
- ನಾವಿಕಾ ಕುಮಾರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ
- ಕಾನೂನು ರೀತಿಯ ಪರಿಹಾರ ಕಂಡುಕೊಳ್ಳುವುದಕ್ಕೆ ನಿರೂಪಕಿಗೆ ಅವಕಾಶ
ಟಿವಿ ಚರ್ಚೆಯೊಂದರಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಕರ್ತೆ ನಾವಿಕಾ ಕುಮಾರ್ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ದೆಹಲಿ ಪೊಲೀಸರಿಗೆ ವರ್ಗಾಯಿಸಿದೆ.
"ಎಂಟು ವಾರಗಳವರೆಗೆ ನಾವಿಕಾ ಕುಮಾರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಈ ಅವಧಿಯಲ್ಲಿ ಅವರು ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಬಹುದು" ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಆದೇಶಿಸಿದೆ. ಅಲ್ಲದೆ, ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗುವ ಅವಕಾಶವನ್ನೂ ನಾವಿಕಾ ಕುಮಾರ್ಗೆ ನೀಡಲಾಗಿದೆ.
'ದೆಹಲಿ ಪೊಲೀಸ್ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್' (ಐಎಫ್ಎಸ್ಒ) ಘಟಕವು ಈ ಬಗ್ಗೆ ತನಿಖೆ ನಡೆಸಲಿದೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸುವಂತೆ ಅಥವಾ ಒಂದು ರಾಜ್ಯಕ್ಕೆ ವರ್ಗಾಯಿಸುವಂತೆ ಕೋರಿ ನಾವಿಕಾ ಕುಮಾರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆಗಸ್ಟ್ 8ರಂದು ನಾವಿಕಾ ಕುಮಾರ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು. ಅಲ್ಲದೆ, ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಏನಿದು ಪ್ರಕರಣ?
2022ರ ಮಾರ್ಚ್ 26ರಂದು ದೃಶ್ಯ ಮಾಧ್ಯಮವೊಂದರ ಚರ್ಚಾ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಖಂಡಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಹಲವಾರು ಮುಸ್ಲಿಂ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದವು. ಇದರಿಂದಾಗಿ ನೂಪುರ್ ಶರ್ಮಾ ಅವರನ್ನು ವಕ್ತಾರೆ ಸ್ಥಾನದಿಂದ ಬಿಜೆಪಿ ಅಮಾನತುಗೊಳಿಸಿತು.
ಈ ಸುದ್ದಿ ಓದಿದ್ದೀರಾ?: ಕೇವಲ 8 ತಿಂಗಳಲ್ಲಿ 46 ಸಾವಿರಕ್ಕೂ ಅಧಿಕ 'ಭ್ರಷ್ಟಾಚಾರದ ದೂರು' ಸ್ವೀಕರಿಸಿದ ಕೇಂದ್ರ ಸರ್ಕಾರ!
"ಆಕೆ ಮತ್ತು ಆಕೆಯ ಆಚಾರವಿಲ್ಲದ ನಾಲಿಗೆ ಇಡೀ ದೇಶವೇ ಹೊತ್ತಿ ಉರಿಯುವಂತೆ ಮಾಡಿದೆ. ದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಆಕೆಯೇ ಸಂಪೂರ್ಣ ಹೊಣೆ" ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ನೂಪುರ್ ಶರ್ಮಾ ದೇಶದ ಜನರ ಕ್ಷಮೆಯಾಚಿಸುವಂತೆ ಛೀಮಾರಿ ಹಾಕಿತ್ತು. ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ 10ಕ್ಕೂ ಹೆಚ್ಚು ಎಫ್ಐಆರ್ಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಟಿವಿ ಚರ್ಚೆಯಲ್ಲಿ ನಿರೂಪಕಿಯಾಗಿದ್ದ ನಾವಿಕಾ ಕುಮಾರ್ ವಿರುದ್ಧವೂ ದೇಶದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು.