ರಾಜಸ್ಥಾನ| ಸಾಲ ಹಿಂದಿರುಗಿಸುವಂತೆ ಕೇಳಿದ ದಲಿತ ಶಿಕ್ಷಕಿಯ ಸಜೀವ ದಹನ

  • ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿರದ ಪೊಲೀಸರು
  • ಶೇ.70ರಷ್ಟು ಸುಟ್ಟು ಹೋಗಿದ್ದ ಶಿಕ್ಷಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ

ರಾಜಸ್ಥಾನದ ಜಾಲೋರ್‌ನ ದಲಿತ ಬಾಲಕನ ಹತ್ಯೆ ಪ್ರಕರಣ ಚರ್ಚೆಯಲ್ಲಿ ಇರುವಾಗಲೇ ಅದೇ ರಾಜ್ಯದಲ್ಲಿ ದಲಿತರ ಮೇಲಿನ ಅಮಾನುಷ ದಾಳಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ದಲಿತ ಶಿಕ್ಷಕಿಯೊಬ್ಬರು ತಾವು ನೀಡಿದ್ದ ಸಾಲವನ್ನು ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಆಕೆಯ ಮೇಲೆ ಪಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಜೈಪುರ ಮೂಲದ ಅನಿತಾ ರೇಗಾರ್ (35) ಮೃತ ಶಿಕ್ಷಕಿ. ಜೈಪುರದ ರೈಸರ್ ಗ್ರಾಮದಲ್ಲಿ ಆಗಸ್ಟ್ 10 ರಂದು ಬೆಳಿಗ್ಗೆ ಎಂಟು ಗಂಟೆಗೆ ರೇಗಾರೋನಲ್ಲಿ ವಾಸವಾಗಿರುವ ಶಿಕ್ಷಕಿ ಅನಿತಾ ರೇಗಾರ್(32) ತನ್ನ ಮಗ ರಾಜವೀರ್(6) ಅವರೊಂದಿಗೆ ವೀಣಾ ಸ್ಮಾರಕ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಕೆಲ ದುಷ್ಕರ್ಮಿಗಳು ಅವರನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ.

ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಅನಿತಾ ಸಮೀಪದ ಮನೆಗೆ ಪ್ರವೇಶಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಬಹಳ ಸಮಯ ಕಳೆದರೂ ಪೊಲೀಸರು ಅಲ್ಲಿಗೆ ಆಗಮಿಸಲಿಲ್ಲ.

ಇದಾದ ಬಳಿಕ ಅವಕಾಶ ಸಿಕ್ಕ ಕೂಡಲೇ ದುಷ್ಕರ್ಮಿಗಳು ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅನಿತಾ ಸಹಾಯಕ್ಕಾಗಿ ಕಿರುಚಾಡುತ್ತಿದ್ದರೂ ಯಾರೂ ನೆರವಿಗೆ ಬರಲಿಲ್ಲ. ವಿಷಯ ತಿಳಿದು ಶಿಕ್ಷಕಿಯ ಪತಿ ತಾರಾಚಂದ್ ತನ್ನ ಕುಟುಂಬ ಸದಸ್ಯರೊಂದಿಗೆ ಸ್ಥಳಕ್ಕಾಗಮಿಸಿ ಪತ್ನಿಯನ್ನು ಜಾಮ್ವರಗಢದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಶೇ.70ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಅನಿತಾ ಅವರನ್ನು ಪ್ರಥಮ ಚಿಕಿತ್ಸೆ ಬಳಿಕ ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆಗೆ ಸ್ಪಂಧಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಜೈಪುರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮನೀಶ್ ಅಗರವಾಲ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆ ಆಸ್ಪತ್ರೆಯಲ್ಲಿ ನೀಡಿರುವ ಹೇಳಿಕೆಯ ಆಧಾರದ ಮೇಲೆ ಕೆಲವು ಮಹಿಳೆಯರು ಸೇರಿದಂತೆ ಆಕೆಯ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

2.5 ಲಕ್ಷ ಸಾಲ ನೀಡಿದ್ದರು

ದಲಿತ ಶಿಕ್ಷಕಿ ಅನಿತಾ ಆರೋಪಿಗಳಿಗೆ 2.5 ಲಕ್ಷ ರೂಪಾಯಿ ಸಾಲ ನೀಡಿದ್ದರು. ಹಲವು ದಿನಗಳಿಂದ ಶಿಕ್ಷಕಿ ಆರೋಪಿಯಿಂದ ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದರು. ಪದೇಪದೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆರೋಪಿಗಳು ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಅನಿತಾ ಮೇ 7ರಂದು ರೈಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಿಕ್ಷಕಿಯ ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಎರಡನೇ ಬಾರಿ ಮಹಿಳಾ ಶಿಕ್ಷಕಿ ಹಣ ಕೇಳಿದಾಗ ದುಷ್ಕರ್ಮಿಗಳು ದಾಳಿ ನಡೆಸಿ ಜೀವಂತ ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ| ರಸ್ತೆ ದುರವಸ್ಥೆ: ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತು ತಂದರೂ ಕಣ್ಣುಮುಚ್ಚಿದ ಅವಳಿ ಮಕ್ಕಳು!

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಘಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪುನಿಯಾ, ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯದ ಮುಖ್ಯಮಂತ್ರಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ರಾಜ್ಯದಲ್ಲಿ ಇಂತಹ ಅನೇಕ ದುರಂತ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ 18 ಅತ್ಯಾಚಾರಗಳು ಮತ್ತು ಏಳು ಕೊಲೆಗಳು ನಡೆಯುತ್ತಿವೆ" ಎಂದು ಆರೋಪಿಸಿದ್ದಾರೆ.

“ಅಪರಾಧಿಗಳಿಗೆ ಯಾವುದೇ ಭಯವಿಲ್ಲ, ಏಕೆಂದರೆ ಅವರಿಗೆ ಏನೂ ಆಗುವುದಿಲ್ಲ, ಸಾಮಾನ್ಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಮತ್ತು ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ರಾಜ್ಯ ಸರ್ಕಾರದ ಕಾನೂನು ಲೋಪ, ನಿರ್ಲಕ್ಷ್ಯದಿಂದಾಗಿ ಇಂತಹ ಪ್ರಕರಣಗಳು ಪದೇಪದೆ ಮರುಕಳಿಸುತ್ತಿವೆ" ಕಿಡಿಕಾರಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180