ರಾಜಸ್ಥಾನ | ನಾಪತ್ತೆಯಾಗಿದ್ದ ದಲಿತ ಬಾಲಕ ಶವವಾಗಿ ಪತ್ತೆ; ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು

  • ಶಿಕ್ಷಕ ಥಳಿಸಿದ್ದರಿಂದ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದ ಬಾಲಕ
  • ಶಾಲೆಗೆ ಮುತ್ತಿಗೆ ಹಾಕಿದ ಪೋಷಕರಿಂದ ಪೀಠೋಪಕರಣ ಧ್ವಂಸ ಯತ್ನ

ಎರಡು ದಿನಗಳಿಂದ ನಾಪತ್ತೆಯಾಗಿದ್ದ ದಲಿತ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದು, ಘಟನೆಯ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕರ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಆದರೆ, ಗ್ರಾಮಸ್ಥರ ದಾಳಿಯಿಂದ ತಪ್ಪಿಸಿಕೊಂಡು ಶಿಕ್ಷಕರು ಪರಾರಿಯಾಗಿರುವ ಘಟನೆ ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಸೂದಾ ಪಟ್ಟಣದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಆರ್ಯನ್ ಎಂಬ ವಿದ್ಯಾರ್ಥಿ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಎಂದು ತನಿಖೆ ನಡೆಸುತ್ತಿರುವ ಅಜ್ಮೀರ್ ಜಿಲ್ಲೆಯ ಮಸೂದಾ ಪೊಲೀಸರು ತಿಳಿಸಿದ್ದಾರೆ. 

ಆರ್ಯನ್ ಶಾಲೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ. ಆದರೆ, ಸಂಜೆಯವರೆಗೂ ಶಾಲೆಗೂ ಹೋಗಿಲ್ಲ ಮತ್ತು ಮನೆಗೆ ಹಿಂತಿರುಗಿಲ್ಲ. ಹಾಗಾಗಿ ಆತನ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎರಡು ದಿನಗಳ ಬಳಿಕ ಮಸೂದಾ ಪ್ರದೇಶದಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು.

ಅಜ್ಮೇರ್‌ನ ಮಸೂದಾದಲ್ಲಿ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ್ದಾರೆ. ಈ ವೇಳೆ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಅಲ್ಲದೆ ಕೋಪಗೊಂಡ ಗ್ರಾಮಸ್ಥರು ಶಾಲೆಯನ್ನು ಧ್ವಂಸ ಮಾಡಲು ಮುಂದಾದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೇವಾರ ಸಿಇಒ ಸುಮಿತ್ ಮೆಹರ್ದಾ ಗ್ರಾಮಸ್ಥರ ಮನವೊಲಿಸಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ದಲಿತ ವಿಶೇಷಚೇತನ ಬಾಲಕಿಯ ಕೈ ಮೇಲೆ ಕುದಿಯುವ ಸಾಂಬರ್ ಸುರಿದ ಮುಖ್ಯ ಶಿಕ್ಷಕ

ಕೆಲವು ದಿನಗಳ ಹಿಂದೆ ಶಾಲೆಯ ಮುಖ್ಯಶಿಕ್ಷಕ ಈ ವಿದ್ಯಾರ್ಥಿಯನ್ನು ಥಳಿಸಿ ಬೆದರಿಕೆ ಹಾಕಿದ್ದರು. ಅಂದಿನಿಂದ ಶಾಲೆಗೆ ಹೋಗಲು ಬಾಲಕ ಹಿಂಜರಿಯುತ್ತಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180