ಮಹಾ ಬಿಕ್ಕಟ್ಟು| ಬಂಡಾಯ ನಾಯಕರು ರಾಜ್ಯಕ್ಕೆ ಮರಳಲು ಸೂಚಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ

eknath shinde
  • ಏಕನಾಥ್‌ ಶಿಂಧೆ ಬಣದ ನಡೆ ರಾಜಕೀಯ ಅಸ್ಥಿರತೆಗೆ ಕಾರಣ
  • ಐಷಾರಾಮಿ ಜೀವನ ನಡೆಸಲು ಜನರ ಹಣ ಬಳಸುತ್ತಿದ್ದಾರೆಯೇ?

ಶಿವಸೇನಾ ನಾಯಕ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಕೂಡಲೇ ಗುವಾಹಟಿಯಿಂದ ರಾಜ್ಯಕ್ಕೆ ಮರಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. 

ಸಾರ್ವಜನಿಕ ಹಕ್ಕುಗಳು ಮತ್ತು ಉತ್ತಮ ಆಡಳಿತಕ್ಕೆ ಅಗೌರವ ತೋರಿದ ಬಂಡಾಯ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರಾದ ಅಸಿಮ್ ಸರೋದೆ ಮತ್ತು ಅಜಿಂಕ್ಯ ಉದನೆ ಅವರು ಅರ್ಜಿ ಸಲ್ಲಿಸಿದ್ದಾರೆ. 

ಇಂದು ಬಾಂಬೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮಕರಂದ್ ಕಾರ್ಣಿಕ್ ಅವರ ಪೀಠದ ಎದುರು ಅರ್ಜಿ ವಿಚಾರಣೆಗೆ ಹಂಚಿಕೆಯಾಗಿದ್ದು, ಪ್ರಕರಣವನ್ನು ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಮಹಾ ಬಿಕ್ಕಟ್ಟು | ಉಪ ಸಭಾಪತಿಗೆ ನೋಟಿಸ್‌ ನೀಡಿದ ಸುಪ್ರೀಂಕೋರ್ಟ್‌

ಅರ್ಜಿಯ ಪ್ರಮುಖ ಅಂಶಗಳು

  • ಅಧಿಕಾರ ಹಿಡಿಯಲು ಮತ್ತು ವಿರೋಧಿಗಳಿಗೆ ಪಾಠ ಕಲಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ರಾಷ್ಟ್ರ ಮತ್ತು ರಾಜ್ಯಕ್ಕೆ ತೋರಿಸುವಂತೆ ಚುನಾಯಿತ ಪ್ರತಿನಿಧಿಗಳ ಗುಂಪೊಂದು ಕೊಳಕು ರಾಜಕೀಯ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಜನ ನಾಯಕರನ್ನು ಆಯ್ಕೆ ಮಾಡಿರುವುದು ಇಂತಹ ರಾಜಕೀಯ ನಾಟಕ ಮಾಡಲಿ ಮತ್ತು ಸಾರ್ವಜನಿಕ ಹಕ್ಕುಗಳನ್ನು ಕಡೆಗಣಿಸಲಿ ಎಂದಲ್ಲ.
  • ಸಚಿವರ ಈ ನಡೆ ರಾಜ್ಯದಲ್ಲಿ ನಿರಂತರ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡಿದೆ. ಇದರಿಂದ ಸಾರ್ವಜನಿಕರಲ್ಲಿ ಅಭದ್ರತೆ ಭಾವನೆ ಮೂಡುತ್ತದೆ.
  • ಐಪಿಸಿ ಸೆಕ್ಷನ್ 268ರ ಪ್ರಕಾರ ರಾಜಕೀಯ ಅರಾಜಕತೆ ಸಾರ್ವಜನಿಕರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಶಿವಸೇನಾ ಶಾಸಕರ ಬಂಡಾಯ ಮತ್ತು ಅದರ ಪರಿಣಾಮದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ 'ಕಾನೂನಿನ ಪ್ರಶ್ನೆ'ಯನ್ನು ನಿರ್ಧರಿಸಬೇಕು.
  • ಚುನಾಯಿತ ಪ್ರತಿನಿಧಿಗಳು ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ. ಸಾರ್ವಜನಿಕ ಹಣವನ್ನು ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸಲು ಮತ್ತು ಐಷಾರಾಮಿ ಪಂಚತಾರಾ ಹೋಟೆಲ್‌ಗಳಲ್ಲಿ ವಾಸಿಸಲು ಬಳಸುತ್ತಿದ್ದಾರೆಯೇ ಎಂಬುದನ್ನು ಜನರಿಗೆ ತಿಳಿಸುವುದು ಸೂಕ್ತ.
  • ಬಂಡಾಯ ಎದ್ದವರಲ್ಲಿ ವಿವಿಧ ಸಚಿವರು ಕೂಡ ಇದ್ದು ಮಳೆಗಾಲದಲ್ಲಿ ಬಹುತೇಕ ನಗರಗಳು ಸಮಸ್ಯೆ ಎದುರಿಸುತ್ತಿರುವಾಗ 37 ಶಾಸಕರೊಂದಿಗೆ ನಗರಾಭಿವೃದ್ಧಿ ಸಚಿವ ಶಿಂಧೆ ಅವರು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯಿಂದ ಪಲಾಯನ ಮಾಡಿದ್ದಾರೆ. ಇದರಿಂದ ಸಾರ್ವಜನಿಕ ಹಕ್ಕುಗಳಿಗೆ ಅಡ್ಡಿಯಾಗಿದೆ.
  • ಮಳೆಗಾಲ ಆರಂಭವಾಗಿದ್ದು,  ಕೃಷಿ ಸಚಿವರು ಹಲವು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ದುರದೃಷ್ಟವಶಾತ್‌ ಕೃಷಿ ಸಚಿವ ದಾದಾ ಭೂಸೆ ಅವರು ಗುವಾಹಟಿಯಲ್ಲಿದ್ದಾರೆ.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app