ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌: ರೂ.200 ಕೋಟಿ ಹಣ ಮೀಸಲಿಟ್ಟ ರಾಜಸ್ಥಾನ ಸರ್ಕಾರ

  • ‘ಐ ಯಾಮ್ ಶಕ್ತಿ ಉಡಾನ್’ ಯೋಜನೆಯಡಿ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆ
  • ಕರ್ನಾಟಕದಲ್ಲಿ ಪ್ರಾಯೋಗಿವಾಗಿ ನಡೆಯುತ್ತಿದೆ ʻಮೈತ್ರಿ ಮುಟ್ಟಿನ ಕಪ್‌- ಶುಚಿ ಯೋಜನೆʼ

ಮಹಿಳೆಯರು ಮತ್ತು ಬಾಲಕಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ ನೀಡಲು 2022-23ರ ಬಜೆಟ್‌ನಲ್ಲಿ ರಾಜಸ್ಥಾನ ಸರ್ಕಾರವು 200 ಕೋಟಿ ಹಣ ಒದಗಿಸಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮಮತಾ ಭೂಪೇಶ್ ಶುಕ್ರವಾರ ತಿಳಿಸಿದರು.

ʻʻಐ ಯಾಮ್ ಶಕ್ತಿ ಉಡಾನ್’ ಹೆಸರಿನಲ್ಲಿ ಈ ಹೊಸ ಯೋಜನೆಯನ್ನು ಇಡೀ ರಾಜ್ಯದಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಇಂತಹ ಯೋಜನೆಗಳನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆʼʼ ಎಂದು ಅವರು ಹೇಳಿದರು.

ʻʻಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನೀಡುತ್ತಿರುವ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಗಾತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಯೋಜನೆಗಾಗಿ 2022-23ನೇ ಹಣಕಾಸು ವರ್ಷದಲ್ಲಿ 200 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆʼʼ ಎಂದು ಭೂಪೇಶ್ ವಿವರಿಸಿದರು.

ʻʻ33 ಜಿಲ್ಲೆಗಳ 60,361 ಅಂಗನವಾಡಿ ಕೇಂದ್ರಗಳಲ್ಲಿ 1.15 ಕೋಟಿ ಫಲಾನುಭವಿಗಳಿಗೆ ಹಾಗೂ ರಾಜ್ಯದ 34,104 ಸರ್ಕಾರಿ ಶಾಲೆಗಳಲ್ಲಿ 26.48 ಲಕ್ಷ ಫಲಾನುಭವಿಗಳಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸರಬರಾಜು ಮಾಡಲು ಆದೇಶಗಳನ್ನು ನೀಡಲಾಗಿದೆʼʼ ಎಂದು ಸಚಿವರು ಹೇಳಿದರು.

ʻʻಕಳೆದ ವರ್ಷ, ರಾಜಸ್ಥಾನ ವೈದ್ಯಕೀಯ ಸೇವಾ ನಿಗಮ ನಿಯಮಿತ ಸಂಸ್ಥೆಯು (ಆರ್‌ಎಂಎಸ್‌ಸಿಎಲ್‌) 31 ಜಿಲ್ಲೆಗಳ 26,220 ಶಾಲೆಗಳಿಗೆ ಹಾಗೂ 23 ಜಿಲ್ಲೆಗಳಲ್ಲಿ 31,255 ಅಂಗನವಾಡಿ ಕೇಂದ್ರಗಳಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸಿತ್ತು. ಈ ಉದ್ದೇಶಕ್ಕಾಗಿ ಆರ್‌ಎಂಎಸ್‌ಸಿಎಲ್ ಒಟ್ಟು ರೂ.104.78 ಕೋಟಿ ಖರ್ಚು ಮಾಡಿದೆʼʼ ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಕೋಲಾರ | ದಲಿತ ಕುಟುಂಬಕ್ಕೆ ಜೀವ ಬೆದರಿಕೆ: ಎಸ್‌ಸಿ-ಎಸ್‌ಟಿ ಕಲ್ಯಾಣ ಸಮಿತಿಗೆ ದೂರು

