
ಭಾರತದ ಜನಪ್ರಿಯ ಕೃಷಿ ಮತ್ತು ಗ್ರಾಮೀಣ ಆರ್ಥಿಕ ತಜ್ಞ ಹಾಗೂ ಯೋಜನಾ ಆಯೋಗದ ಮಾಜಿ ಸದಸ್ಯ ಅಭಿಜಿತ್ ಸೇನ್ (72) ಅವರು ಸೋಮವಾರ (ಆಗಸ್ಟ್ 29) ರಾತ್ರಿ ನಿಧನರಾಗಿದ್ದಾರೆ.
“ರಾತ್ರಿ ಸುಮಾರು 11 ಗಂಟೆಗೆ ಅಭಿಜಿತ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ" ಎಂದು ಅಭಿಜಿತ್ ಸಹೋದರ ಡಾ. ಪ್ರಣಬ್ ಸೇನ್ ತಿಳಿಸಿದ್ದಾರೆ.
ದೆಹಲಿಯ ಜವಾಹರ ಲಾಲ್ ನೆಹರು ವಿವಿಯಲ್ಲಿ (ಜೆಎನ್ಯು) ಪ್ರಾಧ್ಯಾಪಕರಾಗಿದ್ದ ಅಭಿಜಿತ್ ಅವರು, ಸುಮಾರು ನಾಲ್ಕು ದಶಕಗಳ ಕಾಲ ದೇಶದ ಆರ್ಥಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಕೇಂದ್ರ ‘ಕೃಷಿ ವೆಚ್ಚ ಹಾಗೂ ಬೆಲೆ’ ಆಯೋಗದ ಅಧ್ಯಕ್ಷ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಭಿಜಿತ್ ಸೇನ್ ಅವರು 2004ರಿಂದ 2014ರ ಅವಧಿಯಲ್ಲಿ ಕೇಂದ್ರ ಯೋಜನಾ ಆಯೋಗದ (ಈಗ ನೀತಿ ಆಯೋಗ) ಸದಸ್ಯರಾಗಿದ್ದರು.