ಉತ್ತರ ಪ್ರದೇಶ | ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

  • ಸಾಮೂಹಿಕ ಅತ್ಯಾಚಾರದಿಂದ ಗರ್ಭಪಾತಕ್ಕೊಳಗಾದ ಮಹಿಳೆ
  • ಮೂವರು ಆರೋಪಿಗಳಲ್ಲಿ ಒಬ್ಬನ ಬಂಧನ

ಗರ್ಭಿಣಿಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಯ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ಉತ್ತರ ಪ್ರದೇಶದ ಬರೇಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ಮುಂಜಾನೆ ಗದ್ದೆಯಲ್ಲಿ ಕೆಲಸ ಮಾಡಲು ಹೋಗಿದ್ದರು. ಸಂಜೆಯಾದರೂ ಮನೆಗೆ ವಾಪಸ್ಸಾಗದೇ ಇದ್ದಾಗ, ಅವರ ಪತಿ ಹೊಲಕ್ಕೆ ಹೋದಾಗ, ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದುದನ್ನು ಕಂಡು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೃಢಪಡಿಸಿದ್ದು, ಅದರಿಂದ ಮಹಿಳೆಗೆ ಗರ್ಭಪಾತವಾಗಿದ್ದು ಮಹಿಳೆಯ ಆರೋಗ್ಯ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ʼಸಂತ್ರಸ್ತೆಯ ಪತಿ ನೀಡಿದ ದೂರಿನ ಪ್ರಕಾರ, ಮಹಿಳೆಯು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಗೆ ಗರ್ಭಪಾತವಾಗಿದೆʼ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರ ಘಟನೆ ಸೆಪ್ಟೆಂಬರ್ 13ರಂದು ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಎನ್‌ಐಎ ದಾಳಿ | ಎನ್‌ಐಎ ಅಧಿಕಾರಿಗಳ ಜತೆ ಅಮಿತ್ ಶಾ ಸಭೆ, ಭಯೋತ್ಪಾದನೆ ನಿಗ್ರಹ‌ ಕ್ರಮಗಳ ಪರಿಶೀಲನೆ

ʻʻಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಒಬ್ಬ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸಂತ್ರಸ್ತೆಯ ಹೇಳಿಕೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಸತ್ಯಾಂಶ ಹೊರಬಿದ್ದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರವಾಲ್ ಮಾಹಿತಿ ನೀಡಿದ್ದಾರೆ. 

ಮಹಿಳೆಯ ಪತಿ ಸೆಪ್ಟೆಂಬರ್ 16 ರಂದು ಬರೇಲಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು  ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಆದರೆ, ʼಘಟನೆ ನಡೆದ ದಿನವೇ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲʼ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ. ಪತ್ನಿಯ ಆರೋಗ್ಯ ಹದಗೆಟ್ಟಿದ್ದರಿಂದ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಅಂಚೆ ಮೂಲಕ ದೂರು ನೀಡಿದ್ದು, ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್