ಚಿತ್ರದುರ್ಗ | ಬ್ರಾಹ್ಮಣರ ನೇತೃತ್ವದ ರಾಜಕೀಯ ಪಕ್ಷಗಳು ದೇಶ ಆಳುತ್ತಿವೆ: ಮಾರಸಂದ್ರ ಮುನಿಯಪ್ಪ

BSP
  • ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಏಕವಚನದಲ್ಲಿ ತರಾಟೆ
  • ಶಿಕ್ಷಣ ಖಾಸಗೀಕರಣ ಬಡವರ ಮಕ್ಕಳಿಗೆ ಅಪಾಯಕಾರಿ 

“ದೇಶದಲ್ಲಿರುವ ಏಳು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆರು ಬ್ರಾಹ್ಮಣರ ಪಕ್ಷಗಳಾಗಿದ್ದು, ಮುಟ್ಟಾಳರಾದ ನಾವು ಕುಡಿದು ತಿಂದು, ದೇವರು ದಿಂಡ್ರು ಅಂತ ಬಡಿದಾಡಿಕೊಂಡು ಅವರನ್ನು ದೇಶ ಆಳಲು ಬಿಟ್ಟಿದ್ದೇವೆ” ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಅಭಿಪ್ರಾಯಪಟ್ಟರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯವ್ಯಾಪಿ “ಜೈಭೀಮ್ ಜನಜಾಗೃತಿ ಜಾಥಾ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ದೇಶದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಈ ಪಕ್ಷಗಳು ಬ್ರಾಹ್ಮಣರವು. ಈ ಬ್ರಾಹ್ಮಣರು ಇಂದು ದೇಶ ಆಳುತ್ತಿದ್ದಾರೆ" ಎಂದರು.

"ಬಿಎಸ್‌ಪಿ ಇಂದು ಕರ್ನಾಟಕದಾದ್ಯಂತ ಪಕ್ಷ ಸಂಘಟನೆ ಮಾಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಸೀರೆ, ಹಣ, ಹೆಂಡ ಕೊಡುವುದಿಲ್ಲ. ಬದಲಿಗೆ ವಿಚಾರಧಾರೆಗಳನ್ನು ಕೊಡುತ್ತೇವೆ. ನೀವು ಎಂಥಾ ನಾಯಕರನ್ನು ಆಯ್ಕೆ ಮಾಡಬೇಕು ಎಂದು ತಿಳಿಸುತ್ತೇವೆ. ಏಕೆಂದರೆ, ಈಗಾಗಲೇ ಆಯ್ಕೆಯಾಗಿರುವ ಶಾಸಕರು, ಸಚಿವರ ಮನೆ ಹತ್ತಿರ ಹೋದರೆ ನಿಮ್ಮನ್ನ ಸೇರಿಸುವುದಿಲ್ಲ ಎಂಬುದನ್ನು ನೀವು ಅರಿಯಬೇಕಿದೆ" ಎಂದರು. 

ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಏಕವಚನದಲ್ಲಿ ತರಾಟೆ

“ಸ್ಥಳೀಯ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರು ನನ್ನಿಂದಲೇ ನದಿ ತುಂಬಿದೆ ಎಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ, ಮೈಸೂರು ಮಹಾರಾಜರು ಅಂದು ಐದು ಲಕ್ಷ ರೂ. ವೆಚ್ಚದಲ್ಲಿ ವಾಣಿವಿಲಾಸ ಸಾಗರ ನಿರ್ಮಿಸಿದರು. ತಮ್ಮ ಮಗಳ ಹೆಸರಿಟ್ಟಿದ್ದನ್ನು ಎಂದಿಗೂ ಮರೆಯಬಾರದು. ಈ ರೀತಿಯ ಶಾಸಕರಿಗೆ ಮತ ಹಾಕಿ ಗೆಲ್ಲಿಸಿದ ನಮಗೆ ನಾಚಿಕೆ ಆಗಬೇಕು” ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಶಿಕ್ಷಣ ಖಾಸಗೀಕರಣ: ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹನ್ನಾರ

ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಮಾತನಾಡಿ, “ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎಲ್‌ಕೆಜಿ, ಯುಕೆಜಿ ಒಂದನೇ ತರಗತಿ ಓದಿಸಲು ಲಕ್ಷಗಟ್ಟಲೆ ಡೊನೇಷನ್ ಕೊಡಬೇಕಿದೆ. ಒಂದು ವೇಳೆ ಸರ್ಕಾರಿ ಶಾಲೆ - ಕಾಲೇಜುಗಳು ಇದೇ ರೀತಿ ಮುಚ್ಚಿ ಹೋದರೆ ಬಡವರು ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸಲು ಸಾಧ್ಯವಾಗದ ಸ್ಥಿತಿ ಬರುತ್ತದೆ. ಬಡವರ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿಗೆ ಕಳುಹಿಸಲಿ ಎಂಬ ಉದ್ದೇಶದಿದಲೇ ಹೊಸ ಶಿಕ್ಷಣ ನೀತಿಯ ಮುಖಾಂತರ ಶಿಕ್ಷಣವನ್ನು ಹಂತಹಂತವಾಗಿ ಖಾಸಗೀಕರಣ ಮಾಡುತ್ತಿದ್ದಾರೆ. ಇದು ದೊಡ್ಡ ಅಪಾಯ” ಎಂದು ಆತಂಕ ವ್ಯಕ್ತಪಡಿಸಿದರು.

“ಶಿಕ್ಷಣ ಕ್ಷೇತ್ರದ ಖಾಸಗೀಕರಣದಿಂದ ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಬಿಜೆಪಿಯವರು ನಿಮ್ಮ ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು, ಕೂಲಿಯವರನ್ನಾಗಿ ಮಾಡಿಕೊಳ್ಳಲು ಶಿಕ್ಷಣ ಖಾಸಗೀಕರಣ ಮಾಡಿಕೊಳ್ಳಲು ಹೊರಟಿದ್ದಾರೆ. ಜೊತೆಗೆ ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ| ಮತದಾರರ ಪಟ್ಟಿಯಿಂದ 6.69 ಲಕ್ಷ ಮತದಾರರು ಡಿಲೀಟ್!‌ ಅಕ್ರಮದಲ್ಲಿ ʻಚಿಲುಮೆʼ ಸಂಸ್ಥೆ ತಳಕು

“ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಿದಲ್ಲಿದೆ. ಈ ಪಕ್ಷದ ಕೆಲವು ಮಂತ್ರಿಗಳು ಮತ್ತು ಶಾಸಕರು ಅನೇಕ ಬಾರಿ ‘ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು’ ಎಂದು ಬಹಿರಂಗವಾಗಿಯೇ ಪದೇಪದೆ ಹೇಳುತ್ತಿರುತ್ತಾರೆ. ಸಂವಿಧಾನ ಜಾರಿಗೂ ಮುನ್ನಾ ದೇಶದಲ್ಲಿ ಏನು ಜಾರಿಯಲ್ಲಿತ್ತು ಎಂಬುದನ್ನು ನಾವು ಅರಿಯಬೇಕು” ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಪಿ ತಾಲೂಕು ಕಾರ್ಯದರ್ಶಿ ಎಂ ಡಿ ಕೋಟೆ ಓಬಳೇಶ್, ಜಿಲ್ಲಾ ಕಾರ್ಯದರ್ಶಿ ಎನ್‌ ಮಹಾಲಿಂಗಪ್ಪ, ತಾಲೂಕು ಅಧ್ಯಕ್ಷ ಎಂ ಜಗದೀಶ್, ಸಂಘಟನಾ ಕಾರ್ಯದರ್ಶಿ ಎಂ ಡಿ ಕೋಟೆ ಚಂದ್ರಣ್ಣ, ಖಜಾಂಚಿ ಎನ್ ರಂಗಸ್ವಾಮಿ ಹಾಗೂ ಇತರರು ಹಾಜರಿದ್ದರು.

ಮಾಸ್ ಮೀಡಿಯಾ ಚಿತ್ರದುರ್ಗ ಜಿಲ್ಲಾ ಸಂಯೋಜಕರಾದ ಹಾಲರಾಮೇಶ್ವರ ಎಚ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app