ಬಿಲ್ಕೀಸ್‌ ಬಾನು ಪ್ರಕರಣ| ಅತ್ಯಾಚಾರಿಗಳ ಬಿಡುಗಡೆ ಮೋದಿಯ ನಾರಿ ಶಕ್ತಿ ಭಾಷಣಕ್ಕೆ ಕಪಾಳಮೋಕ್ಷ ಎಂದ ಪ್ರತಿಪಕ್ಷಗಳು

  • ಮೋದಿ ಭಾಷಣ ಮಾಡುತ್ತಿದ್ದಾಗ 11 ಅತ್ಯಾಚಾರಿಗಳ ಬಿಡುಗಡೆ
  • ಅತ್ಯಚಾರಿಗಳನ್ನು ಅಭಿನಂದಿಸಲಾಗುತ್ತಿದೆ ಇದುವೇ ಅಮೃತಮಹೋತ್ಸವ

ಸಮಾಜದಲ್ಲಿ ಸ್ತ್ರೀದ್ವೇಷವನ್ನು ತೊಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಕೇವಲ ಒಂದು ದಿನದ ನಂತರ, ಗುಜರಾತ್ ಸರ್ಕಾರವು 2002ರಲ್ಲಿ ಗರ್ಭಿಣಿ ಬಿಲ್ಕೀಸ್ ಬಾನು ಮೇಲೆ ಅತ್ಯಾಚಾರವೆಸಗಿದ್ದ 11 ಅಪರಾಧಿಗಳನ್ನು‌ ಕ್ಷಮಾಪಣೆ ನೀತಿಯ ಅನ್ವಯ ಮಂಗಳವಾರ ಬಿಡುಗಡೆ ಮಾಡಿದೆ.

ಈ ಕುರಿತು ಕಾಂಗ್ರೆಸ್‌ ಪಕ್ಷ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಬಿಜೆಪಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಗುಜರಾತ್ ಸರ್ಕಾರದ ಆದೇಶವು ಅಭೂತಪೂರ್ವ. ಪ್ರಧಾನಿ ನಿಜವಾಗಿಯೂ ತಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇದಿಕೆಯಿಂದ ಹೇಳಿದ್ದನ್ನು ಅರ್ಥೈಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದು ಅಮೃತ ಮಹೋತ್ಸವವೇ?

“ಅಪರಾಧಿಗಳು ಶಿಕ್ಷೆಯ 14 ವರ್ಷಗಳನ್ನು ಕಳೆದಿದ್ದು, ಜೈಲಿನಲ್ಲಿ ಅವರ ನಡವಳಿಕೆ ಉತ್ತಮವಾಗಿದೆ ಮತ್ತು ಅಪರಾಧದ ಸ್ವರೂಪವನ್ನು ಉಲ್ಲೇಖಿಸಿ ನೀವು ಅವರನ್ನು ಬಿಡುಗಡೆ ಮಾಡಿದ್ದೀರಿ. ನಾವು ಕೇವಲ ಅಪರಾಧದ ಸ್ವರೂಪವನ್ನು ಪರಿಗಣಿಸಿದರೆ, ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ಇದೆ. ಅದಕ್ಕೆ ಯಾವುದೇ ಶಿಕ್ಷೆ ಸಾಕಾಗುವುದಿಲ್ಲ ಎಂಬ ವರ್ಗದಲ್ಲಿ ಬರುವುದಿಲ್ಲವೇ? ಬಿಡುಗಡೆ ಆಗಿರುವ ಆರೋಪಿಗಳನ್ನು ನಾವಿಂದು ನೋಡುತ್ತಿದ್ದೇವೆ. ಅವರನ್ನು ಅಭಿನಂದಿಸಲಾಗುತ್ತಿದೆ ಮತ್ತು ಅವರ ಬಿಡುಗಡೆಯನ್ನು ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ. ಇದು ಅಮೃತ ಮಹೋತ್ಸವವೇ?” ಎಂದು ಪವನ್ ಖೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"2002ರ ಗಲಭೆಯ ನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜಧರ್ಮದ ಬಗ್ಗೆ ಮಾತನಾಡಿದ್ದರು. ನಾವು ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ನೆನಪಿಸಲು ಬಯಸುತ್ತೇವೆ” ಎಂದು ಪವನ್ ಖೇರಾ ಹೇಳಿದ್ದಾರೆ.

