ಪಿಎಸ್‌ಐ ಅಕ್ರಮ | ಆರೋಪಿಗಳ ಬಂಧನಕ್ಕೂ ಮುನ್ನ ಅಣಕು ಪರೀಕ್ಷೆ

OMR
  • ಎಂಟು ಆರೋಪಿಗಳಿಗೂ ಪಿಎಸ್‌ಐ ಅಣಕು ಪರೀಕ್ಷೆ
  • ನಿಗದಿತ ಅಂಕ ಪಡೆಯಲು ಅಭ್ಯರ್ಥಿಗಳು ವಿಫಲ

ಸಿಐಡಿ ಅಧಿಕಾರಿಗಳು ಎಂಟು ಆರೋಪಿಗಳನ್ನು ಬಂಧಿಸುವುದಕ್ಕೂ ಮುನ್ನ ಆರೋಪಿಗಳು ಪ್ರಾಮಾಣಿಕವಾಗಿ ಪಿಎಸ್‌ಐ ಪರೀಕ್ಷೆ ಬರೆದಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಅಣಕು ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಬಹುತೇಕರು ನಿಗದಿತ ಅಂಕ ಪಡೆಯಲು ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. 

ಇದರಿಂದಾಗಿ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾದಂತಾಗಿದೆ. ಹಾಗಾಗಿ ಸಿಐಡಿ ಅಧಿಕಾರಿಗಳು ಅಭ್ಯರ್ಥಿಗಳಾದ ಜೇವರ್ಗಿಯ ಭಗವಂತರಾಯ ಜೋಗೂರ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮದ ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರಗೆ ಅವರನ್ನು ಬಂಧಿಸಿದ್ದಾರೆ.

"ಆರೋಪಿಗಳಾದ ಭಗವಂತರಾಯ ಮತ್ತು ರವಿರಾಜ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದಾನೆ. ಆರ್ ಡಿ ಪಾಟೀಲ ಅಳಿಯನೂ ಆಗಿರುವ ಸಿದ್ದುಗೌಡ ಪಾಟೀಲ ಯಾದಗಿರಿ ಜಿಲ್ಲೆ ಮುದ್ನಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕ ಆಗಿದ್ದಾನೆ. ಉಳಿದವರು ಕಲಬುರಗಿ ಮತ್ತು ವಿಜಯಪುರದಲ್ಲಿ ಕೆಲಸ ಮಾಡುತ್ತಿದ್ದರು.

ಈ ಸುದ್ದಿ ಓದಿದ್ದೀರಾ?: ಪಿಎಸ್‌ಐ ಅಕ್ರಮ | ಮೊದಲ ರ‍್ಯಾಂಕ್‌ಗೆ 30 ಲಕ್ಷ ರೂ ನೀಡಿದ್ದ ಯುವತಿ; ತನಿಖೆಯಿಂದ ಬಹಿರಂಗ

ಆರ್ ಡಿ ಪಾಟೀಲ ಪತ್ನಿಯ ತಮ್ಮನಾದ ಆರೋಪಿ ಸಿದ್ದುಗೌಡ ಪಾಟೀಲ ಯಾದಗಿರಿಯಲ್ಲಿ ಡಿಎಆರ್‌ ಕಾನ್‌ಸ್ಟೆಬಲ್‌ ಆಗಿದ್ದ. ಆರೋಗ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಸಿಕ್ಕ ಬಳಿಕ ಕಾನ್‌ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿದ್ದ. ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣ ಮಾಡಿಸಿಕೊಡಲು ಅಭ್ಯರ್ಥಿಗಳನ್ನು ಮಾವನ ಬಳಿ ಕರೆ ತರುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್