ಪ್ರಧಾನಿ ಮೋದಿ ಚರಾಸ್ತಿ ಮೌಲ್ಯ 26 ಲಕ್ಷ ಏರಿಕೆ: ಯಥಾಸ್ಥಿತಿಯಲ್ಲಿ ಸ್ಥಿರಾಸ್ತಿ

PM Narendra Modi
  • ಮಾಹಿತಿ ನೀಡಿದ ಪ್ರಧಾನಿ ಕಾರ್ಯಾಲಯ
  • 10 ಕೇಂದ್ರ ಸಚಿವರ ಆಸ್ತಿ ವಿವರ ಕೂಡ ಪ್ರಕಟ

2021-22ನೇ ಆರ್ಥಿಕ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚರಾಸ್ತಿ ₹26.13 ಲಕ್ಷದಷ್ಟು ಹೆಚ್ಚಾಗಿದೆ. ಆದರೆ ಗುಜರಾತ್‌ನಲ್ಲಿರುವ ತಮ್ಮ ನಿವಾಸವನ್ನು ಮಾರಿದ ನಂತರ ಮೋದಿ ಅವರು ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಇದು ಪ್ರಧಾನಿ ಮೋದಿಯವರು ಇತ್ತೀಚೆಗೆ ಪ್ರಕಟಿಸಿರುವ ತಮ್ಮ ಆಸ್ತಿ ಮಾಹಿತಿ ಎಂದು ಪ್ರಧಾನಿ ಕಾರ್ಯಾಲಯದ (ಪಿಎಂಒ) ಜಾಲತಾಣ ಹೇಳಿದೆ.

ಪ್ರಸಕ್ತ ವರ್ಷದ ಮಾರ್ಚ್‌ 31ರವರೆಗಿನ ಮಾಹಿತಿ ಪ್ರಕಾರ 2021ರ ಮಾರ್ಚ್‌ನಲ್ಲಿ ಇದ್ದ ₹1,97,68,885 ಚರಾಸ್ತಿ  2022ರ ಮಾರ್ಚ್‌ವರೆಗೆ ₹2,23,82,504 ರಷ್ಟಾಗಿದೆ. ಸ್ಥಿರ ಠೇವಣಿ, ಬ್ಯಾಂಕ್‌ ಉಳಿತಾಯ, ಜೀವ ವಿಮೆಗಳು, ಆಭರಣ ಮತ್ತು ನಗದನ್ನು ಒಳಗೊಂಡಿದೆ. ಆಸ್ತಿ ಮಾಹಿತಿಯ ಸ್ಥಿರಾಸ್ತಿ ಎಂದು ಕೇಳಲಾದ ಸ್ಥಳದಲ್ಲಿ 'ಯಾವುದೂ ಇಲ್ಲ' ಎಂದು ನಮೂದಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಬಿಹಾರ ಬಿಕ್ಕಟ್ಟು | ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

“ಸ್ಥಿರಾಸ್ತಿ ಸರ್ವೆ ನಂ. 401/A  ಇತರ ಮೂವರು ಜಂಟಿ ಮಾಲೀಕರೊಂದಿಗೆ ಹಂಚಿಕೆಯಾಗಿದೆ. ಪ್ರತಿಯೊಬ್ಬರಿಗೂ ಶೇ 25ರಷ್ಟು ಸಮಾನ ಪಾಲಿದೆ. ಈ ಆಸ್ತಿಯನ್ನು ದಾನ ಮಾಡಿರುವುದರಿಂದ ಸ್ವಯಂ ಮಾಲೀಕತ್ವವನ್ನು ಹೊಂದಿರುವುದಿಲ್ಲ” ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ ಎಂದು ಕಚೇರಿ ಹೇಳಿದೆ. 

ಕಳೆದ ವರ್ಷದ ಆಸ್ತಿ ಘೋಷಣೆಯಲ್ಲಿ ಪ್ರಧಾನಿ ಮೋದಿ ಅವರು ಗಾಂಧಿನಗರದ ಸರ್ವೆ ನಂ. 401/A, ಸೆಕ್ಟರ್-1 ರಲ್ಲಿ ನೆಲೆಗೊಂಡಿರುವ ವಸತಿ ಪ್ಲಾಟ್‌ನಲ್ಲಿ ನಾಲ್ಕನೇ ಒಂದು ಪಾಲನ್ನು (3,531.45 ಚದರ ಅಡಿ) ಹೊಂದಿರುವುದಾಗಿ ಹೇಳಿದ್ದರು. ಇದು ಒಟ್ಟಾರೆ ಮಾರುಕಟ್ಟೆ ಮೌಲ್ಯ ₹1.10 ಕೋಟಿಯೊಂದಿಗೆ ಒಟ್ಟು 14,125.80 ಚದರ ಅಡಿ ಹೊಂದಿತ್ತು. 

