ಉತ್ತರ ಪ್ರದೇಶ | ಅಪ್ರಾಪ್ತೆಯೊಬ್ಬಳು ಬೆತ್ತಲೆಯಾಗಿ ನಡೆದ ಪ್ರಕರಣ; ಅತ್ಯಾಚಾರ ದೃಢಪಟ್ಟಿಲ್ಲ ಎಂದ ಪೊಲೀಸರು

  • ಮೊರಾದಾಬಾದ್‌ ರಸ್ತೆಯಲ್ಲಿ ಬೆತ್ತಲೆಯಾಗಿ ನಡೆಯುತ್ತಿದ್ದ ಬಾಲಕಿಯ ವಿಡಿಯೋ ವೈರಲ್‌
  • ಅಪ್ರಾಪ್ತೆಯು ಬಾಲ್ಯದಿಂದಲೂ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾಳೆ ಎಂದ ಪೋಷಕರು

15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪದಡಿ ಉತ್ತರ ಪ್ರದೇಶದ ಮೊರಾದಾಬಾದ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಪ್ರಾಪ್ತೆಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದಿರುವ ಪೊಲೀಸರು ಬಾಲಕಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.

ಅಪ್ರಾಪ್ತೆಯೊಬ್ಬಳು ಮೊರಾದಾಬಾದ್‌-ಠಾಕುರ್‌ದ್ವಾರ ರಸ್ತೆಯಲ್ಲಿ ಸುಮಾರು ಎರಡು ಕೀ.ಮೀ ದೂರದವರೆಗೆ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದಕ್ಕೆ ಸಂಬಂಧಿಸಿದ 15 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯಾವಳಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ, ಕೆಲವು ದಾರಿಹೋಕರು ಅಪ್ರಾಪ್ತೆಗೆ ಸಹಾಯ ಮಾಡುವ ಬದಲು ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರೆ, ಹಲವರು ಬಾಲಕಿಯ ವಿಡಿಯೋ ಮಾಡಿ, ಆ ಗೊಂದಲದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌, ʻʻಮೊರಾದಾಬಾದ್‌ನಲ್ಲಿ, ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿವಸ್ತ್ರಗೊಳಿಸಿ, ನಂತರ ಬಾಲಕಿಯು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದು ಹೋಗುತ್ತಿದ್ದಾಳೆ. ಇಂತಹ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಪರಿಸ್ಥಿತಿ ಹತೋಟಿ ತಪ್ಪಲಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ವರದಿಗಳ ಪ್ರಕಾರ, ಈ ಘಟನೆಯು ಹದಿನೈದು ದಿನಗಳ ಹಿಂದೆ ನಡೆದಿದ್ದು, ವಿಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಗೊಂದಲದ ಹೇಳಿಕೆ

ಬಾಲಕಿಯ ಚಿಕ್ಕಪ್ಪ ನೀಡಿದ ದೂರನಲ್ಲಿರುವ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಮತ್ತು ಆಕೆಯ ಪೋಷಕರು ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆ ವ್ಯತಿರಿಕ್ತವಾಗಿದೆ.

"ಅಪ್ರಾಪ್ತೆಯೊಬ್ಬಳು ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಕೆಯ ಚಿಕ್ಕಪ್ಪ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಂತರ ಆಕೆಯ ಪೋಷಕರ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಅವರು ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ನಿರಾಕರಿಸಿದರು" ಎಂದು ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಈ ಘಟನೆ ಸೆಪ್ಟೆಂಬರ್ 1ರಂದು ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಾಲಕಿಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದೇವೆ. ಆದರೆ, ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸುವಾಗ ಬಾಲಕಿಯ ಪೋಷಕರು ಲೈಂಗಿಕ ದೌರ್ಜನ್ಯವನ್ನು ನಿರಾಕರಿಸಿದರು.

ಈ ಸುದ್ದಿ ಓದಿದ್ದೀರಾ?: ರಾಜ್ಯದ ಹಲವೆಡೆ ಎಸ್‌ಡಿಪಿಐ, ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ; ಹಲವರು ವಶಕ್ಕೆ

ʻʻಅಪ್ರಾಪ್ತೆಯು, ಪಕ್ಕದ ಹಳ್ಳಿಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೋಗಿದ್ದಾಗ ಐವರು, ಆಕೆಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿಯ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲಿ ಐವರು ಆರೋಪಿಗಳು ಆಕೆಯ ಬಟ್ಟೆ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದರುʼʼ ಎಂದು ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ʻʻಸೆಕ್ಷನ್‌ 376ಡಿ (ಸಾಮೂಹಿಕ ಅತ್ಯಾಚಾರ) ಹಾಗೂ ಪೋಕ್ಸೋ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದೇವೆ. ಐವರು ಆರೋಪಿಗಳಲ್ಲಿ ಒಬ್ಬನನ್ನು ಸೆಪ್ಟೆಂಬರ್‌ 15ರಂದು ಬಂಧಿಸಿದ್ದೇವೆ. ಉಳಿದ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಂದೀಪ್‌ ಕುಮಾರ್‌ ಮೀನಾ ವಿವರಿಸಿದ್ದಾರೆ.

"ಈ ಘಟನೆಯು ಹದಿನೈದು ದಿನಗಳ ಹಿಂದೆ ಸಂಭವಿಸಿದೆ ಮತ್ತು ಪ್ರಕರಣದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಪ್ರಾಪ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿದೆ ಎಂಬುದು ದೃಢಪಟ್ಟಿಲ್ಲ. ಈ ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಮೊರಾದಾಬಾದ್ ವ್ಯಾಪ್ತಿಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಶಲಭ್ ಮಾಥುರ್ ತಿಳಿಸಿರುವುದಾಗಿ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

“ತಮ್ಮ ಮಗಳಿಗೆ ಬಾಲ್ಯದಿಂದಲೂ ಮಾನಸಿಕ ಸಮಸ್ಯೆ ಇದೆ. ಆಕೆಯ ಮೇಲೆ ಅತ್ಯಾಚಾರದಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಆಕೆಯ ಪೋಷಕರು ಹೇಳಿದ್ದಾರೆ. ನಾವು ಆಕೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದೇವೆ. ಅದರ ವರದಿಯ ಪ್ರಕಾರ ಲೈಂಗಿಕ ದೌರ್ಜನ್ಯ ನಡೆದಿಲ್ಲʼʼ ಎಂದು ಮೊರಾದಾಬಾದ್‌ನ ಎಸ್‌ಎಸ್‌ಪಿ ಹೇಮಂತ್ ಕುಟಿಯಾಲ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app