ಧಾರ್ಮಿಕ ನಿಂದನೆ ಹೇಳಿಕೆ | ನೂಪುರ್‌ ಶರ್ಮಾಗೆ ಭದ್ರತೆ, ಜುಬೇರ್‌ ಬಂಧನ: ನೆಟ್ಟಿಗರ ಪ್ರಶ್ನೆ

Zubair
  • ನೋಟಿಸ್‌ ನೀಡದೆಯೇ ಮೊಹಮ್ಮದ್‌ ಜುಬೇರ್‌ ಬಂಧನ ಆರೋಪ
  • ಜುಬೇರ್‌ ಬಂಧನ ಸತ್ಯದ ಮೇಲಿನ ಆಕ್ರಮಣ ಎಂದ ಶಶಿ ತರೂರ್‌

ʻಆಲ್ಟ್‌ ನ್ಯೂಸ್' ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಬಂಧನಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.

"ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಮೊಹಮ್ಮದ್‌ ಜುಬೇರ್‌ ಅವರನ್ನು ಬಂಧಿಸಲಾಗಿದೆ. ಆದರೆ, ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾ ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಅವರಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ರಕ್ಷಣೆ ನೀಡಲಾಗಿದೆ" ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಉದ್ದೇಶದಿಂದ ಮೊಹಮ್ಮದ್‌ ಜುಬೈರ್‌ ಇಂಥ ಪೋಸ್ಟ್‌ಗಳನ್ನು ಹಾಕಿದ್ದಾರೆ" ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.  

ಪೊಲೀಸರು ನೋಟಿಸ್‌ ನೀಡದೆಯೇ ಜುಬೇರ್‌ ಅವರನ್ನು ಬಂಧಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ಸಹ–ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಆರೋಪಿಸಿದ್ದಾರೆ.

"ಎಷ್ಟೇ ಕೇಳಿದರೂ ಪೊಲೀಸರು ಎಫ್‌ಐಆರ್‌ ಪ್ರತಿ ನೀಡಿಲ್ಲ. 2020ರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ದೆಹಲಿಯ ಸ್ಪೆಷಲ್‌ ಸೆಲ್‌ ಜುಬೇರ್‌ರನ್ನು ಕರೆದಿತ್ತು. ಈಗಾಗಲೇ ಆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಕ್ಷಣೆ ಪಡೆಯಲಾಗಿದೆ. ಆದರೆ, ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿರುವುದಾಗಿ ತಿಳಿಸಲಾಯಿತು. ವೈದ್ಯಕೀಯ ತಪಾಸಣೆಯ ಬಳಿಕ ಅವರನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ" ಎಂದು ಆರೋಪಿಸಿ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ಈ ಬಂಧನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಪಕ್ಷಗಳು ದೆಹಲಿ ಪೊಲೀಸರನ್ನು ಗುರಿಯಾಗಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿವೆ. 

"ಸತ್ಯದ ಪರ ದನಿ ಎತ್ತುವ ಒಬ್ಬ ನಾಯಕನ ಬಂಧನ ಇನ್ನೂ ಸಾವಿರ ಜನರನ್ನು ಹುಟ್ಟು ಹಾಕುತ್ತದೆ" ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. 

ಜುಬೇರ್‌ ಬಂಧನ ಸತ್ಯದ ಮೇಲಿನ ಆಕ್ರಮಣ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ. 

ಪ್ರಕರಣದ ಹಿನ್ನೆಲೆ
ಟ್ವೀಟ್‌ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಗಳ ಮೇಲೆ ಫ್ಯಾಕ್ಟ್‌ ಚೆಕಿಂಗ್‌ ವೆಬ್‌ಸೈಟ್‌ ʻಆಲ್ಟ್‌ ನ್ಯೂಸ್' ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಜುಬೇರ್‌ ಅವರು 2018ರಲ್ಲಿ ಮಾಡಿದ್ದ ಟ್ವೀಟ್‌ನಲ್ಲಿ "ಅತ್ಯಂತ ಪ್ರಚೋದನಾಕಾರಿ ಮತ್ತು ಜನರಲ್ಲಿ ದ್ವೇಷದ ಭಾವನೆ ಮೂಡಿಸುವಂತಹ ಬರಹವನ್ನು ಬರೆದಿದ್ದರು." ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಆಲ್ಟ್‌ ನ್ಯೂಸ್‌ನ ಮೊಹಮದ್‌ ಝುಬೇರ್‌ ಒಂದು ದಿನ ಪೊಲೀಸ್‌ ವಶದಲ್ಲಿ

ಜುಬೈರ್‌ ಟ್ವಿಟರ್‌ನಲ್ಲಿ ಪೌರಾಣಿಕ ಚಿತ್ರ ʼಕಿಸ್ಸಿ ಸೆ ನಾ ಕೆಹನಾʼದ ದೃಶ್ಯವೊಂದನ್ನು ಹಂಚಿಕೊಂಡಿದ್ದರು. ಈ ದೃಶ್ಯದಲ್ಲಿ ʼಹನುಮಾನ್‌ ಹೋಟೆಲ್‌ʼ ಎಂದು ಬರೆದಿರುವ ಫಲಕವನ್ನು ತೋರಿಸಲಾಗಿದೆ. "ಹನಿಮೂನ್‌ ಹೋಟೆಲನ್ನು ಹನುಮಾನ್‌ ಹೋಟೆಲ್‌ ಆಗಿ ಬದಲಾಯಿಸಲಾಗಿದೆ ಎಂದು ಬಣ್ಣದ ಗುರುತುಗಳು ಸೂಚಿಸುತ್ತವೆ. 2014ಕ್ಕಿಂತ ಮುಂಚೆ ಈ ಹೋಟೆಲನ್ನು ಹನಿಮೂನ್‌ ಹೋಟೆಲ್‌ ಎಂದು ಬರೆಯಲಾಗಿತ್ತು. 2014ರ ನಂತರ ಹನುಮಾನ್‌ ಹೋಟೆಲ್‌ ಎಂದು ಬದಲಾಯಿಸಲಾಗಿದೆ" ಎಂದು ಜುಬೈರ್‌ ಟ್ವೀಟರ್‌ನಲ್ಲಿ ಬರೆದಿದ್ದರು.

ಬಂಧಿತ ಜುಬೇರ್‌ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು ಒಂದು ವಾರಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಒಂದು ದಿನದ ಮಟ್ಟಿಗೆ ಮಾತ್ರ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app