ಕ್ವಿಟ್‌ ಇಂಡಿಯಾ-80 | ಕರ್ನಾಟಕದಲ್ಲಿ ಚಳವಳಿಯ ಹೆಜ್ಜೆಗುರುತು

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೇ ಸ್ವತಂತ್ರಗೊಂಡ ಗ್ರಾಮ ಈಸೂರು. ಶಿವಮೊಗ್ಗ ಜಿಲ್ಲೆಯ ಈ ಗ್ರಾಮಕ್ಕೆ ಅತಿಕ್ರಮಣ‌ ಪ್ರವೇಶ ಮಾಡಲು ಬಂದ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳನ್ನು ತಡೆದು ನಿಲ್ಲಿಸಿ, ಖಾದಿ ಟೋಪಿಯನ್ನು ಧರಿಸಿದರೆ ಮಾತ್ರ ಗ್ರಾಮದ ಒಳಗೆ ಪ್ರವೇಶ ಎಂದು ಗ್ರಾಮಸ್ಥರು ತಾಕೀತು ಮಾಡಿದರು. ಹೋರಾಟಗಾರರನ್ನು ಕೆಣಕಿದ ಕಾರಣಕ್ಕೆ ಅಧಿಕಾರಿಗಳಿಗೇ ಟೋಪಿ ಹಾಕಿ ಅವರಿಂದ ಸ್ವತಂತ್ರ ಗ್ರಾಮಕ್ಕೆ ಜೈ ಎನ್ನುವ ಘೋಷಣೆ ಹಾಕಿಸಿದ್ದು ಈಗ ಇತಿಹಾಸ.
Quit india

ಭಾರತ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ಮಹತ್ವದ ಘಟ್ಟಗಳಲ್ಲಿ ʼಕ್ವಿಟ್ ಇಂಡಿಯಾ ಚಳವಳಿ'ಯೂ ಒಂದು.  ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು 1942ರ ಆಗಸ್ಟ್‌ 8ರಂದು ಮಹಾತ್ಮ ಗಾಂಧಿಯವರು 'ಕ್ವಿಟ್ ಇಂಡಿಯಾ ಚಳವಳಿ'ಗೆ ಕರೆ ಕೊಟ್ಟರು. 

'ಕ್ವಿಟ್‌ ಇಂಡಿಯಾ ಚಳವಳಿ' ನಡೆದು ಇಂದಿಗೆ 80 ವರ್ಷಗಳಾಗಿವೆ. ಗಾಂಧೀಜಿಯವರು ಮುಂಬೈನಲ್ಲಿ ತಮ್ಮ 50 ಮಂದಿ ಬೆಂಬಲಿಗರ ಜತೆಗೂಡಿ ʼಮಾಡು ಇಲ್ಲವೇ ಮಡಿʼ ಎಂಬ ಘೋಷಣೆಯೊಂದಿಗೆ ಈ ಚಳವಳಿ ಆರಂಭಿಸಿದರು. ಗಾಂಧಿಯವರ ಈ ಕರೆ ದೇಶದಾದ್ಯಂತ ಮಿಂಚಿನ ಸಂಚಾರ ಉಂಟುಮಾಡಿತು. ಕೊನೆಗೆ ಬ್ರಿಟಿಷರು ಗಾಂಧಿಯವರನ್ನು ಬಂಧಿಸಿ ಅಗಾಖಾನ್‌ ಅರಮನೆಯಲ್ಲಿಟ್ಟರು.

ಗಾಂಧಿಯವರ ಬಂಧನದ ನಂತರ ಜಯಪ್ರಕಾಶ ನಾರಾಯಣ, ಲೋಹಿಯಾ, ಅರುಣಾ ಆಸಿಫ್‌ ಅಲಿ ಚಳವಳಿಯ ನೇತೃತ್ವ ವಹಿಸಿದರು. ಚಳವಳಿಯ ತೀಕ್ಷ್ಣತೆಯನ್ನು ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಜೈಲಿಗಟ್ಟಿದರು. ನಾಯಕರಿಲ್ಲದೆಯೇ ಉಗ್ರ ಸ್ವರೂಪ ಕಂಡಿದ್ದು ಈ ಚಳವಳಿಯ ಹೆಗ್ಗಳಿಕೆ. 