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002 ರ ಅಕ್ಟೋಬರ್ 25ರಂದು ಇತರ ಮೂವರು ಮಾಲೀಕರೊಂದಿಗೆ ಜಂಟಿಯಾಗಿ ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಹಿಂದಿನ ಘೋಷಣೆಯಲ್ಲಿ ಹೇಳಿದ್ದರು. 20 ವರ್ಷಗಳ ಹಿಂದೆ ಖರೀದಿಸಿದ ಸಮಯದಲ್ಲಿ ಆಸ್ತಿಯ ಬೆಲೆ ₹1,30,488 ಇತ್ತು. ₹2,47,208 ಮೊತ್ತವನ್ನು ಅಭಿವೃದ್ಧಿ ಮತ್ತು ನಿರ್ಮಾಣದ ಮೂಲಕ ಹೂಡಿಕೆಯಾಗಿ ಖರ್ಚು ಮಾಡಲಾಗಿದೆ. ಪ್ರಧಾನಮಂತ್ರಿಯವರು ಪಟ್ಟಿ ಮಾಡಿರುವ ಚರ ಆಸ್ತಿಗಳ ವಿಶ್ಲೇಷಣೆಯು ಈಗಿರುವ ನಗದು ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವುದಾಗಿ ಹೇಳಿದೆ. ಕಳೆದ ವರ್ಷದ ಮೊತ್ತ ₹36,900 ನಿಂದ ₹35,250ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದೆ.

ಅವರ ಬ್ಯಾಂಕ್ ಉಳಿತಾಯ ಕೂಡ 2021ರ ಮಾರ್ಚ್‌ 31 ರಲ್ಲಿ ಇದ್ದ ₹1,52,480 ರಿಂದ ₹46,555 ಕ್ಕೆ ಇಳಿದಿದೆ ಎಂದು ಪ್ರಧಾನಿ ಕಚೇರಿ ಜಾಲತಾಣ ಹೇಳಿದೆ. 2021ರ ಮಾರ್ಚ್‌ ಅಂತ್ಯದ ವೇಳೆಗೆ ಪ್ರಧಾನಿ ಮೋದಿ ಬ್ಯಾಂಕ್ ಸ್ಥಿರ ಠೇವಣಿ ಮೊತ್ತ ₹1,83,66,966 ರಿಂದ ₹2,10,33,226 ಗಳಿಗೆ ಹೆಚ್ಚಿದೆ ಎಂದು ಇತ್ತೀಚಿನ ಘೋಷಣೆ ತೋರಿಸುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ (ಪೋಸ್ಟ್) ಅವರ ಹೂಡಿಕೆಯು ಒಂದು ವರ್ಷದ ಹಿಂದೆ ₹8,93,251 ಇದ್ದ ಮೌಲ್ಯವು  ₹9,05,105ಕ್ಕೆ ಏರಿದೆ. ಅದೇ ರೀತಿ ಈ ಅವಧಿಯಲ್ಲಿ ಅವರ ಜೀವ ವಿಮಾ ಪಾಲಿಸಿಗಳ ಮೌಲ್ಯ ₹1,50,957 ಗಳಿಂದ ₹1,89,305  ಗೆ ಏರಿಕೆಯಾಗಿದೆ ಎಂದು ಜಾಲತಾಣ ಮಾಹಿತಿ ನೀಡಿದೆ.

ಪ್ರಧಾನಿ ಮೋದಿಯವರ ಸಂಬಂಧಿಗಳು ಹೊಂದಿದ ಆಸ್ತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಪ್ರಧಾನಿ ಮೋದಿ ಅಲ್ಲದೆ 10 ಮಂದಿ ಕೇಂದ್ರ ಸಚಿವರು ಪ್ರಕಟಿಸಿರುವ ಆಸ್ತಿ ವಿವರವನ್ನೂ ಪ್ರಧಾನಿ ಕಚೇರಿ ನೀಡಿದೆ. 

ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಆರ್‌ ಕೆ ಸಿಂಗ್‌, ಧರ್ಮೇಂದ್ರ ಪ್ರಧಾನ್‌, ಹರ್ದೀಪ್‌ ಸಿಂಗ್ ಪುರಿ, ಜಿ.ಕೃಷ್ಣನ್‌ ರೆಡ್ಡಿ, ಜ್ಯೋತಿರಾದಿತ್ಯ ಸಿಂಧಿಯಾ, ಪುರುಷೋತ್ತಮ ರೂಪಾಲ, ವಿ.ಮುರಳೀಧರನ್‌, ಫಾಗನ್‌ ಸಿಂಗ್‌ ಕುಲಾಸ್ತೆ ಮತ್ತು ಮುಖ್ತಾರ್ ಅಬ್ಬಾಸ್‌ ನಖ್ವಿ ಅವರ ಆಸ್ತಿ ವಿವರವನ್ನು ಪ್ರಕಟಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್