ಹಾಸನ| ರಾಜಸ್ಥಾನದ ಮೃತ ದಲಿತ ಬಾಲಕನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ಆಗ್ರಹಿಸಿ ಪ್ರತಿಭಟನೆ

  • ಹಾಸನ ಡಿಸಿ ಕಚೇರಿ ಎದುರು ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಧರಣಿ
  • ದಲಿತರ ಹಿತರಕ್ಷಣಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒತ್ತಾಯ

“ರಾಜಸ್ಥಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕ ಮಡಕೆ ಮುಟ್ಟಿ ನೀರು ಕುಡಿದ ಕಾರಣಕ್ಕೆ ಹಲ್ಲೆ ನಡೆಸಿ ಬಾಲಕನನ್ನು ಹತ್ಯೆ ಮಾಡಲಾಗಿದೆ. ಆ ಬಾಲಕನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು” ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣದಾಸ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರಾನಾ ಎಂಬ ಹಳ್ಳಿಯಲ್ಲಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಒಂಬತ್ತು ವರ್ಷದ ಇಂದ್ರ ಮೇಘವಾಲ್ ಎಂಬ ಬಾಲಕನನ್ನು ಕುಡಿಯುವ ನೀರಿನ ಮಡಕೆ ಮುಟ್ಟಿ ಅಪವಿತ್ರಗೊಳಿಸಿದ ಎಂಬ ಕಾರಣಕ್ಕಾಗಿ ಅದೇ ಶಾಲೆಯ ಶಿಕ್ಷಕ ಚೈಲ್ ಸಿಂಗ್ ಅಮಾನುಷವಾಗಿ ಹಲ್ಲೆ ನಡೆಸಿದ ಪರಿಣಾಮವಾಗಿ ಆ ಬಾಲಕ ಮೃತಪಟ್ಟಿದ್ದಾನೆ. ಶಿಕ್ಷಕನ ಕ್ರೌರ್ಯ ಅತ್ಯಂತ ಖಂಡನೀಯ” ಎಂದರು. 

“ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ದಲಿತ ಬಾಲಕನನ್ನು ಬಲಿ ತೆಗೆದುಕೊಂಡಿರುವುದು ವಿಷಾದನೀಯ. ಭಾರತೀಯರು ವಿಶ್ವಗುರು ಎಂದು ಕರೆದುಕೊಳ್ಳುತ್ತಾರೆ. ಆದರೆ, ಒಂದು ಉತ್ತಮ ನಾಗರಿಕ ಸಮಾಜವನ್ನು ರೂಪಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಈ ಘಟನೆ ನಿದರ್ಶನ” ಎಂದು ಹೇಳಿದರು.

“ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿದ ನೋವು, ಅವಮಾನಗಳನ್ನು ಈ ಸಮಾಜ ಮರುನೆನಪು ಮಾಡಿಸುತ್ತಿದೆ. ಈ ರೀತಿಯ ಹಲ್ಲೆ, ದೌರ್ಜನ್ಯ ಮತ್ತು ದಲಿತ ಹಾಗೂ ಇತರೆ ಹೆಣ್ಣುಮಕ್ಕಳ ಮೇಲೆ ಮಾನಭಂಗ ಪ್ರಕರಣಗಳು ದೇಶದಾದ್ಯಂತ ಹೆಚ್ಚಾಗುತ್ತಿವೆ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ” ಎಂದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75| ಮಹಾಡ್ ಸತ್ಯಾಗ್ರಹದಿಂದ ಮೇಘವಾಲ್ ಸಾವಿನವರೆಗೆ ದಲಿತರ ದಾಹ ನೀಗಿಸದ ಸ್ವಾತಂತ್ರ್ಯ ಜೀವಜಲ! 

“ದಲಿತರ ಹಿತರಕ್ಷಣೆಗೆ ಇರುವ ಹಲವು ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಗೊಳಿಸದ ಕಾರಣ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿವೆ. ದಲಿತರ ಹಿತರಕ್ಷಣೆಗಾಗಿರುವ ಕಾನೂನುಗಳ ಶಿಸ್ತುಬದ್ಧ ಅನುಷ್ಠಾನದ ಜತೆಗೆ ಬಾಲಕನನ್ನು ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಕ್ಕೆ ಕೇಂದ್ರ ಮತ್ತು ರಾಜಸ್ಥಾನ ರಾಜ್ಯ ಸರ್ಕಾರ ಆರ್ಥಿಕ ಭದ್ರತೆ ಒದಗಿಸಬೇಕು” ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ರಾಜೇಶ್, ಹೆತ್ತೂರ್ ನಾಗರಾಜು, ರವಿ ನಾಕಲಗೂಡು, ವಿಜಯಕುಮಾರ್, ಸ್ಟೀವನ್ ಪ್ರಕಾಶ್, ಕೆ ಈರಪ್ಪ, ಕೊಟ್ರೇಶ್ ನಿಟ್ಟೂರ್, ಜಯದೇವಯ್ಯ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ ಜಿ ಪೃಥ್ವಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರದೀಪ್ ಹಾಗೂ ಇತರರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180