ಈ ಚಳವಳಿಯಿಂದಾಗಿ ಇಡೀ ದೇಶದಲ್ಲೇ ಕ್ರಾಂತಿಯ ಅಲೆ ಎದ್ದಿತು. ದೇಶದ ಮೂಲೆ ಮೂಲೆಯಲ್ಲೂ ʼಮಾಡು ಇಲ್ಲವೇ ಮಡಿʼ ಎಂಬ ಘೋಷಣೆಯು ಜನರನ್ನು ಬಡಿದೆಬ್ಬಿಸಿತು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಚಳವಳಿಗೆ ಧುಮುಕಿದರು. ಕ್ವಿಟ್‌ ಇಂಡಿಯಾ ಚಳವಳಿಯ ಜ್ವಾಲೆಗಳು ಬ್ರಿಟಿಷ್‌ ಆಡಳಿತದ ಬೇರನ್ನೇ ಅಲುಗಾಡಿಸಿದವು. ಅದರ ಕಾವಿನ ಪರಿಣಾಮವೇ ಐದು ವರ್ಷಗಳ ಬಳಿಕ ನಾವು (1947ರ ಆಗಸ್ಟ್‌ 15) ಗಳಿಸಿದ ಸ್ವಾತಂತ್ರ್ಯ.

ಕ್ವಿಟ್‌ ಇಂಡಿಯಾ ಚಳವಳಿ ಮತ್ತು ಕರ್ನಾಟಕ

ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಕೊನೆಗಾಣಿಸಲು ಹುಟ್ಟಿಕೊಂಡ ಈ ಚಳವಳಿ ಇಡೀ ದೇಶಕ್ಕೇ ವ್ಯಾಪಿಸಿತು. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ರಾಜ್ಯದಲ್ಲೂ ಕ್ವಿಟ್ ಇಂಡಿಯಾ ಚಳವಳಿ ಪ್ರತಿಧ್ವನಿಸಿತು.

ಕರ್ನಾಟಕದ ಕೆಲವು ಹಳ್ಳಿಗಳ ಜನ ಬ್ರಿಟಿಷರ ವಿರುದ್ಧ ಬೀದಿಗಿಳಿದರು. ಧಾರವಾಡ ಜಿಲ್ಲೆಯ ಮೊರಬ ಮತ್ತು ಬ್ಯಾಹಟ್ಟಿ, ಗದಗ ಜಿಲ್ಲೆಯ ಕೋಗನೂರ ಗ್ರಾಮಗಳ ಮನೆ ಮನೆಯಿಂದಲೂ ಜನ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. 1942ರ ಈ 'ಕ್ವಿಟ್‌ ಇಂಡಿಯಾ ಚಳವಳಿ' ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿತು.

ಈ ಮೂರೂ ಗ್ರಾಮಗಳ ವಿದ್ಯಾರ್ಥಿಗಳು ಗಾಂಧಿಯವರ 'ಮಾಡು ಇಲ್ಲವೇ ಮಡಿ' ಘೋಷಣೆಯಿಂದ ಪ್ರೇರೇಪಿತಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಜಿಗಿದರು. ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ವೇಳೆ ಸ್ಥಳೀಯ ಮುಖಂಡರನ್ನೂ ಬಂಧಿಸಲಾಗಿತ್ತು. ಇದರಿಂದಾಗಿ ರೊಚ್ಚಿಗೆದ್ದ ಸ್ಥಳೀಯ ಯುವಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಳವಳಿಯಲ್ಲಿ ಭಾಗವಹಿಸಿದರು. 

ಏಸೂರು ಬಿಟ್ಟರೂ ಈಸೂರು ಬಿಡೆವು

ಗಾಂಧೀಜಿ ಕರೆಗೆ ಓಗೊಟ್ಟ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಜನತೆ 1942 ಆಗಸ್ಟ್‌ 9ರಂದು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದರು. 1942 ಸೆಪ್ಟೆಂಬರ್ 27ರಂದು ಈಸೂರು ಗ್ರಾಮದ ಜನತೆ "ಈಸೂರು ಸ್ವತಂತ್ರ ಗ್ರಾಮ, ಬ್ರಿಟಿಷರಿಗೆ ಪ್ರವೇಶವಿಲ್ಲ" ಎಂಬ ನಾಮ ಫಲಕವನ್ನು ಊರ ಪ್ರವೇಶ ದ್ವಾರಕ್ಕೆ ಹಾಕಿದ್ದರು. ಈ ಮೂಲಕ ಭಾರತ ದೇಶ ಸ್ವತಂತ್ರವಾಗುವುದಕ್ಕೂ ಮುನ್ನವೇ ಈಸೂರು ಸ್ವತಂತ್ರವಾಗಿತ್ತು.  

