ಪಿಎಸ್‌ಐ ಅಕ್ರಮ | ಮೊದಲ ರ‍್ಯಾಂಕ್‌ಗೆ 30 ಲಕ್ಷ ರೂ ನೀಡಿದ್ದ ಯುವತಿ; ತನಿಖೆಯಿಂದ ಬಹಿರಂಗ

psi exam
  • ನ್ಯಾಯಾಲಯಕ್ಕೆ ಸಿಐಡಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ
  • 6ನೇ ರ‍್ಯಾಂಕ್‌ಗೆ 30 ಲಕ್ಷ ರೂ ನೀಡಿದ್ದ  ಪ್ರವೀಣ್‌ಕುಮಾರ್

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ, 30 ಲಕ್ಷ ರೂಪಾಯಿ ನೀಡಿದ್ದರು ಎಂಬ ಮಾಹಿತಿ ಸಿಐಡಿ ತನಿಖೆಯಿಂದ ಹೊರಬಿದ್ದಿದೆ.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ರಚನಾ ಮತ್ತು ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ನಡುವಿನ ಹಣದ ವ್ಯವಹಾರವನ್ನು ಸವಿವರವಾಗಿ ಉಲ್ಲೇಖಿಸಿದೆ.

"ವಿಜಯಪುರದ ಬಸವನಬಾಗೇವಾಡಿಯ ರಚನಾ, ಇಂಜಿನಿಯರಿಂಗ್ ಪದವೀಧರೆ. ಪಿಎಸ್ಐ ಹುದ್ದೆಗೆ ನೇಮಕಗೊಳ್ಳಲು ಮಧ್ಯವರ್ತಿಗಳ ಮೂಲಕ ಪೊಲೀಸ್ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷನನ್ನು ಸಂಪರ್ಕಿಸಿದ್ದರು. 35 ಲಕ್ಷ ರೂ. ನೀಡುವುದಾಗಿ ಒಪ್ಪಂದ ಮಾಡಿಕೊಂಡು, 30 ಲಕ್ಷ ರೂಪಾಯಿ ಮುಂಗಡವಾಗಿ ನೀಡಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

"ಹರ್ಷ ಈ ಹಣವನ್ನು ಡಿವೈಎಸ್‌ಪಿ ಶಾಂತಕುಮಾರ್‌ ಅವರಿಗೆ ನೀಡಿದ್ದ. ಮೊದಲೇ ಯೋಜಿಸಿದ ರೀತಿಯಲ್ಲಿ ವಿಭಾಗದ ಭದ್ರತಾ ಕೊಠಡಿಯಲ್ಲೇ ಒಎಂಆರ್‌ ಶೀಟ್‌ ತಿದ್ದಲಾಗಿತ್ತು" ಎಂಬ ಮಾಹಿತಿಯೂ ಚಾರ್ಜ್‌ಶೀಟ್‌ನಲ್ಲಿದೆ. 

"ಅಕ್ರಮ ಬಯಲಾಗುತ್ತಿದ್ದಂತೆ ಮರುಪರೀಕ್ಷೆ ನಡೆಸುವುದಾಗಿ ಸರ್ಕಾರ ಆದೇಶಿಸಿತ್ತು. ಇದರ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ರಚನಾ ಪಾಲ್ಗೊಂಡಿದ್ದರು. ನಂತರ, ವಿಚಾರಣೆಗಾಗಿ ನೋಟಿಸ್ ನೀಡುತ್ತಿದ್ದಂತೆ ರಚನಾ ತಲೆಮರೆಸಿಕೊಂಡಿದ್ದಾರೆ. ರಚನಾ ಕೃತ್ಯದ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಪ್ರಾಥಮಿಕ ಮಾಹಿತಿ ಮಾತ್ರ ಉಲ್ಲೇಖಿಸಲಾಗಿದೆ. ಅವರನ್ನು ಬಂಧಿಸಿದ ಬಳಿಕ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು" ಎಂದೂ ಉಲ್ಲೇಖಿಸಿದೆ.

30 ಲಕ್ಷ ರೂ ನೀಡಿದ್ದವ ಆರನೇ ರ‍್ಯಾಂಕ್

"ರಚನಾ ಜತೆಯಲ್ಲೇ ಮತ್ತೊಬ್ಬ ಅಭ್ಯರ್ಥಿ ಎಚ್‌ ಆರ್ ಪ್ರವೀಣ್‌ಕುಮಾರ್ ಎಂಬಾತ 30 ಲಕ್ಷ ರೂ. ನೀಡಿದ್ದ. ಈತ ಸಹ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದ.

ಈ ಸುದ್ದಿ ಓದಿದ್ದೀರಾ?: ಎಸ್‌ಡಿಎ ನೇಮಕಾತಿ | ಬ್ಲೂಟೂತ್‌ ಬಳಸಿ ಅಕ್ರಮ ಎಸಗಿರುವುದು ಸಾಬೀತು; ಮೂವರು ಡಿಬಾರ್‌

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊದಿಕೆ ಹೊಸಹಳ್ಳಿ ಗ್ರಾಮದ ಪ್ರವೀಣ್‌ ಕುಮಾರ್, 45 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 30 ಲಕ್ಷ ರೂ. ನೀಡಿದ್ದ. ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಉಳಿದ ಹಣ ನೀಡುವುದಾಗಿ ಹೇಳಿದ್ದ" ಎಂಬುದನ್ನು ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್