ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ನ್ಯಾಯಕ್ಕಾಗಿ ಹೋರಾಡಬೇಕು; ಸಂತ್ರಸ್ತೆ ಮನವಿ

  • ಅತ್ಯಾಚಾರ ನಡೆದ 28 ವರ್ಷಗಳ ನಂತರ ಎಫ್‌ಐಆರ್‌ ದಾಖಲಿಸಿದ ಸಂತ್ರಸ್ತೆ
  • ನ್ಯಾಯಕ್ಕಾಗಿ ಹೋರಾಡುವಂತೆ ಉಳಿದ ಸಂತ್ರಸ್ತೆಯರಿಗೂ ಮನವಿ ಮಾಡಿದ ಮಹಿಳೆ

ನನ್ನಂತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು, ಯಾವುದಕ್ಕೂ ಭಯಪಡದೇ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದು ಅತ್ಯಾಚಾರ ಸಂತ್ರಸ್ತೆಯೊಬ್ಬರು ಮನವಿ ಮಾಡಿದ್ದಾರೆ.

ಸಂತ್ರಸ್ತೆಯು 12 ವರ್ಷದವಳಿದ್ದಾಗ, ಕುಟುಂಬದ ಪರಿಚಯಸ್ಥರಿಬ್ಬರು ಅವಳ ಮೇಲೆ ಸತತ ಒಂದು ವರ್ಷಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಘಟನೆಯ ನಂತರ ಮಹಿಳೆಯು ಗರ್ಭಿಣಿಯಾಗಿದ್ದಳು. ಪ್ರಸ್ತುತ 28 ವರ್ಷಗಳ ನಂತರ ಅತ್ಯಾಚಾರವೆಸಗಿದ್ದ ಆರೋಪಿಗಳ ವಿರುದ್ಧ ಮಹಿಳೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ʻʻನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಹೇಳಲು ಸುಮಾರು 28 ವರ್ಷಗಳೇ ಬೇಕಾಯಿತು. ನನ್ನಂತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು, ಯಾವುದಕ್ಕೂ ಭಯಪಡದೇ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದು ಅವರು ಉಳಿದ ಸಂತ್ರಸ್ತೆಯರಿಗೆ ಅನ್ಯಾಯದ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದಾರೆʼʼ ಎಂದು 'ಟೈಮ್ಸ್‌ ಆಫ್‌ ಇಂಡಿಯಾ' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

2021ರಲ್ಲಿ ತಮ್ಮ ಮೇಲೆ ಅತ್ಯಾಚಾರವೆಸಗಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಂತ್ರಸ್ತೆಯ ಮಗ ಒತ್ತಾಯಿಸಿದ್ದರು. ಮಾತ್ರವಲ್ಲದೇ, ನ್ಯಾಯಕ್ಕಾಗಿ ಹೋರಾಡುವುದರ ಅಗತ್ಯವನ್ನು ವಿವರಿಸಿದ್ದರು. ಅಂತಿಮವಾಗಿ ಸುಮಾರು ಮೂರು ದಶಕಗಳ ನಂತರ ಈ ಘಟನೆಯ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

"ಅತ್ಯಾಚಾರದಿಂದಾಗಿ ಮಹಿಳೆಯು ಗಂಡು ಮಗುವಿಗೆ ಜನ್ಮನೀಡಿದ್ದರು. ಆದರೆ, ಕುಟುಂಬ ಮತ್ತು ಸಮಾಜದ ಒತ್ತಡದಿಂದಾಗಿ ಮಗನನ್ನು ದೂರ ಮಾಡಿದ್ದರು. ಮತ್ತೊಬ್ಬ ಆರೋಪಿಯ ಬಗ್ಗೆ ನಮಗೆ ಮಾಹಿತಿ ಇದೆ. ಆತನನ್ನೂ ಶೀಘ್ರದಲ್ಲೇ ಬಂಧಿಸಲಾಗುವುದುʼʼ ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸ್ಯಾಂಡಲ್‌ವುಡ್‌ ಪಯಣ | 'ಶಾಂತಿ ಕ್ರಾಂತಿ'ಯ ಸೋಲಿನಿಂದ ಸಾವಿರ ಕೋಟಿ ಕ್ಲಬ್‌ ಸೇರಿದ 'ಕೆಜಿಎಫ್‌-2' ವರೆಗೆ

ʻʻಇಷ್ಟು ವರ್ಷ ನಾನು ಮತ್ತು ನನ್ನ ಮಗ ನೋವಿನಿಂದ ಬಳಲುತ್ತಿದ್ದೆವು. ಪ್ರಸ್ತುತ ಆರೋಪಿಗಳು ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಸರದಿ ಬಂದಿದೆ. ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸುವವರೆಗೂ ನಮ್ಮ  ಹೋರಾಟ ಮುಂದುವರೆಯುತ್ತದೆ. ಒಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಭಾರತದಲ್ಲಿ ನನ್ನಂತೆ ಅನೇಕ ಮಹಿಳೆಯರು ಇದ್ದಾರೆ ಎಂದು ನನಗೆ ಖಾತ್ರಿಯಿದೆ. ಅವರು ಕೂಡ ಮುಂದೆ ಬಂದು ನ್ಯಾಯಕ್ಕಾಗಿ ಧ್ವನಿ ಎತ್ತಿದರೆ ನನಗೆ ಸಂತೋಷವಾಗುತ್ತದೆʼʼ ಎಂದು ಸಂತ್ರಸ್ತೆ ತಿಳಿಸಿದರು.

ʻʻಬಾಲ್ಯದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂಬ ವಿಷಯ ತಿಳಿಯುತ್ತಿದ್ದಂತೆ ನನ್ನ ಪತಿ ನನ್ನಿಂದ ದೂರವಾದರು. 1994-95ರಲ್ಲಿ ಶಹಜಹಾನ್‌ಪುರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯ ನನ್ನ ಕುಟುಂಬದ ಸಹೋದರರಿಬ್ಬರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರುʼʼ ಎಂದು ಅವರು ವಿವರಿಸಿದರು.

ಆರೋಪಿಗಳಾದ ಮೊಹಮ್ಮದ್‌ ರಾಜಿ಼ ಮತ್ತು ಅವನ ಸಹೋದರ ನಕಿ ಹಸನ್‌ ನೆರೆಮೆನೆಯವರಾಗಿದ್ದರು. ಸಂತ್ರಸ್ತೆಯ ಕುಟುಂಬಕ್ಕೆ ಪರಿಚಿತರಾಗಿದ್ದ ಅವರು ಆಕೆಯನ್ನು ಹೆದರಿಸಿ, ಕೊಲೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದರು. ಘಟನೆಯ ನಂತರ ಸಂತ್ರಸ್ತೆಯ ಕುಟುಂಬದವರು ʻಸಮಾಜʼಕ್ಕೆ ಹೆದರಿ ದೂರು ದಾಖಲಿಸಿರಲಿಲ್ಲ ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್