ಜಮ್ಮು | ಎರಡು ಮನೆಯಲ್ಲಿ ಒಂದೇ ಕುಟುಂಬದ ಆರು ಮಂದಿಯ ಮೃತದೇಹ ಪತ್ತೆ

Kashmir family
  • ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಕಂಡು ಬಂದ ಮೃತದೇಹ
  • ನಿಗೂಢ ಸಾವಿನ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ ಪೊಲೀಸರು

ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಎರಡು ಮನೆಗಳಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಆರು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ವರದಿಯಾಗಿದೆ. ಈ ನಿಗೂಢ ಸಾವಿನ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಐವರು ಚಿನಾಬ್ ಕಣಿವೆಯಲ್ಲಿರುವ ದೋಡಾಸ್ ಮರ್ಮಾಟ್‌ನವರು ಮತ್ತು ಒಬ್ಬರು ಶ್ರೀನಗರದ ಬರ್ಜುಲ್ಲಾ ಪ್ರದೇಶದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವಿನ ಕಾರಣವನ್ನು ಈವರೆಗೆ ಅಧಿಕಾರಿಗಳು ಖಚಿತಪಡಿಸಿಲ್ಲ.

ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರನ್ನು ಸಕೀನಾ ಬೇಗಂ, ಅವರ ಇಬ್ಬರು ಪುತ್ರಿಯರು-ನಸೀಮಾ ಅಖ್ತರ್ ಮತ್ತು ರುಬಿನಾ ಬಾನೋ, ಮಗ ಜಾಫರ್ ಸಲೀಂ ಮತ್ತು ನೂರ್ ಉಲ್ ಹಬೀಬ್ ಮತ್ತು ಸಜಾದ್ ಅಹ್ಮದ್ ಎಂದು ಗುರುತಿಸಲಾಗಿದೆ.

ಮನೆಯವರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಶ್ರೀನಗರದ ವ್ಯಕ್ತಿಯ ಸಂಬಂಧಿಕರು ಸ್ಥಳೀಯರಿಗೆ ತಿಳಿಸಿದ ನಂತರ ಎರಡು ಮನೆಯಲ್ಲಿ ಶವಗಳು ಪತ್ತೆಯಾಗಿವೆ. ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳು ಪತ್ತೆಯಾಗಿವೆ. ಮನೆಗಳ ಬಾಗಿಲುಗಳಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ದುರ್ವಾಸನೆ ಹರಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಮತ್ತು ಛಾಯಾಗ್ರಾಹಕರ ತಂಡವು ಘಟನೆಯ ತನಿಖೆ ನಡೆಸುತ್ತಿದ್ದಾರೆ. ನಾಲ್ಕು ದೇಹಗಳು ಒಂದು ಮನೆಯಲ್ಲಿ ಪತ್ತೆಯಾದರೆ, ಅವರದೇ ಇನ್ನೊಂದು ಪಕ್ಕದ ಸಂಪರ್ಕಿತ ಮನೆಯಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. “ಇದು ಬಲವಂತದ ವಿಷಪ್ರಾಶನದ ಪ್ರಕರಣವೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್‌ಎಸ್‌ಪಿ ಜಮ್ಮು ಚಂದನ್ ಕೊಲ್ಹಿ (ಐಪಿಎಸ್) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿ ಘಟನೆಯ ಸಂಪೂರ್ಣ ತನಿಖೆಗೆ ಸೂಚಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಎಂಸಿ ಜಮ್ಮುವಿಗೆ ವರ್ಗಾಯಿಸಲಾಗಿದೆ ಮತ್ತು ಮರಣೋತ್ತರ ವಿಧಿವಿಧಾನಗಳ ನಂತರ ವಾರಸುದಾರರಿಗೆ ದೇಹವನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಜಯ್ ಶರ್ಮಾ (ಗ್ರಾಮೀಣ ಎಸ್‌ಪಿ), ಪರ್ದೀಪ್ ಕುಮಾರ್ (ಎಸ್‌ಡಿಪಿಒ ನಗ್ರೋಟಾ), ಇನ್‌ಸ್ಪೆಕ್ಟರ್ ವಿಶ್ವ್ ಪರ್ತಾಪ್ (ಎಸ್‌ಎಚ್‌ಒ ನಗ್ರೋಟಾ) ಮತ್ತು ಎಸ್‌ಐ ಮಜೀದ್ ಹುಸೇನ್ (ಐಸಿ ಪಿಪಿ ಸಿದ್ರಾ) ಇವರ ನೇತೃತ್ವದಲ್ಲಿ ವಿಶೇಷ ತನಿಖೆಗಾಗಿ ತಂಡ ರಚಿಸಲಾಗಿದೆ ಎಂದು ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಫೋಟೋ: ಮೃತದೇಹ ಪತ್ತೆಯಾದ ಸ್ಥಳದಲ್ಲಿ ಪರಿಶೀಲಿಸುತ್ತಿರುವ ಜಮ್ಮು ಪೊಲೀಸರು
ನಿಮಗೆ ಏನು ಅನ್ನಿಸ್ತು?
0 ವೋಟ್