ಕರ್ನಾಟಕದ ರಾಯಚೂರು ತೆಲಂಗಾಣದೊಂದಿಗೆ ವಿಲೀನಕ್ಕೆ ಜನರ ಬೇಡಿಕೆ: ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿವಾದಾತ್ಮಕ ಹೇಳಿಕೆ

K Chandrashekhar Rao
  • ತೆಲಂಗಾಣ ಕಲ್ಯಾಣ ಕಾರ್ಯಕ್ರಮಗಳಿಂದ ಆಕರ್ಷಿತರಾಗಿರುವ ರಾಯಚೂರಿನ ಜನ
  • 2016ರಲ್ಲಿ ನೈರುತ್ಯ ತೆಲಂಗಾಣದಲ್ಲಿ ವಿಕಾರಾಬಾದ್ ಹೊಸ ಜಿಲ್ಲೆ ರಚನೆ 

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ ಟಿಆರ್‌ಎಸ್ ಪಕ್ಷದ ಕೆ. ಚಂದ್ರಶೇಖರ್ ರಾವ್ ಅಧಿಕಾರಕ್ಕೆ ಬಂದರು. ಬಳಿಕ 2016ರಲ್ಲಿ ನೈರುತ್ಯ ತೆಲಂಗಾಣದಲ್ಲಿ ವಿಕಾರಾಬಾದ್ ಹೊಸ ಜಿಲ್ಲೆ ರಚನೆಯಾಯಿತು. ವಿಕಾರಾಬಾದ್ ಜಿಲ್ಲೆಯಲ್ಲಿ ಮಂಗಳವಾರ (ಆಗಸ್ಟ್ 16) ನಿರ್ಮಿಸಿರುವ ನೂತನ ಕಲೆಕ್ಟರೇಟ್ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

“ಕರ್ನಾಟಕದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಗಡಿ ಪ್ರದೇಶವಾದ ತಾಂಡೂರಿಗೆ ನೀವು ಹತ್ತಿರದಲ್ಲಿದ್ದೀರಿ. ರಾಯಚೂರಿನ ಕೆಲವು ಗಡಿ ಭಾಗದ ಜನರು ತಮ್ಮನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕು. ಇಲ್ಲವೇ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ” ಎಂದು ಹೇಳಿದರು. 

“ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಅಖಂಡ ಆಂಧ್ರಪ್ರದೇಶ ಅಡಿಯಲ್ಲಿ ಹಿನ್ನಡೆ ಅನುಭವಿಸಿದ ಪ್ರದೇಶವು ಅಭಿವೃದ್ಧಿ ಹೊಂದುತ್ತಿದೆ. ಬೇರೆ ಯಾವ ರಾಜ್ಯಗಳೂ ನಮ್ಮ ಯೋಜನೆಗಳನ್ನು ಹೊಂದಿಲ್ಲ. ಹಿಂದೆ ರೈತರು ಆಟೊ-ರಿಕ್ಷಾ ಓಡಿಸುತ್ತಿದ್ದರು. ಆದರೆ ಈಗ ಗ್ರಾಮಾಂತರ ಪ್ರದೇಶವೂ ಅಭಿವೃದ್ಧಿ ಹೊಂದುತ್ತಿದೆ. ತೆಲಂಗಾಣದಲ್ಲಿ ಒಂದು ಎಕರೆ ಜಮೀನಿನ ಮೌಲ್ಯ ಇತರ ರಾಜ್ಯಗಳಲ್ಲಿ ಮೂರು ಎಕರೆ ಮೌಲ್ಯಕ್ಕೆ ಸಮನಾಗಿದೆ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್