ದಲಿತ ದೌರ್ಜನ್ಯ | ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಬಂಧನ: ಆರೋಪಿಗಳ ವಿರುದ್ಧ ಎಫ್ಐಆರ್

  • ಪರಮಜಿತ್ ಬಳಿ ಗುತ್ತಿಗೆ ಆಧಾರದಲ್ಲಿ ಜೀತದಾಳಾಗಿ ಕೆಲಸ
  • ತಂಗಿಯ ಮದುವೆ ಕಾರಣಕ್ಕೆ ಪರಮಜಿತ್ ಬಳಿ ಸಾಲ

ಜೀತದಾಳಾಗಿ ಮುಂದುವರಿಯಲು ನಿರಾಕರಿಸಿದ ಕಾರಣಕ್ಕಾಗಿ ದಲಿತ ವ್ಯಕ್ತಿಯಲ್ಲಿ ಸರಪಳಿಯಿಂದ ಕಟ್ಟಿ ದನದ ಕೊಟ್ಟಿಗೆಯಲ್ಲಿ ಕೂಡಿಟ್ಟು, 31 ಗಂಟೆಗಳ ಕಾಲ ಆಹಾರ ನೀಡದೆ ಚಿತ್ರಹಿಂಸೆ ನೀಡಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 

ಬುಂಡಿ ಜಿಲ್ಲೆಯ ಬಿಲುಬಾ ಗ್ರಾಮದ ನಿವಾಸಿ, ದಲಿತ ರಾಧೇಶ್ಯಾಮ್ ಮೇಘವಾಲ್‌ ಎಂಬವರು ಮೂರು ವರ್ಷದ ಹಿಂದೆ ಅಲ್ಪಾ ನಗರದ ಪರಮಜಿತ್ ಸರ್ದಾರ್‌ ಎಂಬಾತನ ಬಳಿ ಸಾಲ ಪಡೆದುಕೊಂಡಿದ್ದರು. ಸಾಲ ತೀರುವವರೆಗೆ ಸರ್ದಾರ್‌ ಹೊಲದಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದರು. ಸತತ ಮೂರು ವರ್ಷಗಳಿಂದ ಜೀತಕ್ಕೆ ದುಡಿದ ಮೇಘವಾಲ್‌ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ, ಕೆಲಸ ತೊರೆದಿದ್ದರು. 

ಆದರೆ, ಇನ್ನೂ ಸಾಲ ತೀರಿಲ್ಲವೆಂದು ಮೇಘವಾಲ್‌ರನ್ನು ಪರಮಜಿತ್ ಸರ್ದಾರ್ ಹಾಗೂ ಆತನ ಸಹೋದರ ಎಳೆತಂದು, ದನದ ಕೊಟ್ಟಿಗೆಯಲ್ಲಿ ಕೂಡಿಟ್ಟು, ಸರಪಳಿಯಿಂದ ಕಟ್ಟು, ಆಹಾರವನ್ನೂ ನೀಡದೆ ಚಿತ್ರಹಿಂಸೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

“ಮೇಘವಾಲ್ ಅವರನ್ನು ದನದ ಕೊಟ್ಟಿಗೆಯಲ್ಲಿ ಸರಪಳಿಯಲ್ಲಿ ಇರಿಸಲಾಗಿತ್ತೆಂದು ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ತಂಡಗಳನ್ನು ರಚಿಸಿದ್ದೇವೆ” ಎಂದು ಪೊಲೀಸ್ ಉಪ ಅಧೀಕ್ಷಕ ಶಂಕರ್ ಲಾಲ್ ಮೀನಾ ಹೇಳಿದ್ದಾರೆ.

“ಮೇ 22 ರಂದು ಪರಮ್‌ಜಿತ್‌ ಅವರ ಕಿರಿಯ ಸಹೋದರ ಮತ್ತು ನಾಲ್ವರು ಸ್ನೇಹಿತರು ನನ್ನನ್ನು ನಿಂದಿಸಿ, ಎಳೆದೊಯ್ದರು. ಕಬ್ಬಿಣದ ಪೈಪುಗಳಿಂದ ಹಲ್ಲೆ ಮಾಡದರು. ಸರಪಳಿಯಿಂದ ಕಟ್ಟಿ ಹಿಂಸೆ ನೀಡಿದರು. ಸುಮಾರು 31 ಗಂಟೆಗಳ ಕಾಲ ಆಹಾರ ನೀಡದೆ, ಹಸಿವಿನಿಂದ ಬಳಲುವಂತೆ ಮಾಡಿದರು” ಎಂದು ಮೇಘವಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

“ಪರಮಜಿತ್ ಬಳಿ 2019ರಲ್ಲಿ ಗುತ್ತಿಗೆ ಆಧಾರದ ಕೆಲಸಕ್ಕೆ ಸೇರಿದ್ದೆ, 12 ತಿಂಗಳಲ್ಲಿ 70 ಸಾವಿರ ದುಡಿದಿದ್ದೆ. ತಂಗಿಯ ಮದುವೆಗಾಗಿ ಆ ಹಣದ ಜೊತೆಗೆ 30 ಸಾವಿರ ಸಾಲ ಪಡೆದುಕೊಂಡಿದ್ದೆ. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಅಲ್ಲಿ ಕೆಲಸ ತೊರೆದೆ. ಆತನ ಎಲ್ಲ ಸಾಲವನ್ನು ತೀರಿಸಿದ್ದೇನೆ. ಮಾತ್ರವಲ್ಲದೆ, 3% ಬಡ್ಡಿಯನ್ನೂ ಪಾವತಿಸಿದ್ದೇನೆ. ಹಾಗಿದ್ದರೂ, ಇನ್ನೂ ಒಂದು ಲಕ್ಷ ಸಾಲ ಮರುಪಾವತಿಸಬೇಕೆಂದು ಪರಮಜಿತ್ ಹೇಳುತ್ತಿದ್ದಾರೆ. 2021ರಲ್ಲಿ ನನ್ನನ್ನು ಬಲವಂತವಾಗಿ ಕರೆದೊಯ್ದು ಹತ್ತು ದಿನಗಳವರೆಗೆ ಯಾವುದೇ ಸಂಭಾವನೆ ನೀಡದೆ ಗೋಧಿ ಕೊಯ್ಲು ಮಾಡಿಸಿದ್ದರು” ಎಂದು ಮೇಘವಾಲ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. 

ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 365 (ಅಪಹರಣ), 342(ಬಂಧಿಸಿಟ್ಟಿದ್ದಕ್ಕೆ ಶಿಕ್ಷೆ), 343 (ಮೂರು ಅಥವಾ ಹೆಚ್ಚಿನ ದಿನಗಳವರೆಗೆ ಬಂಧನ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್