ಸುದ್ದಿ ವಿವರ | ಹಣದುಬ್ಬರ ತಡೆಗೆ ಸಕ್ಕರೆ ರಫ್ತು ನಿಷೇಧ ಘೋಷಿಸಿದ ಸರ್ಕಾರ

  • ಜೂನ್‌ 1ರಿಂದ ಸರ್ಕಾರ ಸಕ್ಕರೆ ರಫ್ತು ನಿಷೇಧ ಹೇರುವ ಸಾಧ್ಯತೆಯಿದೆ
  • ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತಕ್ಕೆ ಎರಡನೇ ಸ್ಥಾನ

ದೇಶದ ಹಣದುಬ್ಬರ ಪರಿಸ್ಥಿತಿ ಹತೋಟಿಗೆ ತರಲು ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದ್ದು, ಹದಿನೈದು ದಿನ ಮೊದಲು ಗೋಧಿ ರಫ್ತು ನಿ‍ಷೇಧಿಸಿದೆ. ಈಗ ಜೂನ್‌ 1ರಿಂದ ಸಕ್ಕರೆ ರಫ್ತನ್ನು ನಿಷೇಧಿಸುತ್ತಿದೆ. ಜತೆಗೆ 20 ಲಕ್ಷ ಮೆಟ್ರಿಕ್ ಟನ್ (ಎಂಟಿ) ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಸುಂಕ ರಹಿತ ಆಮದಿಗೆ ಅನುಮತಿ ನೀಡಿದೆ.

ದೇಶದೊಳಗೆ ಲಭ್ಯತೆಗೆ ಪ್ರಾಶಸ್ತ್ಯ ಮತ್ತು ಸಕ್ಕರೆಯ ಬೆಲೆ ಸ್ಥಿರವಾಗಿರುವಂತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರಸ್ತುತ ಅಂದರೆ ಅಕ್ಟೋಬರ್ 2021ರಿಂದ ಸೆಪ್ಟೆಂಬರ್ 2022ರ ಸಕ್ಕರೆ ಋತುವಿನಲ್ಲಿ ಒಂದು ಕೋಟಿ ಮೆಟ್ರಿಕ್‌ ಟನ್‌ ರಫ್ತಿಗೆ ಮಾತ್ರ ಅವಕಾಶ ನೀಡುವುದಾಗಿ ಸರ್ಕಾರ ಹೇಳಿದೆ.

ಜೂನ್ 1, 2022ರಿಂದ ಅಕ್ಟೋಬರ್ 31, 2022ರವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ, ಸಕ್ಕರೆಯ ನಿರ್ದೇಶನಾಲಯ (ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ) ಅನುಮತಿಯೊಂದಿಗೆ ಮಾತ್ರ ಸಕ್ಕರೆ ರಫ್ತು ಮಾಡುವಂತೆ ಸೂಚಿಸಲಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಸೂಚನೆಯಲ್ಲಿ ತಿಳಿಸಲಾಗಿದೆದೆ.

ಸಕ್ಕರೆ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತ ಎರಡನೆ ಸ್ಥಾನ ಪಡೆದಿದೆ. ಮೇ 18 ರವರೆಗೆ ಸುಮಾರು 75 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗಿದೆ. ಸಕ್ಕರೆ ಮಾರುಕಟ್ಟೆ ಪ್ರತಿವರ್ಷ ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗೆ ಸಕ್ರಿಯವಾಗಿರುತ್ತದೆ. "2017- 18ರ ಸಕ್ಕರೆ ಋತುವಿನ ರಫ್ತಿಗೆ ಹೋಲಿಸಿದರೆ ಪ್ರಸ್ತುತ ಸಕ್ಕರೆ ಋತುವಿನ 2021- 22ರ ರಫ್ತು 15 ಪಟ್ಟು ಹೆಚ್ಚಾಗಿದೆ" ಎಂದು ಆಹಾರ ಸಚಿವಾಲಯವು ಹಿಂದಿನ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರಗಳು ಇಂಡೋನೇಷ್ಯಾ, ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಆಫ್ರಿಕಾ ದೇಶಗಳು ಭಾರತದಿಂದ ಹೆಚ್ಚು ಸಕ್ಕರೆ ಆಮದು ಮಾಡಿಕೊಳ್ಳುತ್ತವೆ. 2017- 18ರಲ್ಲಿ ಸುಮಾರು 6.2 ಲಕ್ಷ ಟನ್‌ಗಳು, 2018- 19ರಲ್ಲಿ 38 ಲಕ್ಷ ಟನ್‌ಗಳು ಹಾಗೂ 2019- 20ರಲ್ಲಿ 59.60 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ಈ ದೇಶಗಳಿಗೆ ರಫ್ತು ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಗೋಧಿ ರಫ್ತು ನಿಷೇಧ | ಭಾರತೀಯ ರೈತರಿಗೆ ಕಹಿಯಾದ ಸುಗ್ಗಿ