ಸ್ವಾತಂತ್ರ್ಯ ಗ್ರಾಮಕ್ಕೆ ಅತಿಕ್ರಮಣ‌ ಪ್ರವೇಶ ಮಾಡಲು ಬಂದ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳನ್ನು ತಡೆದು ನಿಲ್ಲಿಸಿ, ಖಾದಿ ಟೋಪಿಯನ್ನು ಧರಿಸಿದರೆ ಮಾತ್ರ ಗ್ರಾಮದ ಒಳಗೆ ಪ್ರವೇಶ ಎಂದು ಗ್ರಾಮಸ್ಥರು ತಾಕೀತು ಮಾಡಿದರು.

ಹೋರಾಟಗಾರರನ್ನು ಕೆಣಕಿದ ಕಾರಣಕ್ಕೆ ಅಧಿಕಾರಿಗಳಿಗೇ ಟೋಪಿ ಹಾಕಿ ಅವರಿಂದ ಸ್ವತಂತ್ರ ಗ್ರಾಮಕ್ಕೆ ಜೈ ಎನ್ನುವ ಘೋಷಣೆ ಹಾಕಿಸಿದ್ದು ಹೋರಾಟದ ತೀವ್ರತೆಗೆ ಸಾಕ್ಷಿ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | “ಭಾರತ ಬಿಟ್ಟು ತೊಲಗಿ ದಿನ”; ಗಾಂಧಿ ಪ್ರತಿಮೆಗೆ ಮಾಲಾರ್ಪಣೆ

ಇದನ್ನು ವಿರೋಧಿಸಿದ ಅಧಿಕಾರಿ ಮತ್ತು ಗ್ರಾಮಸ್ಥರ‌ ನಡುವೆ ಗಲಾಟೆ ನಡೆಯಿತು. ಬ್ರಿಟಿಷರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವಿನ ದೊಡ್ಡ ಸಂಘರ್ಷವೇ ನಡೆಯಿತು. ಗಲಾಟೆ ವಿಕೋಪಕ್ಕೆ ತಿರುಗಿ, ಇನ್ಸ್‌ಪೆಕ್ಟರ್ ಕೆಂಚೇಗೌಡ ಮತ್ತು ತಹಶೀಲ್ದಾರ್‌ ಚನ್ನಬಸಪ್ಪ ಅವರನ್ನು ಗ್ರಾಮಸ್ಥರು ಕೊಂದು ಹಾಕಿದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಬ್ರಿಟಿಷರು ಗ್ರಾಮಸ್ಥರ ಮೇಲೆ ಪೊಲೀಸ್ ದರ್ಪವನ್ನು ಮೆರೆದರು. ಗ್ರಾಮದ ಬಹುತೇಕರನ್ನು ಬಂಧಿಸಿದರು. ಇದರಿಂದ ಗ್ರಾಮದ ಯುವಕರು ತಿಂಗಳುಗಟ್ಟಲೆ ಮನೆ ಬಿಟ್ಟು ಕಾಡಿನಲ್ಲಿ ವಾಸಿಸುವಂತಾಗಿತ್ತು. 

ಪ್ರಕರಣದ ವಿಚಾರಣೆ ನಡೆಸಿದ ಬ್ರಿಟಿಷ್ ನ್ಯಾಯಾಲಯ ಕೊನೆಗೆ ಐವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. 40 ಕ್ಕೂ ಹೆಚ್ಚು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಈಸೂರು ಗ್ರಾಮ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿಯೇ ಮಹತ್ವದ ಪಾತ್ರವನ್ನು ವಹಿಸಿತ್ತು. ಇಡೀ ದೇಶವೇ ಈ ಗ್ರಾಮದ ಹೋರಾಟ, ಎದೆಗಾರಿಕೆ, ಸ್ವರಾಜ್ಯದ ಚಿಂತನೆಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್