2018ರಲ್ಲಿ ರಾಜಸ್ಥಾನ ಸರ್ಕಾರವು ʻಮುಟ್ಟಿನ ನೈರ್ಮಲ್ಯ ಯೋಜನೆʼಯಡಿ ಉಚಿತ ಸ್ಯಾನಿಟರಿ ಪ್ಯಾಡ್‌ ಒದಗಿಸಲು ಮುಂದಾಗಿತ್ತು. ಅದಕ್ಕಾಗಿ ಆರಂಭದಲ್ಲಿ ಸುಮಾರು ರೂ.70 ಕೋಟಿ ಹಣವನ್ನು ಮೀಸಲಿಡಲಾಗಿತ್ತು. ಅದಕ್ಕೂ ಮೊದಲು 2017ರಲ್ಲಿ, ದೆಹಲಿ ಸರ್ಕಾರ ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸುವುದಾಗಿ ಘೋಷಿಸಿತ್ತು. ಮತ್ತೊಂದೆಡೆ, ಭೋಪಾಲ್ ರೈಲ್ವೆ ನಿಲ್ದಾಣವು ಹುಡುಗಿಯರು ಮತ್ತು ಮಹಿಳೆಯರಿಗೆ ಪ್ಯಾಡ್‌ಗಳನ್ನು ಪಡೆಯಲು ಸುಲಭವಾಗುವಂತೆ ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಯಂತ್ರವನ್ನು ಸಹ ಸ್ಥಾಪಿಸಿತ್ತು.

ಕರ್ನಾಟಕದಲ್ಲಿದೆ ಮೈತ್ರಿ ಮುಟ್ಟಿನ ಕಪ್‌- ಶುಚಿ ಯೋಜನೆ

ರಾಜ್ಯದ ಪ್ರತಿ ಹೆಣ್ಣುಮಕ್ಕಳಿಗೆ ಪರಿಸರ ಸ್ನೇಹಿಯಾದ ಮೈತ್ರಿ ಮುಟ್ಟಿನ ಕಪ್‌ಗಳನ್ನು ಉಚಿತವಾಗಿ ನೀಡುವ ನಿಟ್ಟನಲ್ಲಿ ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ʻಮೈತ್ರಿ ಮುಟ್ಟಿನ ಕಪ್‌- ಶುಚಿ ಯೋಜನೆʼಯನ್ನು ಘೋಷಿಸಿದ್ದರು. ಈ ನಿಟ್ಟಿನಲ್ಲಿ ರಾಜ್ಯದ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಮುಟ್ಟಿನ ಕಪ್‌ಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 'ಮೈತ್ರಿ ಮುಟ್ಟಿನ ಕಪ್‌- ಶುಚಿ ಯೋಜನೆಯ' ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಜುಲೈ 7ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿತ್ತು.

ʻʻಮುಟ್ಟು ಎನ್ನುವುದು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಸಹಜವಾಗಿ ಆಗುವ ಪ್ರಕ್ರಿಯೆ. ಶೇ.70ರಷ್ಟು ಹೆಣ್ಣುಮಕ್ಕಳು ಹಾಗೂ ತಾಯಂದಿರು ಇದನ್ನು ಹೇಳಿಕೊಳ್ಳಲು ಈಗಲೂ ಮುಜುಗರಪಡುತ್ತಾರೆ. ಇದು ಒಂದು ರೀತಿ ಸಾಮಾಜಿಕ ಪಿಡುಗಾಗಿದೆ. ಹದಿಹರೆಯದ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಆತಂಕಕ್ಕೊಳಗಾಗಬಾರದು, ನಾಚಿಕೆ ಪಟ್ಟುಕೊಳ್ಳಬಾರದು. ಮುಟ್ಟಿನ ಬಗ್ಗೆ ಧೈರ್ಯವಾಗಿ ಮನೆಯವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಬಹುದುʼʼ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ತಿಳಿಸಿದ್ದರು.

ಪ್ರಸ್ತುತ ಈ ಎರಡೂ ಜಿಲ್ಲೆಗಳ ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮುಟ್ಟಿನ ಕಪ್‌ ಬಳಸುವ ಬಗ್ಗೆ ಜಾಗೃತಿ ಅಭಿಯಾನಗಳು ರಾಜ್ಯದಲ್ಲಿ ನಡೆಯುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್