ರಾಜಸ್ಥಾನ| ಪ್ರತಿಭಟನಾನಿರತ ಭೀಮ್ ಆರ್ಮಿ ಕಾರ್ಯಕರ್ತರ ಮೇಲೆ ಪೋಲಿಸ್ ಲಾಠಿ ಚಾರ್ಜ್

  • ಮೃತ ದಲಿತ ಬಾಲಕನ ಕುಟುಂಬಕ್ಕೆ 50 ಲಕ್ಷ ಪರಿಹಾರ, ಉದ್ಯೋಗ ನೀಡಲು ಆಗ್ರಹ
  • ಭೀಮ್ ಆರ್ಮಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಕಲ್ಲು ತೂರಾಟ, ರಸ್ತೆ ತಡೆ

ಕುಡಿಯುವ ನೀರಿನ ಕೊಡ ಮುಟ್ಟಿದ ಎಂಬ ಕಾರಣಕ್ಕೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಿಂದ ತೀವ್ರವಾಗಿ ಥಳಿತಕ್ಕೆ ಒಳಗಾಗಿದ್ದ ಒಂಬತ್ತು ವರ್ಷದ ದಲಿತ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ ಭೀಮ್ ಆರ್ಮಿ ಬೆಂಬಲಿಗರು ಭಾನುವಾರ ಮಧ್ಯಾಹ್ನ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಚಾರ್ಜ್‌ನಲ್ಲಿ ಮೃತ ವಿದ್ಯಾರ್ಥಿಯ ಮಾವ ಸೇರಿದಂತೆ 5-6 ಮಂದಿ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರು ವಾಹನಗಳನ್ನು ನಿಲ್ಲಿಸಿ ಗ್ರಾಮದಲ್ಲಿ ರಸ್ತೆ ತಡೆ ನಡೆಸಿದರು. ಗಾಯಾಳುಗಳನ್ನು ಕೂಡ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಪರಿಸ್ಥಿತಿ ನಿಯಂತ್ರಿಸಲು ಆಡಳಿತವು ಬೆಳಗ್ಗೆಯಿಂದ ಮುಂದಿನ ಆದೇಶದವರೆಗೆ ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿದೆ.

ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಜತೆಗೆ ಜಿಲ್ಲಾಧಿಕಾರಿ ಹೆಚ್ಚುವರಿಯಾಗಿ 4 ಲಕ್ಷ ರೂ. ಮಂಜೂರು ಮಾಡಿದ್ದಾರೆ. 

ವಿದ್ಯಾರ್ಥಿಯ ಮೃತದೇಹ ಭಾನುವಾರ ಗ್ರಾಮಕ್ಕೆ ತಲುಪಿದ್ದು, ಪರಿಹಾರ ನೀಡುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಮನೆಯ ಅಂಗಳದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಾಯಿತು. 50 ಲಕ್ಷ ರೂ. ಪರಿಹಾರ ನೀಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಮತ್ತು ಶಾಲೆಯ ಮಾನ್ಯತೆ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಭೀಮ್ ಆರ್ಮಿಯ ಜನರು ಮುಖ್ಯಮಂತ್ರಿಗಳು ಈಗಾಗಲೇ ಈ ಬಗ್ಗೆ ಟ್ವೀಟ್ ಮಾಡಲಿ, ಟ್ವೀಟ್ ನೋಡಿದಾಗ ಮಾತ್ರ ಮೃತದೇಹವನ್ನು ಎತ್ತಿಕೊಂಡು ಹೋಗುತ್ತೇವೆ ಎಂದು ಪಟ್ಟು ಹಿಡಿದರು.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

ಈ ವೇಳೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆಯಿತು. ಆಕ್ರೋಶಿತ ಕೆಲವರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಹಲವು ವಾಹನಗಳಿಗೆ ಹಾನಿಯಾಗಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಮೃತ ಬಾಲಕನ ಸಂಬಂಧಿಕರನ್ನು ಹೊರತುಪಡಿಸಿ ಎಲ್ಲ ಸಂಬಂಧಿಕರನ್ನು ಪೊಲೀಸರು ಮನೆಯಿಂದ ಹೊರಗೆ ಕಳುಹಿಸಿದರು. ರಾತ್ರಿ 7.30ರ ಸುಮಾರಿಗೆ ಕುಟುಂಬಸ್ಥರು ಪರಿಹಾರಕ್ಕೆ ಒಪ್ಪಿಗೆ ಸೂಚಿಸಿ ಅಂತ್ಯಸಂಸ್ಕಾರ ನೆರವೇರಿಸಲು ಅನುವು ಮಾಡಿಕೊಟ್ಟರು.

ನಿಮಗೆ ಏನು ಅನ್ನಿಸ್ತು?
0 ವೋಟ್