"2021-22 ರಲ್ಲಿ ಸುಮಾರು 90 ಲಕ್ಷ ಎಂಟಿ ರಫ್ತಿನ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಸಕ್ಕರೆ ಕಾರ್ಖಾನೆಗಳಿಂದ 82 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆಯನ್ನು ರಫ್ತಿಗಾಗಿ ರವಾನಿಸಲಾಗಿದೆ. ಈವರೆಗೆ ಸರಿಸುಮಾರು 78 ಲಕ್ಷ ಮೆಟ್ರಿಕ್‌ ಟನ್‌ ರಫ್ತು ಮಾಡಲಾಗಿದೆ. ಸೆಪ್ಟೆಂಬರ್ 30, 2022ರ ವೇಳೆಗೆ ಸುಮಾರು 60ರಿಂದ 65 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉಳಿಯಲಿದ್ದು, ದೇಶೀಯ ಬಳಕೆಗೆ ಅಗತ್ಯವಿರುವ ಸುಮಾರು ಮೂರು ತಿಂಗಳ ದಾಸ್ತಾನುಗಳಿಗೆ ಸಮನಾಗಿರುತ್ತದೆ" ಎಂದು ಮೂಲಗಳು ತಿಳಿಸಿವೆ.

ಸುಂಕ ರಹಿತ ಆಮದು

ಸಕ್ಕರೆ ಉತ್ಪಾದನೆ, ಬಳಕೆ, ರಫ್ತು ಮತ್ತು ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಬೆಲೆ ಏರಿಳಿತಗಳು ಸೇರಿದಂತೆ ಸಕ್ಕರೆ ಸಂಬಂಧಿಸಿದ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಬದಲಿಸುತ್ತಲೇ ಇದೆ. ಎರಡು ಹಣಕಾಸು ವರ್ಷಗಳು ಅಂದರೆ 2022-23 ಮತ್ತು 2023-24ರವರೆಗೆ ವರ್ಷಕ್ಕೆ 20 ಲಕ್ಷ ಮೆಟ್ರಿಕ್‌ ಟನ್‌ ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಸುಂಕ ರಹಿತ ಆಮದು ಮಾಡಿಕೊಳ್ಳುವುದಾಗಿ ಕೇಂದ್ರವು ಘೋಷಿಸಿದೆ.

ಟಿಆರ್‌ಕ್ಯು (ನಿರ್ದಿಷ್ಟ ಉತ್ಪನ್ನವನ್ನು ನಿರ್ದಿಷ್ಟ ಪ್ರಮಾಣದವರೆಗೆ ಕಡಿಮೆ ಸುಂಕದಲ್ಲಿ ಆಮದು, ಪ್ರಮಾಣ ಮೀರಿದರೆ ಹೆಚ್ಚಿನ ಸುಂಕ ತೆರುವುದು) ಬದಲಾವಣೆಯು ಈ ವರ್ಷ ಮೇ 25 ರಿಂದ ಮಾರ್ಚ್ 31, 2024 ರವರೆಗೆ ಜಾರಿಯಲ್ಲಿರುತ್ತದೆ. ಭಾರತವು ಶೇ. 60 ರಷ್ಟು ಅಡುಗೆ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ ಆಕ್ರಮಣದಿಂದ ಉಕ್ರೇನ್‌ನಿಂದ ಆಮದಾಗುತ್ತಿರುವ ಸೂರ್ಯಕಾಂತಿ ಎಣ್ಣೆ ಮೇಲೆ ಪರಿಣಾಮ ಬೀರಿದೆ. ಇತ್ತೀಚೆಗೆ ಇಂಡೋನೇಷ್ಯಾ ತಾಳೆ ಎಣ್ಣೆ ಆಮದನ್ನು ನಿರ್ಬಂದಿಸಿರುವುದು ಇನ್ನಷ್ಟು ಆಘಾತಕೊಟ್ಟಿದೆ.

