
- ಬೇಸಿಗೆ ರಜೆ ಕೋರಿ ದೆಹಲಿ ಸರ್ಕಾರಕ್ಕೆ ಪೋಷಕರ ಮನವಿ
- ಹೆಚ್ಚುತ್ತಿರುವ ಬಿಸಿಲ ಧಗೆಯಿಂದ ಮಕ್ಕಳಿಗೆ ಆರೋಗ್ಯದ ಭೀತಿ
ದೆಹಲಿಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ತಾಪಮಾನದಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಹೀಗಾಗಿ ರಜೆ ನೀಡಬೇಕೆಂದು ಪೋಷಕರು ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶಾಲಾ ಸಮಯವನ್ನು ನಿಗದಿತ ಸಮಯಕ್ಕಿಂತ ಕಡಿಮೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಅಧಿಕವಾಗುತ್ತಿವೆ. ಜೊತೆಗೆ ಬಿಸಿಲಿನ ಪ್ರಮಾಣ ಏರುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಶಾಲೆಗಳು ಈಗಾಗಲೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿವೆ.
ಹರಿಯಾಣ ಸರ್ಕಾರ 1 ರಿಂದ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾಠ ನಿಗದಿ ಮಾಡಿದೆ. ಖಾಸಗಿ ಶಾಲೆಗಳ ಸಮಯವನ್ನು ಇಳಿಸಿದೆ. ಆದರೆ, ದೆಹಲಿ ಸರ್ಕಾರ ಶಾಲಾವಧಿ ಇಳಿಸುವ ಕುರಿತ ಯಾವುದೇ ಘೊಷಣೆ ಮಾಡಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೋಷಕರ ಸಂಘದ ಅಧ್ಯಕ್ಷರಾದ ಅಪರಾಜಿತ ಗೌತಮ್, “ಒಂದೆಡೆ ಕೇಂದ್ರವು ಬಿಸಿಲಿನ ತಾಪ ಹೆಚ್ಚಾಗಿದೆ, ಮನೆಯಿಂದ ಆಚೆ ಬರಬೇಡಿ ಎನ್ನುತ್ತಿದೆ. ವಿಶೇಷವಾಗಿ ಮದ್ಯಾಹ್ನ 12ರಿಂದ 3ರ ತನಕ ಹೆಚ್ಚು ಬಿಸಿಲಿರುತ್ತದೆ. ದೆಹಲಿಯ ಬಹುತೇಕ ಶಾಲೆಗಳ ಸಮಯ ಮುಂಜಾನೆ 8ರಿಂದ ಮದ್ಯಾಹ್ನ 2ರ ತನಕ. ಮಕ್ಕಳು ಶಾಲೆ ಮುಗಿಸಿ ಮನೆಗೆ ತಲುಪುವುದರಲ್ಲಿ ಮದ್ಯಾಹ್ನ 3 ಗಂಟೆಯಾಗುತ್ತದೆ. ಈ ಸಮಯದಲ್ಲಿ ಹೆಚ್ಚು ಬಿಸಿಲಿರುವ ಕಾರಣ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿದೆ. ಹಾಗಾಗಿ ದೆಹಲಿಯ ಎಲ್ಲ ಶಾಲೆಗಳಿಗೆ ಮುಂಚಿತವಾಗಿ ಬೇಸಿಗೆ ರಜೆ ಘೋಷಿಸಬೇಕು. ಶಾಲೆಯ ಸಮಯವನ್ನು ಸರಿಯಾಗಿ ನಿಗದಿ ಪಡಿಸಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿದ್ದಿರಾ ? ಬೆಂಗಳೂರಿನಲ್ಲಿ ಮತ್ತೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ!
ದೇಶದಾದ್ಯಂತ ತಾಪಮಾನ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಆರೋಗ್ಯ ಸೌಲಭ್ಯ ಮತ್ತು ಉಪಯುಕ್ತ ಸಲಕರಣೆಗಳನ್ನು ಪೂರೈಸುವಂತೆ ಒತ್ತಾಯಿಸಿದೆ. ಅಗತ್ಯ ಸ್ಥಳಗಳಿಗೆ ಸಾಕಷ್ಟು ಪ್ರಮಾಣದ ಆರೋಗ್ಯದ ಸರಕುಗಳ ಸರಬರಾಜು ಜೊತೆಗೆ ತಂಪಾಗಿಸುವ ಉಪಕರಣಗಳನ್ನು ತಲುಪಿಸುವಂತೆ ಹೇಳಿದೆ.
ಅತ್ಯಧಿಕ ಬಿಸಿಲಿರುವ ಕಾರಣದಿಂದ ಮನೆಯಿಂದ ಹೊರಬರುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು ಮತ್ತು ಚಹಾ, ಕಾಫಿ, ಮದ್ಯಪಾನ ಮತ್ತು ಅಧಿಕ ಸಕ್ಕರೆಯಿರುವ ತಿನಿಸುಗಳ ಸೇವನೆ ಕಡಿಮೆ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಎಚ್ಚರಿಸಿದೆ.
"ನನ್ನ ಮಕ್ಕಳು ಸಾಕಷ್ಟು ಕಲಿಕೆಯ ನಷ್ಟ ಅನುಭವಿಸುತ್ತಿದ್ದಾರೆಂದು ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೆ. ಆದರೆ, ಈ ಬಿಸಿಲಿನ ತಾಪಕ್ಕೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಬಹುದು. ಆದ್ದರಿಂದ ಸರ್ಕಾರವು ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು" ಎಂದು ನೀರು ಮಾಧ್ಯಮಗಳಿಗೆ ತಿಳಿಸಿದ್ದಾರೆ.