ರಾಜಸ್ಥಾನ| ದೇವಾಲಯದಲ್ಲಿ ಕಾಲ್ತುಳಿತ, ಮೂವರ ಸಾವು

Stampede At Khatu Shyam Ji Temple
  • ಭಕ್ತರ ನೂಕುನುಗ್ಗಲಿನಲ್ಲಿ ಕೆಳಗೆ ಬಿದ್ದ ಮೂವರು ಮಹಿಳೆಯರ ಸಾವು
  • ಶ್ಯಾಮ್‌ಜಿ ಶ್ರೀಕೃಷ್ಣನ ದರ್ಶನ ಶ್ರಾವಣ ಮಾಸದಲ್ಲಿ ಪವಿತ್ರ ಎಂಬ ನಂಬಿಕೆ  

ರಾಜಸ್ಥಾನದ ಸಿಕಾರ ಪಟ್ಟಣದ ಖಾಟು ಶ್ಯಾಮ್‌ಜಿ ದೇವಾಲಯದಲ್ಲಿ ಸೋಮವಾರ (ಆಗಸ್ಟ್ 8) ಬೆಳಿಗ್ಗೆ ಕಾಲ್ತುಳಿತ ಉಂಟಾಗಿ ಮೂವರು ಮೃತಪಟ್ಟಿದ್ದಾರೆ. 

ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಭಕ್ತರ ನಡುವೆ ಉಂಟಾದ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. 

ಘಟನೆಯು ನಸುಕಿನ ಜಾವ ಸುಮಾರು 5 ಗಂಟೆಗೆ ದೇವಾಲಯದ ದ್ವಾರದ ಬಳಿ ನಡೆದಿದೆ. 
ದೇವಾಲಯದಲ್ಲಿ ಮಾಸಿಕ ಜಾತ್ರೆ ಆಚರಿಸಲಾಗುತ್ತಿತ್ತು. ಈ ವೇಳೆ ಜನರ ನೂಕುನುಗ್ಗಲಿನಿಂದ ಈ ದುರಂತ ಸಂಭವಿಸಿದೆ. 

ಈ ಸುದ್ದಿ ಓದಿದ್ದೀರಾ? ಬಿಹಾರ | ಬಿಜೆಪಿ ಜೊತೆ ಅಸಮಾಧಾನದ ಹೊಗೆ; ಮಂಗಳವಾರ ಜೆಡಿಯು ಸಭೆ ಕರೆದ ಸಿಎಂ ನಿತೀಶ್ ಕುಮಾರ್

ಏನಿದು ಘಟನೆ

ಖಾಟು ಶ್ಯಾಮ್‌ಜಿ ದೇವರ ದರ್ಶನಕ್ಕೆ  ದೇವಾಲಯದ ಹೊರಗೆ ದ್ವಾರದ ಬಳಿ ಭಾರಿ ಭಕ್ತರ ದಂಡು ಜಮಾಯಿಸಿತ್ತು. ದ್ವಾರ ತೆರೆಯುತ್ತಿದ್ದಂತೆ ಭಕ್ತರು ಒಂದೇ ಬಾರಿ ಒಳನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ತಳ್ಳಾಟ ಉಂಟಾಗಿದೆ. ಈ ತಳ್ಳಾಟದಲ್ಲಿ ಮಹಿಳೆಯೊಬ್ಬರು ಮೂರ್ಛೆ ಹೋಗಿ ಕೆಳಗೆ ಬಿದ್ದರು. ಆಕೆಯ ಹಿಂದೆ ಇದ್ದವರೂ ನೆಲಕ್ಕೆ ಬಿದ್ದರು. ಒಳನುಗ್ಗುತ್ತಿದ್ದ ಜನರು ಕೆಳಗೆ ಬಿದ್ದವರನ್ನು ತುಳಿದುಕೊಂಡೇ ಮುಂದೆ ಸಾಗಿದ್ದಾರೆ. ಇದರಿಂದ ಮೂವರು ಮಹಿಳೆಯರು ಅಸುನೀಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲಾಗಿದೆ ಎಂದು ಸಿಕಾರ್ನ ಎಸ್‌ಪಿ ಕುನ್ವಾರ್ ರಾಷ್ಟ್ರದೀಪ್ ಅವರು ಎನ್‌ಡಿ ಟಿವಿಗೆ ಹೇಳಿದ್ದಾರೆ.  

ಪ್ರಧಾನಿ ಮೋದಿ ಸಂತಾಪ

ದೇವಾಲಯದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 

"ರಾಜಸ್ಥಾನದ ಖಾಟು ಶ್ಯಾಮ್‌ಜಿ ದೇವಾಲಯದಲ್ಲಿ ಕಾಲ್ತುಳಿತದಿಂದ ಮೂವರು ಅಸುನೀಗಿರುವುದು ದುಃಖ ಉಂಟು ಮಾಡಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್‌ ಮಾಡಿದ್ದಾರೆ. 

ರಾಜಸ್ಥಾನದಲ್ಲಿ ಖಾಟು ಶ್ಯಾಮ್‌ಜಿ ದೇವಾಲಯ ಒಂದು ಪವಿತ್ರ ಯಾತ್ರಾ ಸ್ಥಳವಾಗಿದ್ದು ಭಕ್ತರ ದಂಡು ಇಲ್ಲಿ ಸಾಮಾನ್ಯವಾಗಿದೆ. 

ಶ್ರಾವಣ ಮಾಸದ 11ನೇ ದಿನವಾದ ಸೋಮವಾರ ಖಾಟು ಶ್ಯಾಮ್‌ಜಿ ದೇವರ ದರ್ಶನ ಪವಿತ್ರವಾದುದು ಎಂಬ ನಂಬಿಕೆ ಭಕ್ತರಲ್ಲಿದೆ. ಶ್ಯಾಮ್‌ಜಿ ಶ್ರೀಕೃಷ್ಣನ ಅವತಾರ ಎಂಬ ನಂಬಿಕೆ ಇದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180