2020- 21ರಲ್ಲಿ ಸುಮಾರು 70 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಲಾಗಿದೆ. ಸಕ್ಕರೆ ರಫ್ತಿಗೆ ಅನುಕೂಲವಾಗುವಂತೆ ಕಳೆದ 5 ವರ್ಷಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ₹14,456 ಕೋಟಿ (ಬಿಡುಗಡೆ ಮಾಡಲಾಗಿದೆ) ಮತ್ತು ‘ಬಫರ್ ಸ್ಟಾಕ್’ ನಿರ್ವಹಿಸಲು ₹2,000 ಕೋಟಿ ವೆಚ್ಚ ಮಾಡಲಾಗಿದೆ  ಎಂದು ಸಚಿವಾಲಯ ತಿಳಿಸಿದೆ.

ದೇಶೀ ಬೆಲೆಯೇರಿಕೆ ನಿಭಾಯಿಸುವ ಸವಾಲು

ದೇಶದಲ್ಲಿ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ₹41.50 ರಷ್ಟಿದ್ದು, ಮುಂಬರುವ ತಿಂಗಳುಗಳಲ್ಲಿ ಪ್ರತಿ ಕೆಜಿಗೆ ₹40-43 ರ ವ್ಯಾಪ್ತಿಯಲ್ಲಿ ಉಳಿಯುವ ಸಾಧ್ಯತೆಯಿದೆ .

ದೇಶೀಯ ಬೆಲೆಗಳ ಉಲ್ಬಣವನ್ನು ತಡೆಗಟ್ಟಲು ಭಾರತವು ಆರು ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತುಗಳನ್ನು ನಿರ್ಬಂಧಿಸಲಾಗುತ್ತಿದೆ.

ಸಕ್ಕರೆ ಕಾರ್ಖಾನೆಗಳ ಷೇರು ಕುಸಿತ

ಸಕ್ಕರೆ ರಫ್ತು ನಿಷೇಧದ ಸುದ್ದಿ ಕೇಳಿ ಬರುತ್ತಲೇ ಭಾರತೀಯ ಸಕ್ಕರೆ ಕಾರ್ಖಾನೆಗಳ ಷೇರುಗಳಲ್ಲಿ ಕುಸಿತ ಕಂಡಿದೆ. ಬಾಲಂಪುರ್ ಚೀನಿ, ದಾಲ್ಮಿಯ ಭಾರತ್ ಶುಗರ್‌, ಧಾಂಪುರ್ ಶುಗರ್ ಮಿಲ್ಸ್‌, ದ್ವಾರಕೀಶ್ ಶುಗರ್ ಇಂಡಸ್ಟ್ರೀಸ್, ಶ್ರೀ ರೇಣುಕಾ ಶುಗರ್‌ಗಳ ಷೇರುಗಳು ಮಂಗಳವಾರದಂದು ಶೇ 8ರಷ್ಟು ಕುಸಿದವೆ.

ಆದರೆ ಒಂದು ಕೋಟಿ ಟನ್‌ಗಳಷ್ಟು ಸಕ್ಕರೆ ರಫ್ತಿಗೆ ಕಾರ್ಖಾನೆಗಳಿಗೆ ಅವಕಾಶ ಕೊಟ್ಟಿರುವುದರಿಂದ ವಿಶ್ವ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಒದಗಿಸಲು ಸಾಧ್ಯವಾಗಲಿದೆ ಎಂದು ವ್ಯಾಪಾರಿಗಳು ಹೇಳಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್‌' ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್