“ಪ್ರಧಾನಿ ಅವರಿಗೆ ಅವರೇ ಆಡಿರುವ ಮಾತುಗಳಿಗೆ ಅರ್ಥ ಗೊತ್ತಿದೆಯೇ? ಅಥವಾ ಅವರ ಪಕ್ಷದ ಸರ್ಕಾರಗಳು ಪ್ರಧಾನಿ ಮಾತು ಕೇಳುವುದನ್ನು ನಿಲ್ಲಿಸಿವೆಯೇ? ಇಲ್ಲವಾದರೆ ಪ್ರಧಾನಿಗಳು ದೇಶಕ್ಕೆ ಒಂದು, ಸ್ವಂತ ಪಕ್ಷದ ಸರ್ಕಾರಗಳಿಗೆ ಮತ್ತೊಂದು ಹೇಳುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ತನ್ನ ಆದೇಶವನ್ನು ಹಿಂಪಡೆಯಬೇಕು ಅಥವಾ ಪ್ರಧಾನಿ ಮೋದಿ ತಮ್ಮ ಮಾತುಗಳನ್ನು ಹಿಂಪಡೆಯಬೇಕು ಎಂದು ಖೇರಾ ಒತ್ತಾಯಿಸಿದ್ದಾರೆ.

ಸ್ತ್ರೀಯರ ಕುರಿತ ಬಿಜೆಪಿ ಸಂದೇಶ ಸ್ಪಷ್ಟವಾಗಿದೆ

ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

"ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಮಹಿಳೆಯರ ಘನತೆಗೆ ಕುಂದುಂಟು ಮಾಡುವ ಯಾವುದೇ ಕೆಲಸವನ್ನು ಮಾಡದಂತೆ ಪ್ರತಿಜ್ಞೆ ಮಾಡುವಂತೆ ಭಾರತೀಯರಿಗೆ ಮೋದಿ ಕರೆ ನೀಡಿದ್ದರು. ಅವರು ನಾರಿ ಶಕ್ತಿ ಅನ್ನು ಬೆಂಬಲಿಸುವ ಬಗ್ಗೆ ಹೇಳಿದ್ದರು. ಗುಜರಾತ್ ಬಿಜೆಪಿ ಸರ್ಕಾರವು ಸಾಮೂಹಿಕ ಅತ್ಯಾಚಾರದ ಅಪರಾಧಿಗಳನ್ನು ಅದೇ ದಿನ ಬಿಡುಗಡೆ ಮಾಡಿದೆ. ಸಂದೇಶ ಸ್ಪಷ್ಟವಾಗಿದೆ" ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗುಜರಾತ್‌ ಗಲಭೆ ಪ್ರಕರಣ| ನ್ಯಾಯ ಕೇಳಿದವರನ್ನು ಜೈಲಿಗೆ ಅಟ್ಟುವುದೇ ತೀರ್ಪಿನ ಉದ್ದೇಶವೇ? ಸಿಜೆಐಗೆ 300 ವಕೀಲರ ಪ್ರಶ್ನೆ

ಇದು ಬೇಟಿ ಬಚಾವೋ ಬೇಟಿ ಪಡಾವೋ!

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್ ನಾಯಕಿ ಕವಿತಾ ಕೃಷ್ಣನ್ ಅವರು, "2022ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿಯವರು ಮಹಿಳೆಯರಿಗೆ ಗೌರವ ಕೊಡಿ, ನಾರಿ ಶಕ್ತಿಗೆ ಬೆಂಬಲ ನೀಡಿ ಎಂದು ಭಾಷಣ ಮಾಡುತ್ತಿದ್ದಾಗ, ಗುಜರಾತ್ ಮುಖ್ಯಮಂತ್ರಿ 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದರು. ಕಾರಣ ಆತ್ಯಾಚಾರಕ್ಕೆ ಬಲಿಯಾದಾಕೆ ಮುಸ್ಲಿಮಳು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"2002ರ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ 11 ಮಂದಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿಯಡಿಯಲ್ಲಿ ಗೋಧ್ರಾ ಜೈಲಿನಿಂದ ಹೊರನಡೆದರು. ಬಿಜೆಪಿ ಸರ್ಕಾರವು ರಾಜ್ಯ ಆಡಳಿತ ಯಂತ್ರವನ್ನು ಬಳಸುತ್ತಿರುವುದು ಮಹಿಳೆಯರ ರಕ್ಷಣೆಗೆ ಅಲ್ಲ, ಆದರೆ ಅತ್ಯಾಚಾರಿಗಳನ್ನು ಮುಕ್ತಗೊಳಿಸಲು. ಇದು ಯಾವ ಸಂದೇಶವನ್ನು ಕಳುಹಿಸುತ್ತಿದೆ? ಇದು ಬೇಟಿ ಬಚಾವೋ ಬೇಟಿ ಪಡಾವೋ!" ಎಂದು ಕಾಂಗ್ರೆಸ್‌ನ ಡಾ.ಶಾಮಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ.

