ಮತಾಂತರ ನಿಷೇಧ | ಎಲ್ಲರಿಗೂ ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ ಎಂದ ದೆಹಲಿ ಹೈಕೋರ್ಟ್

  • ಸಂವಿಧಾನದ 25ನೇ ವಿಧಿಯಡಿ ‘ಧಾರ್ಮಿಕ ಸ್ವಾತಂತ್ರ್ಯದ’ ಹಕ್ಕನ್ನು ಎತ್ತಿಹಿಡಿದ ಪೀಠ
  • ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಾಮೂಹಿಕ ಮತಾಂತರದ ಆರೋಪ

ಬಲವಂತದ ಮತಾಂತರ ನಿಷೇಧಿಸುವಂತೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಶುಕ್ರವಾರ ಸಂವಿಧಾನದ 25ನೇ ವಿಧಿಯಡಿ ‘ಧಾರ್ಮಿಕ ಸ್ವಾತಂತ್ರ್ಯದ’ ಹಕ್ಕನ್ನು ಎತ್ತಿಹಿಡಿದಿದ್ದು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಯ್ಕೆಯ ಯಾವುದೇ ಧರ್ಮವನ್ನು ಆರಿಸಿಕೊಳ್ಳುವ ಮತ್ತು ಆಚರಿಸುವ ಹಕ್ಕನ್ನು ಹೊಂದಿರುತ್ತಾನೆ ಎಂದು ಹೇಳಿದೆ.

ಬಲವಂತದ ಧಾರ್ಮಿಕ ಮತಾಂತರ ನಿಷೇಧಿಸುವ ಕಾನೂನನ್ನು ರೂಪಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾರವರ ಪೀಠವು ವಿಚಾರಣೆ ನಡೆಸಿದೆ. "ಬೆದರಿಕೆ, ಉಡುಗೊರೆ ಮೂಲಕ ಆಮಿಷ, ಬ್ಲಾಕ್ ಮ್ಯಾಜಿಕ್, ಮೂಢನಂಬಿಕೆಯಂತಹ ತಂತ್ರಗಳನ್ನು ಬಳಸಿ ಮತಾಂತರ ಮಾಡುತ್ತಿರುವುದನ್ನು ನಿಷೇಧಿಸಬೇಕು" ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಅವರು ತಿಳಿಸಿದ್ದಾರೆ.  

ಆಮಿಷ ಅಥವಾ ಯಾವುದೇ ರೀತಿಯಲ್ಲಿ ಬಲವಂತವಾಗಿ ಮತಾಂತರ ಮಾಡಿದ ಘಟನೆ ಅಥವಾ ಉದಾಹರಣೆಯನ್ನು ಅರ್ಜಿಯಲ್ಲಿ ಉಲ್ಲೇಖಿಸಲ್ಲದೇ ಇರುವುದನ್ನು ವಿಚಾರಣೆ ವೇಳೆ ನ್ಯಾಯಾಲಯ ಗಮನಿಸಿದೆ.

ಈ ಸುದ್ದಿ ಓದಿದ್ದೀರಾ? 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

“ಮತಾಂತರವನ್ನು ಕಾನೂನಿನಲ್ಲಿ ನಿಷೇಧಿಸಲಾಗಿಲ್ಲ. ಸಾಂವಿಧಾನಾತ್ಮಾಕವಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಯ್ಕೆಯ ಯಾವುದೇ ಧರ್ಮ ಆರಿಸಿಕೊಳ್ಳುವ ಮತ್ತು ಆಚರಿಸುವ ಹಕ್ಕನ್ನು ಹೊಂದಿರುತ್ತಾನೆ. ಬಲವಂತವಾಗಿ ಮತಾಂತರಗೊಳಿಸುವುದು ತಪ್ಪು, ಆದರೆ ತನ್ನ ಇಷ್ಟದ ಧರ್ಮ ಆರಿಸಿಕೊಳ್ಳುವುದು ಒಬ್ಬ ವ್ಯಕ್ತಿಗೆ ನೀಡಿದ ವಿಶೇಷಾಧಿಕಾರ“ ಎಂದು ನ್ಯಾಯಮೂರ್ತಿ ಸಚ್‌ದೇವ ಹೇಳಿದ್ದಾರೆ.

ನಿಮ್ಮ ಈ ಆರೋಪಕ್ಕೆ ಆಧಾರವೇನು? ನೀವು ಸಲ್ಲಿಸಿದ ಅರ್ಜಿಗೆ ಯಾವುದೇ ಆಧಾರವಿಲ್ಲ, ದಾಖಲೆಗಳನ್ನು ನೀಡಿಲ್ಲ, ನಿದರ್ಶನವಿಲ್ಲ. ಮೂರು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವುದು ಬಿಟ್ಟರೆ ಉಳಿದೆಲ್ಲ ಕೇವಲ ಆರೋಪಗಳಾಗಿವೆ ಎಂದು ನ್ಯಾಯಮೂರ್ತಿ ಸಚ್‌ದೇವ್‌ ಅವರು ವಕೀಲರಿಗೆ ಹೇಳಿದ್ದಾರೆ.

