ಕೆಎಂಎಫ್‌ ನೌಕರರಿಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ: ಹೈಕೋರ್ಟ್

kmf
  • ಭ್ರಷ್ಟಾಚಾರವು ಸಾರ್ವಜನಿಕ ಆಡಳಿತಕ್ಕೆ ಅಪಾಯಕಾರಿ‌
  • ಸಮಾಜದಲ್ಲಿ ಬೇರೆ ಸ್ವರೂಪಗಳಲ್ಲಿ ವ್ಯಾಪಿಸಿರುವ ಲಂಚಗುಳಿತನ

ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನೌಕರರಿಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. 

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ನಂದಿನಿ ಹಾಲಿನ ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ ಕೃಷ್ಣಾರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

'ಕೆಎಂಎಫ್ ನೌಕರರು ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ವ್ಯಾಖ್ಯಾನಿಸಿರುವಂತೆ ಸಾರ್ವಜನಿಕ ಸೇವಕರಲ್ಲ. ಹಾಗಾಗಿ ಕಾಯಿದೆ ತನಗೆ ಅನ್ವಯಿಸುವುದಿಲ್ಲ' ಎಂದು ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದ ಕೃಷ್ಣಾರೆಡ್ಡಿ ಅವರು ಅರ್ಜಿ ಸಲ್ಲಿಸಿದ್ದರು. “ಅರ್ಜಿದಾರ ಕೃಷ್ಣಾರೆಡ್ಡಿ ಅವರ ಮೇಲೆ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪವಿದೆ. ಹೀಗಾಗಿ, ಅವರು ವಿಚಾರಣೆ ಎದುರಿಸಬೇಕಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಭ್ರಷ್ಟಾಚಾರವು ಸಾರ್ವಜನಿಕ ಆಡಳಿತಕ್ಕೆ ಅಪಾಯಕಾರಿ. ಸಮಾಜದಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಲಂಚಗುಳಿತನ ವ್ಯಾಪಿಸಿದೆ. ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರದೆಡೆಗೆ ಶೂನ್ಯ ಸಹಿಷ್ಣುತೆ ಅನಿವಾರ್ಯ’’ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

"ಅರ್ಜಿದಾರರು ನಂದಿನಿ ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಕೆಎಂಎಫ್ ಅಡಿ ಬರುತ್ತಾರೆ. ಈ ಕರ್ತವ್ಯವು ಸಾರ್ವಜನಿಕ ನಿಬಂಧನೆಗೆ ಒಳಪಟ್ಟಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಹಾಮಂಡಳವು ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ಅದರ ಉದ್ಯೋಗಿಗಳು ಕೂಡ ಸರ್ಕಾರದ ಉದ್ಯೋಗಿಗಳು ಎಂದು ಪರಿಗಣಿಸಲ್ಪಡುತ್ತಾರೆ. ಹೀಗಾಗಿ, ಅವರೂ ಭ್ರಷ್ಟಾಚಾರ ನಿಗ್ರಹ ಕಾಯಿದೆ ವ್ಯಾಪ್ತಿಗೆ ಒಳಪಡುತ್ತಾರೆ" ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಅಕ್ರಮ ಕಟ್ಟಡ ನಿರ್ಮಾಣ| ಬಿಬಿಎಂಪಿ ಕಾಯಿದೆಯಲ್ಲಿ ಶಿಕ್ಷೆ ಉಲ್ಲೇಖಿಸಲು ಕೋರಿಕೆ; ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಭ್ರಷ್ಟಾಚಾರ ನಿಗ್ರಹ ಕಾಯಿದೆ ಕುರಿತು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಉಲ್ಲೇಖಿಸಿರುವ ನ್ಯಾಯಾಲಯವು, "ಕೆಎಂಎಫ್ ಸಹಕಾರಿ ಸಂಘವಾಗಿದೆ. ಹೀಗಾಗಿ, ಅದನ್ನು ಸಾರ್ವಜನಿಕ ಸಿಬ್ಬಂದಿ ವ್ಯಾಪ್ತಿಗೆ ಒಳಪಡಿಸಬಹುದಾಗಿದೆ" ಎಂದು ಹೇಳಿದೆ.

ಎಸಿಬಿಯು 2021 ನವೆಂಬರ್‌ 20ರಂದು ಕೃಷ್ಣಾರೆಡ್ಡಿ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ದೂರು ದಾಖಲಿಸಿತ್ತು. ಕೃಷ್ಣಾರೆಡ್ಡಿ ಅವರು ಆದಾಯ ಮೀರಿ ಶೇಕಡಾ 107ರಷ್ಟು ಆಸ್ತಿ ಸಂಪಾದನೆ ಮಾಡಿರುವುದಾಗಿ ಅಧಿಕಾರಿಗಳು ಆರೋಪಿಸಿದ್ದರು.  

ನಿಮಗೆ ಏನು ಅನ್ನಿಸ್ತು?
0 ವೋಟ್