ರಾಷ್ಟ್ರಪತಿ ಚುನಾವಣೆ | ಮಧ್ಯಾಹ್ನದ ಹೊತ್ತಿಗೆ 350 ಮತದಾನ

President election
  • ಮಧ್ಯಾಹ್ನವರೆಗೆ 350 ಜನಪ್ರತಿನಿಧಿಗಳು ಮತ ಚಲಾವಣೆ
  • ಪ್ರಜಾಪ್ರಭುತ್ವ ಉಳಿವಿಗೆ ಹಾಕುವಂತೆ ವಿನಂತಿಸಿದ ಸಿನ್ಹಾ

ಸೋಮವಾರ (ಜುಲೈ 18) ಬೆಳಿಗ್ಗೆ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳಲ್ಲಿ ಬಿರುಸಿನ ಮತದಾನ ನಡೆದಿದೆ. 

ಬೆಳಿಗ್ಗೆ 10 ಗಂಟೆಗೆ ಸಂಸತ್ತಿನ ಆವರಣದಲ್ಲಿರುವ ಮತಗಟ್ಟೆಯಲ್ಲಿ ಆರಂಭವಾದ 15ನೇ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಲು ಎಲ್ಲಾ ಪಕ್ಷಗಳ ನಾಯಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಚುನಾವಣೆಯ ಭಾಗವಾಗಿರುವ ರಾಜ್ಯ ಶಾಸಕರು ತಮ್ಮ ರಾಜ್ಯ ವಿಧಾನಸಭೆಗಳಿಂದ ಮತ ಚಲಾಯಿಸುತ್ತಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಮತ್ತಿತರ ನಾಯಕರು ಮತ ಚಲಾಯಿಸಿದರು. ಮಧ್ಯಾಹ್ನ 1 ಗಂಟೆಯವರೆಗೆ 350 ಜನಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಗಾಲಿ ಕುರ್ಚಿಯಲ್ಲಿ ಮತ ಹಾಕಲು ಬಂದ ಮನಮೋಹನ ಸಿಂಗ್ ಅವರು ನಿಶ್ಯಕ್ತರಾದಂತೆ ಕಾಣುತ್ತಿದ್ದರು. ಸಂಸತ್ತಿನ ಚುನಾಯಿತ ಸದಸ್ಯರು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲಾ ರಾಜ್ಯ ವಿಧಾನಸಭಾ ಸದಸ್ಯರು ರಾಷ್ಟ್ರಪತಿ ಆಯ್ಕೆಗೆ ಮತ ಚಲಾಯಿಸುತ್ತಿದ್ದಾರೆ. 

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಮತ ಚಲಾಯಿಸಿ, “ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಈ ಚುನಾವಣೆಯಲ್ಲಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ” ಎಂದು ಹೇಳಿದರು. 

ಈ ಸುದ್ದಿ ಓದಿದ್ದೀರಾ? ಮಾವೋವಾದಿಗಳೊಂದಿಗೆ ನಂಟು ಆರೋಪ: ಜಾರ್ಖಂಡ್‌ ಪತ್ರಕರ್ತ ರೂಪೇಶ್‌ ಕುಮಾರ್ ಬಂಧನ

ಇಂದಿನಿಂದ (ಜುಲೈ 12) ಮುಂಗಾರು ಅಧಿವೇಶನ ಪ್ರಾರಂಭವಾಗಿದ್ದು, ಆಗಸ್ಟ್‌ 12ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ 18 ಸಭೆಗಳು ನಡೆಯಲಿವೆ. 

ಮುರ್ಮುಗೆ ಬೆಂಬಲ

ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯ ಗೆಲ್ಲುವ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. 64 ವರ್ಷದ ಮುರ್ಮು ಜಯಿಸಿದರೆ ಬುಡಕಟ್ಟು ಸಮುದಾಯದ ಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ. ಬಹುತೇಕ ಪ್ರತಿಪಕ್ಷಗಳ ನಾಯಕರೂ ಮುರ್ಮುಗೆ ಒಲವು ತೋರಿರುವುದು ಅವರ ಗೆಲುವಿನ ಹಾದಿ ಸುಗಮಗೊಳಿಸಿದೆ ಎಂದು ರಾಜಕೀಯ ತಜ್ಞರು ಅಂದಾಜಿಸಿದ್ದಾರೆ.

ಪ್ರಜಾಪ್ರಭುತ್ವ ಉಳಿವಿಗೆ ಹಾಕುವಂತೆ ವಿನಂತಿಸಿದ ಸಿನ್ಹಾ

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಮತ ಚಲಾಯಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.  “ಪ್ರಜಾಪ್ರಭುತ್ವಕ್ಕೆ ಒಂದು ಸೂಕ್ತ ಹಾದಿ ನಿರ್ಮಿಸುವ ಅವಶ್ಯಕತೆಯಿದೆ. ಅದಕ್ಕಾಗಿ ಈ ಚುನಾವಣೆ ಮಹತ್ವಪಡೆದಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಎಲ್ಲಾ ಪಕ್ಷಗಳು ನನ್ನ ಪರವಾಗಿ ಮತ ಚಲಾಯಿಸುತ್ತವೆ ಎಂದು ಆಶಿಸುತ್ತೇನೆ” ಎಂದು ಯಶವಂತ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು. 

“ದೇಶದ ಎಲ್ಲಾ ಶಾಸಕರು ಮತ್ತು ಸಂಸದರು ನನ್ನ ಅಂತರಾಳದ ದನಿ ಕೇಳಬೇಕು. ನನ್ನನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಈ ಚುನಾವಣೆಗೆ ಚುನಾವಣಾಧಿಕಾರಿ. ಸಂಸತ್‌ನ 776 ಸದಸ್ಯರು ಮತ್ತು 4,033 ಶಾಸಕರು ಮತ ಚಲಾಯಿಸಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಎನ್‌ಡಿಎ ಅಭ್ಯಥಿ. ಯಶವಂತ ಸಿನ್ಹಾ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಒಟ್ಟು ಮತಗಳ ಸಂಖ್ಯೆ 10,86,431 ಆಗಿದೆ. ಇದರಲ್ಲಿ ಶಾಸಕರದ್ದು 5,43,231 ಮತಗಳಾದರೆ, 5,43,200 ಸಂಸದರ ಮತಗಳಾಗಿವೆ. 

ಜುಲೈ 21ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಜುಲೈ 25ರಂದು ನೂತನ ರಾಷ್ಟ್ರಪತಿಗಳು ಪ್ರಮಾಣವಚನ ಸ್ವೀಕರಿಸಿಲಿದ್ದಾರೆ.  ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಿಗದಿಯಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್