ವೈಯಕ್ತಿಕ ಜ್ಞಾನ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತೀರ್ಪು, ಸಂವಿಧಾನ ಸಭೆಯ ಚರ್ಚೆಗಳು ಮತ್ತು ಸರ್ಕಾರಿ ವೆಬ್‌ಸೈಟ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಮೇರೆಗೆ ಮನವಿ ಸಲ್ಲಿಸಿ ಬಲವಂತದ ಮತಾಂತರ ನಿಷೇಧಿಸಲು ಕೋರಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಾಮೂಹಿಕ ಮತಾಂತರ ನಡೆಸುತ್ತಿದ್ದಾರೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿ ಸಾಮೂಹಿಕ ಮತಾಂತರ ಮಾಡಲಾಗುತ್ತಿದೆ. ವಿದೇಶಿ ಸಂಸ್ಥೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಗುರಿಯಾಗಿಟ್ಟುಕೊಂಡು ಮತಾಂತರ ಮಾಡಲು ಅನುದಾನವನ್ನು ಬಿಡುಗಡೆ ಮಾಡುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

“ಸಾಮೂಹಿಕ ಮತಾಂತರ ಎಂದು ಹೇಳಿದ್ದೀರಿ. ಅಂಕಿ- ಅಂಶಗಳು ಎಲ್ಲಿವೆ? ಯಾರಾದರೂ ಮತಾಂತರದಿಂದ  ನೊಂದವರು ಮುಂದೆ ಬಂದಿದ್ದಾರೆಯೇ? ನಾವು ಒಂದು ಕ್ಷಣವೂ ನಿಮ್ಮ ಪ್ರಮಾಣಿಕತೆಯನ್ನು ಪ್ರಶ್ನೆ ಮಾಡುವುದಿಲ್ಲ. ನಿಮ್ಮ ಅರ್ಜಿಯನ್ನು ನೋಡುತ್ತಿದ್ದೇವೆ. ಎಲ್ಲಾ ಅರ್ಜಿಗಳಲ್ಲಿಯೂ ದೋಷಗಳಿರುವುದು ಸಹಜ, ಅದನ್ನು ಸುಪ್ರೀಂಕೋರ್ಟ್‌ ಗಮನಿಸುತ್ತದೆ. ಆದರೆ ಸಾಮಾಜಿಕ ಮಾಧ್ಯಮದ ದತ್ತಾಂಶವನ್ನು ಸಾಕ್ಷಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ದತ್ತಾಂಶಗಳನ್ನು ಬದಲಾಯಿಸಿ ಬರೆಯುವ ಸಾಧ್ಯವಿರುವುದರಿಂದ ಅಲ್ಲಿನ ದತ್ತಾಂಶಗಳು ಸತ್ಯ ಎಂದು ನಂಬಲು ಸಾಧ್ಯವಿಲ್ಲ. 20 ವರ್ಷಗಳ ಹಿಂದೆ ಮಾಡಿದ ಕೆಲಸಗಳನ್ನು ಇಂದು ಮಾಡಲಾಗಿದೆ ಎಂದು ತೋರಿಸಬಹುದು" ಎಂದು ಪೀಠವು ಅಭಿಪ್ರಾಐಪಟ್ಟಿದೆ. 

ಸಾಮಾಜಿಕ ಜಾಲತಾಣದಿಂದ ಸಂಗ್ರಹಿಸಿದ ದತ್ತಾಂಶವನ್ನು ಉಪಾಧ್ಯಾಯ ಅವರು ನ್ಯಾಯಾಲಯದ ಮುಂದೆ ಸಾಕ್ಷಿಯಾಗಿ ಇಟ್ಟಿರುವುದನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸಚ್‌ದೇವ್ ಅವರು, ಸಮಸ್ಯೆಯ ವಿವರವಾದ ಪರಿಶೀಲನೆಗಾಗಿ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ. ಈ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. 

ಕೇಂದ್ರದ ಪರವಾಗಿ ಹಾಜರಿದ್ದ ಎಎಸ್‌ಜಿ ಚೇತನ್ ಶರ್ಮಾ ಅರ್ಜಿಯಲ್ಲಿ ಅತಿಮುಖ್ಯ ವಿಚಾರವನ್ನು ಎತ್ತಲಾಗಿದೆ ಎಂದು ವಾದಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, "ನೀವು ಕೇಂದ್ರದ ಗಮನಕ್ಕೆ ವಿಷಯವನ್ನು ತಂದಿದ್ದೀರಿ. ಇನ್ನು ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಬಿಡಬೇಕು. ನ್ಯಾಯಾಲಯದ ವಿಚಾರಕ್ಕೆ ಬಂದಲ್ಲಿ, ಈ ವಿಚಾರದತ್ತ ಗಮನಹರಿಸುವ ಅಗತ್ಯವಿದೆ ಎನ್ನುವುದು ಖಾತರಿಯಾಗಬೇಕಿದೆ" ಎಂದು ಹೇಳಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್