ಪತ್ರಕರ್ತೆ ರಾಣಾ ಅಯ್ಯೂಬ್ ಅವರು, "ಇಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನರೇಂದ್ರ ಮೋದಿ ಅವರು ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡಿದ್ದಾರೆ. ಇಂದು ಸಂಜೆ, ಮುಸ್ಲಿಂ ವಿರೋಧಿ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕೀಸ್ ಬಾನು ಅವರನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ ಪುರುಷರು ಸ್ವತಂತ್ರರಾಗಿದ್ದಾರೆ. ಹ್ಯಾಪಿ 75 ಇಂಡಿಯಾ" ಎಂದು ಬರೆದುಕೊಂಡಿದ್ದಾರೆ.

ಮಾಧ್ಯಮಗಳ ಆಕ್ರೋಶ ಎಲ್ಲಿದೆ?

ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ, "ಬಿಲ್ಕೀಸ್ ಬಾನು ಅವರು 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅತ್ಯಾಚಾರಕ್ಕೆ ಒಳಗಾದರು ಮತ್ತು ಅವರ ಇಡೀ ಕುಟುಂಬವನ್ನು ಕೊಲೆ ಮಾಡಿ ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು" ಎಂದು ಹೇಳಿದರು.

"ಗುಜರಾತ್ ಸರ್ಕಾರವು ಈ ಘೋರ ಅಪರಾಧಕ್ಕೆ ಶಿಕ್ಷೆಗೊಳಗಾದ ಎಲ್ಲಾ 11 ರಾಕ್ಷಸರನ್ನು ಈಗ ಬಿಡುಗಡೆ ಮಾಡಿದೆ. ಜನರು ಮತ್ತು ನೋಯ್ಡಾ ಮಾಧ್ಯಮಗಳ ಆಕ್ರೋಶ ಎಲ್ಲಿದೆ? ಒಂದು ಕಿರುಚಾಟವೂ ಇಲ್ಲ" ಎಂದು ಅವರು ಮಾಧ್ಯಮಗಳ ಮೌನವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಕುರಿತ ಭಾಷಣ

"ಮಹಿಳೆಯರ ಬಗೆಗಿನ ನಮ್ಮ ನಡವಳಿಕೆಯು ವಿಕೃತವಾಗಿದೆ. ನಾವು ಕೆಲವೊಮ್ಮೆ ನಮ್ಮ ಮಹಿಳೆಯರನ್ನು ಅವಮಾನಿಸುತ್ತೇವೆ. ಪ್ರತಿಯೊಬ್ಬ ಭಾರತೀಯನಿಗೂ ನನ್ನದೊಂದು ವಿನಂತಿ. ದೈನಂದಿನ ಜೀವನದಲ್ಲಿ ನಾವು ನಮ್ಮ ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಾಯಿಸಬಹುದೇ. ನಾರಿ ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಿಗೆ ಗೌರವವು ಭಾರತದ ಬೆಳವಣಿಗೆಗೆ ಪ್ರಮುಖ ಆಧಾರ ಸ್ತಂಭವಾಗಿದೆ. ನಾವು ನಮ್ಮ ನಾರಿ ಶಕ್ತಿಯನ್ನು ಬೆಂಬಲಿಸಬೇಕಾಗಿದೆ” ಎಂದು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದರು. 

ಅತ್ತ ಅವರು ದೇಶದ ರಾಜಧಾನಿಯಿಂದ ಅಂತಹ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಗುಜರಾತಿನ ಅವರದೇ ಪಕ್ಷದ ಸರ್ಕಾರ, ಬಿಲ್ಕೀಸ್‌ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಆರೋಪಿಗಳನ್ನು ಕ್ಷಮಾಪಣೆ ನೀತಿಯ ಅನ್ವಯ ಬಿಡುಗಡೆ ಮಾಡಿತ್ತು!

ನಿಮಗೆ ಏನು ಅನ್ನಿಸ್ತು?
0 ವೋಟ್