ಅತ್ಯಾಚಾರ ಆರೋಪ ಪ್ರಕರಣ | ಸಚಿವ ಮುನಿರತ್ನ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆ

munirathna
  • ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಿಂದ ಸಂತ್ರಸ್ತೆಗೆ ನೋಟಿಸ್‌ ಜಾರಿ 
  • ಮುನಿರತ್ನ ವಿರುದ್ಧದ ಪ್ರಕರಣಗಳ ವಿಚಾರಣಾ ಪ್ರಕ್ರಿಯೆಗೆ ತಡೆ 

ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌, ತೋಟಗಾರಿಕೆ ಮತ್ತು ಯೋಜನೆ-ಸಾಂಖ್ಯಿಕ ಖಾತೆ ಸಚಿವ ಎನ್‌ ಮುನಿರತ್ನ ಸೇರಿದಂತೆ 11 ಮಂದಿಯ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಬೆಂಗಳೂರು ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ತಡೆ ನೀಡಿದ್ದು, ಸಂತ್ರಸ್ತೆಗೆ ನೋಟಿಸ್‌ ಜಾರಿ ಮಾಡಿದೆ.

ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌ ಅವರು ಸಲ್ಲಿಸಿರುವ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ 46ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್‌ ಅವರು ಈ ಆದೇಶ ಹೊರಡಿಸಿದ್ದಾರೆ. 

ಸಂತ್ರಸ್ತೆ ಸಲ್ಲಿಸಿರುವ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ರವಿಶಂಕರ್‌ ಮತ್ತು ಮುನಿರತ್ನ ವಿರುದ್ಧ ಈ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎಲ್ಲ ವಿಚಾರಣಾ ಪ್ರಕ್ರಿಯೆಗೆ ಮುಂದಿನ ಆದೇಶವರೆಗೆ ತಡೆ ನೀಡಲಾಗಿದೆ ಎಂದು ಸೆಷನ್ಸ್‌ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಸೆಪ್ಟೆಂಬರ್‌ 27ಕ್ಕೆ ವಿಚಾರಣೆ ಮುಂದೂಡಿದೆ.

ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌ ಅವರು ಸಂತ್ರಸ್ತೆಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಯಾಗಿ ಸಂತ್ರಸ್ತೆಯನ್ನೇ ಆಪಾದಿತೆಯನ್ನಾಗಿ ಮಾಡುವ ಉದ್ದೇಶದಿಂದ ಸಚಿವ ಮುನಿರತ್ನ ಮತ್ತು ಅವರ ಕೆಲವು ಆಪ್ತರು ಸಂಚು ರೂಪಿಸಿ ಮಹಿಳೆಯನ್ನು ಟ್ರ್ಯಾಪ್‌ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. 

ಈ ಸುದ್ದಿ ಓದಿದ್ದೀರಾ?: ವಿದ್ಯುತ್‌ ಅವಘಡ | ಕೆಪಿಟಿಸಿಎಲ್‌ಗೆ 1.28 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್

ಇದೇ ಪ್ರಕರಣದಲ್ಲಿ ಕಳೆದ ಫೆಬ್ರವರಿಯಲ್ಲಿ ಸಚಿವ ಮುನಿರತ್ನ ಅವರು ಮಾ‍ಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಯನ್ನು ಸಂತ್ರಸ್ತೆ ನೀಡದಂತೆ ಅಧೀನ ನ್ಯಾಯಾಲಯದಿಂದ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್