
- ರಷ್ಯನ್ನರ ವಿರುದ್ಧ ಹಿಂಸಾಚಾರ ಉತ್ತೇಜಿಸುವ ವಿಷಯ ಪೋಸ್ಟ್ ಮಾಡಲು ಪ್ರಚೋದನೆ
- 'ಮೆಟಾ ಎಂದಿಗೂ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಲ್ಲ' ಎಂದ ಮೆಟಾ ವಕೀಲರು
ಮಾರ್ಕ್ ಝುಕರ್ಬರ್ಗ್ ಒಡೆತನದ ದೈತ್ಯ 'ಮೆಟಾ' ಸಂಸ್ಥೆಯನ್ನು ರಷ್ಯಾವು, ಭಯೋತ್ಪಾದಕ ಮತ್ತು ಉಗ್ರಗಾಮಿ ಸಂಘಟನೆಗಳ ಪಟ್ಟಿಗೆ ಸೇರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಮಾರ್ಚ್ನಲ್ಲಿ ರಷ್ಯಾ ಸರ್ಕಾರವು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಿತ್ತು. ಮಾರ್ಕ್ ಝುಕರ್ಬರ್ಗ್ ಒಡೆತನದ ಸಾಮಾಜಿಕ ಮಾಧ್ಯಮಗಳ ಕೂಟವಾದ 'ಮೆಟಾ'ವು ಮೂಲಕ ಉಗ್ರಗಾಮಿ ಚಟುವಟಿಕೆ ನಡೆಸಲು ಪ್ರೇರಣೆ ನೀಡುತ್ತಿದೆ ಎಂದು ಮಾಸ್ಕೋ ನ್ಯಾಯಾಲಯ ಕೂಡ ಆರೋಪಿಸಿತ್ತು. ಉಕ್ರೇನ್ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ರಷ್ಯನ್ನರ ವಿರುದ್ಧ ಹಿಂಸಾಚಾರ ಉತ್ತೇಜಿಸುವ ವಿಷಯವನ್ನು ಪೋಸ್ಟ್ ಮಾಡಲು ಅವಕಾಶ ನೀಡುತ್ತಿದೆ ಎಂದು ರಷ್ಯಾ ತಿಳಿಸಿರುವುದಾಗಿ ವರದಿಯಾಗಿದೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಮೆಟಾ ಸಂಸ್ಥೆಯ ಪರ ವಕೀಲರು, ಆರೋಪಗಳನ್ನು ತಿರಸ್ಕರಿಸಿದ್ದರಲ್ಲದೇ, ಮೆಟಾ ಎಂದಿಗೂ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಲ್ಲ. 'ರಸ್ಸೋಫೋಬಿಯಾ'ಕ್ಕೆ ಮಾತ್ರ ವಿರುದ್ಧವಾಗಿದೆ ಎಂದು ಮಾಸ್ಕೋ ನ್ಯಾಯಾಲಯಕ್ಕೆ ತಿಳಿಸಿದ್ದರು.
ಫೆಬ್ರವರಿ 24ರಂದು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಸಂಪೂರ್ಣ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ, ರಷ್ಯಾವು ಸಾಮಾಜಿಕ ಮಾಧ್ಯಮದಲ್ಲಿ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ವಿಶ್ವಸಂಸ್ಥೆ ತುರ್ತು ಸಭೆ | ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಉಕ್ರೇನ್ ಒತ್ತಾಯ
ರಷ್ಯನ್ನರ ವಿರುದ್ಧ ಹಿಂಸಾಚಾರಕ್ಕೆ ಪಾಶ್ಚಿಮಾತ್ಯ ಸಾಮಾಜಿಕ ಮಾಧ್ಯಮ ದೈತ್ಯರು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಅದನ್ನು ನಿಷೇಧಿಸಿದೆ. ಪ್ರತೀಕಾರವಾಗಿ, ಯುರೋಪ್ನಲ್ಲಿನ ಟೆಕ್ ಕಂಪನಿಗಳು ರಷ್ಯಾದ ಪ್ರಾಯೋಜಿತ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವಿನ ಯುದ್ಧಕ್ಕೆ ಒಂಬತ್ತು ತಿಂಗಳಾಗುತ್ತಾ ಬಂದಿದೆ. ಯುದ್ಧ ನಿಲ್ಲುವ ಮತ್ತು ಶಾಂತಿ ಮಾತುಕತೆ ನಡೆಸುವ ಪ್ರಕ್ರಿಯೆಗಳು ನಡೆಯದಿರುವುದು ಜಗತ್ತಿನ ನಾನಾ ದೇಶಗಳಿಗೆ ಇನ್ನಷ್ಟು ಆತಂಕ ಉಂಟು ಮಾಡಿದೆ.