ರಾಜಸ್ಥಾನ | ದಲಿತ ಯುವಕನ ತಲೆಗೆ ಚಪ್ಪಲಿಯಿಂದ ಹೊಡೆದ ಗ್ರಾಮದ ಪಟೇಲ

  • ಗ್ರಾಮದ ಯುವತಿಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಿಂಗಳ ಹಿಂದಿನ ಘಟನೆ 

ಗ್ರಾಮದ ಯುವತಿಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಊರಿನ ಪಟೇಲ ದಲಿತ ಯುವಕನ ತಲೆಗೆ ಚಪ್ಪಲಿಯಿಂದ ಐದು ಏಟು ಹೊಡೆದಿರುವ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. 

ವ್ಯಕ್ತಿಯೊಬ್ಬ ಕುರ್ಚಿಯ ಮೇಲೆ ಕುಳಿತು ಯುವಕನ ತಲೆಗೆ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ರಾಜಸ್ಥಾನದ ಅಲ್ವಾರ್‌ನ ತಿಜಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಭಿಂದೂಸಿ ಗ್ರಾಮದಲ್ಲಿ ನಡೆದಿದೆ. ದಲಿತ ಯುವಕ ಪವನ್ ಜಾತವ್, ಭಿಂದೂಸಿ ಗ್ರಾಮದ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಭಿಂದೂಸಿ ಗ್ರಾಮದಲ್ಲಿ ಪಟೇಲರು ಪಂಚಾಯಿತಿ ಕರೆದಿದ್ದರು. ಪಂಚರ ಸಭೆಗೆ ದಲಿತ ಯುವಕನನ್ನು ಕರೆಸಲಾಗಿತ್ತು. ಕುರ್ಚಿಯ ಮೇಲೆ ಕುಳಿತಿದ್ದ ಪಟೇಲರ ಮುಂದೆ ಕುಳಿತುಕೊಳ್ಳಲು ಯುವಕನಿಗೆ ಸೂಚಿಸಲಾಗಿದೆ. ಪಟೇಲ್ ಕಾಲಿನಿಂದ ಚಪ್ಪಲಿ ತೆಗೆದು ಯುವಕನ ತಲೆಗೆ ಐದು ಏಟು ಹೊಡೆದಿದ್ದಾನೆ. ಮತ್ತೆ ತಪ್ಪು ಮಾಡಿದರೆ ಕಠಿಣ ಶಿಕ್ಷೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾನೆ. 

ಪಂಚರ ತೀರ್ಪಿನ ನಂತರ ದಲಿತ ಯುವಕನ ಮೇಲೆ ಯುವತಿಯರಿಗೆ ಕಿರುಕುಳ ನೀಡಿದ ಆರೋಪ ಹೊರಿಸಿ ಶಿಕ್ಷೆಯಾಗಿ ಚಪ್ಪಲಿಯಿಂದ ತಲೆಗೆ ಐದು ಏಟು ಹೊಡೆಯಲಾಗಿದೆ. ಈ ಘಟನೆಯನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

“ಪವನ್ ಯಾರಿಗೂ ಕಿರುಕುಳ ನೀಡಿಲ್ಲ. ಹಳ್ಳಿಯ ಹುಡುಗಿಯರು ಹೋಗುತ್ತಿದ್ದ ವೇಳೆ, ಅವನು ಗುಟ್ಕಾ ತಿನ್ನಲು ದಾರಿಯಲ್ಲಿ ನಿಲ್ಲಿಸಿದ್ದ. ನನ್ನ ಮಗ ಯಾರಿಗೂ ಕಿರುಕುಳ ನೀಡಿಲ್ಲ” ಎಂದು ಪವನ್ ತಂದೆ ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ ? ಮುಸ್ಲಿಂ ವಿರೋಧಿ ವಿಷಯವುಳ್ಳ ಟ್ವೀಟ್‌ಗಳು ಭಾರತದಲ್ಲಿಯೇ ಹೆಚ್ಚು: ಐಸಿವಿ ವರದಿ

ಘಟನೆ ಕುರಿತು ತಿಜಾರಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ರಾಜ್‌ಪಾಲ್‌ ಸಿಂಗ್ ಮಾತನಾಡಿ, “ವಿಡಿಯೋ ಒಂದರಿಂದ ಒಂದೂವರೆ ತಿಂಗಳ ಹಳೆಯದು. ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಹಾಗಾಗಿ ಯಾರನ್ನೂ ಬಂಧಿಸಿಲ್ಲ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್