ವಿಚ್ಛೇದನ ಪಡೆಯಲು ʼತಲಾಖ್‌ ಇ ಹಸನ್‌ʼ ಸಮಂಜಸವಲ್ಲ: ಸುಪ್ರೀಂ‌ ಕೋರ್ಟ್

muslims
  • ತಲಾಖ್‌ಗೆ ಪ್ರತಿಯಾಗಿ ಮಹಿಳೆಯರ ಬಳಿ ಒಂದು ಆಯ್ಕೆಯಿದೆ 
  • ಮಹಿಳೆಯರು ʼಖುಲಾʼ ಮೂಲಕ ವಿಚ್ಛೇದನ ಪಡೆಯಬಹುದು

ʼತಲಾಖ್‌ ಇ ಹಸನ್ʼ ಎಂಬ ಮುಸ್ಲಿಂ ವೈಯಕ್ತಿಕ ಕಾನೂನಿನ ಮೂಲಕ ವಿಚ್ಛೇದನ ನೀಡುವುದು ಸಮಂಜಸವಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಿಂಗಳಿಗೊಮ್ಮೆ ತಲಾಖ್‌ ಎಂದು ಮೂರು ತಿಂಗಳು ಹೇಳಿ ವಿಚ್ಛೇದನ ನೀಡುವುದು ತರವಲ್ಲ ಎಂದು ಹೇಳಿರುವ ನ್ಯಾಯಾಲಯ, ತಲಾಖ್‌ಗೆ ಪ್ರತಿಯಾಗಿ ಮಹಿಳೆಯರ ಬಳಿಯೂ ಒಂದು ಆಯ್ಕೆ ಇದೆ. ಮಹಿಳೆಯರು 'ಖುಲಾ' ಮೂಲಕ ವಿಚ್ಛೇದನ ಪಡೆಯಬಹುದು ಎಂದು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎಂ ಎಂ ಸುಂದರ್‌ ಅವರನ್ನೊಳಗೊಂಡ ಪೀಠ ತಿಳಿಸಿದೆ. 

ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯದಿಂದ ಕೂಡಿರುವ ʼತಲಾಖ್‌ ಇ ಹಸನ್ʼ ಮೂಲಕ‌ ನೀಡುವ ವಿಚ್ಛೇದನದ ಸಾಂವಿಧಾನಿಕತೆ ಪ್ರಶ್ನಿಸಿ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪೀಠ ವಿಚಾರಣೆ ನಡೆಸುತ್ತಿದೆ. ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ಘೋಷಿಸಿದ್ದರೂ, ಸುಪ್ರೀಂ ಕೋರ್ಟ್ ʼತಲಾಖ್‌ ಇ ಹಸನ್‌ʼ ವಿಷಯದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. 

ಹಲವು ಪ್ರಕರಣಗಳಲ್ಲಿ ದಾಂಪತ್ಯ ಮುಂದುವರಿಸಲಾಗದ ದಂಪತಿಗೆ ವಿಚ್ಛೇದನ ನೀಡಲಾಗಿದೆ. ನೀವೂ ಕೂಡ ಮುಕ್ತವಾಗಿಯೇ ಹೇಳಬಹುದು. ಇದು ತ್ರಿವಳಿ ತಲಾಖ್‌ ಅಲ್ಲ, ನಿಮ್ಮ ಬಳಿಯೂ 'ಖುಲಾ' ಆಯ್ಕೆಯಿದೆ. ನೀವು ಒಟ್ಟಿಗೆ ಬಾಳಲು ಸಿದ್ಧರಿಲ್ಲ ಎಂದಾದರೆ, ಪರಸ್ಪರ ಒಪ್ಪಿಗೆಯಿಂದ ದೂರವಾಗಲು (ವಿಚ್ಛೇದನ) ಇಚ್ಛಿಸುತ್ತೀರಾ? ಎಂದು ನ್ಯಾಯಮೂರ್ತಿ ಕೌಲ್‌ ಅವರು ಅರ್ಜಿದಾರರನ್ನು ಪ್ರಶ್ನಿಸಿದರು.  

ಈ ಕುರಿತಂತೆ ಉತ್ತರಿಸಲು ಅರ್ಜಿದಾರೆ ಪರ ವಕೀಲೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಆಗಸ್ಟ್ 29ಕ್ಕೆ ವಿಚಾರಣೆ ಮುಂದೂಡಿ ಪೀಠ ಆದೇಶಿಸಿತು.  ‌

ಈ ಸುದ್ದಿ ಓದಿದ್ದೀರಾ?: ಮೂಲಭೂತ ಹಕ್ಕನ್ನು ಉಲ್ಲಂಘಿಸದಂತೆ ನ್ಯಾಯ ದೊರಕಿಸುವುದೇ ಸ್ವಾತಂತ್ರ್ಯ: ನ್ಯಾಯಮೂರ್ತಿ ವಿಜಯಕುಮಾರ್

ಏನಿದು ಪ್ರಕರಣ?

ಪತ್ರಕರ್ತೆ ಬೆನಜೀರ್ ಹೀನಾ ಅವರು ಅಡ್ವೊಕೇಟ್ ಆನ್ ರೆಕಾರ್ಡ್ ಅಶ್ವನಿ ಕುಮಾರ್ ದುಬೆ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಏಪ್ರಿಲ್ 19 ರಂದು ತನ್ನ ಪತಿ ತನಗೆ ಸ್ಪೀಡ್ ಪೋಸ್ಟ್ ಮೂಲಕ ಮೊದಲ ಕಂತಿನ ತಲಾಖ್ ಕಳುಹಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ನಂತರದ ತಿಂಗಳುಗಳಲ್ಲಿ ತನಗೆ ಎರಡನೇ ಮತ್ತು ಮೂರನೇ ನೋಟಿಸ್‌ಗಳು ಬಂದಿವೆ ಎಂದು ಅವರು ದೂರಿದ್ದಾರೆ. ಅಲ್ಲದೆ, ಈ ತಲಾಖ್‌ನಲ್ಲಿ ತಾರತಮ್ಯವಿದ್ದು, ಪುರುಷರಿಗೆ ಮಾತ್ರ ಮೀಸಲಾಗಿದೆ. ತಲಾಖ್, ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದ್ದು ಅಸಾಂವಿಧಾನಿಕವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.  

ನಿಮಗೆ ಏನು ಅನ್ನಿಸ್ತು?
0 ವೋಟ್