ ವಿಫಲವಾಗುತ್ತಿವೆ. ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು" ಎಂದು ಅವರು ಆಗ್ರಹಿಸಿದರು.
"ಸುಪ್ರೀಂಕೋರ್ಟ್ ನಮ್ಮ ಸಮುದಾಯದ ಪರವಾಗಿ ತೀರ್ಪುಗಳನ್ನು ನೀಡಿದೆ. ಆದರೆ, ಸರ್ಕಾರಗಳು ನಮ್ಮ ಹೋರಾಟಗಳಿಗೆ ತಡೆ ಒಡ್ಡಿ ನಮ್ಮ ವಾಕ್ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಿವೆ. ಆದರೆ, ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅಕೈ ಪದ್ಮಸಾಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಜೂನ್ ತಿಂಗಳು - ಎಲ್ಜಿಬಿಟಿಕ್ಯೂ ಸಮುದಾಯದ ಹೆಮ್ಮೆಯ ಮಾಸ
"ಕಳೆದ ಐವತ್ತು ವರ್ಷಗಳಿಗೆ ಹೋಲಿಸಿದರೆ, ಎಲ್ಜಿಬಿಟಿಕ್ಯೂ ಸಮುದಾಯದವರನ್ನು ಅನ್ಯರಂತೆ ನೋಡುವ ಮನಸ್ಥಿತಿ ಕಡಿಮೆಯಾಗಿದೆ. ಆದರೆ, ಈ ಬಗ್ಗೆ ಸಾಮಾಜಿಕ ಅರಿವು ಇನ್ನು ಹೆಚ್ಚಾಗಬೇಕು. ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮನೆಯವರ ಕಣ್ಣುತಪ್ಪಿಸಿ ಬರಬೇಕಾಯಿತು. ಕುಟುಂಬದವರಲ್ಲಿ ಈ ಬಗ್ಗೆ ಜಾಗೃತಿ ಮೂಡಿದಲ್ಲಿ ನಾನು ಸಮುದಾಯಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ದೊರೆಯುತ್ತದೆ" ಎಂದು ಚೇತನ್ ತಿಳಿಸಿದರು.
ಎಲ್ಜಿಬಿಟಿಕ್ಯೂಎಐ+ ಸಮುದಾಯದ ಜನರ ವಿರುದ್ಧ ನಡೆಯುವ ಹಿಂಸೆ ಮತ್ತು ತಾರತಮ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಲೈಂಗಿಕ ಕಾರ್ಮಿಕರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟವು (ಸಿಎಸ್ಎಂಆರ್) ನಮ್ಮ ಸಂಜೆ ‘ನಮ್ಮ ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ’ ವನ್ನು ಆಚರಿಸಿತು. ಈ ಕಾರ್ಯಕ್ರಮದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ಎಲ್ಜಿಬಿಟಿಕ್ಯೂ ಸಮುದಾಯದವರಾಗಿ ಗುರುತಿಸಿಕೊಂಡಾಗ, ಕುಟುಂಬ, ಸಮುದಾಯ, ಸಮಾಜದವರಿಂದ ಎದುರಿಸಿದ ಸಮಸ್ಯೆ ಸವಾಲುಗಳ ಕುರಿತು ಹಲವರು ನಾಟಕದ ಮೂಲಕ ತೋರಿಸಿದರು. 2008ರಲ್ಲಿ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮವು ಪ್ರತಿವರ್ಷ ನವೆಂಬರ್ ಕೊನೆಯ ಭಾನುವಾರ ನಡೆಸಿಕೊಂಡು ಬಂದಿದ್ದಾರೆ.