ವಿದ್ಯುಚ್ಛಕ್ತಿ ಮಸೂದೆ 2022ರ ತಿದ್ದುಪಡಿ: ಅಂಗೀಕರಿಸಿದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

  • ಲಿಖಿತ ಭರವಸೆಯಂತೆ ಸಮಾಲೋಚನೆ ನಡೆಸದ ಕೇಂದ್ರ ಸರ್ಕಾರ
  • ವಿದ್ಯುಚ್ಛಕ್ತಿ ಮಸೂದೆ ಅಂಗೀಕಾರವಾದರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಪ್ರಸಕ್ತ ಅಧಿವೇಶನದಲ್ಲಿ ವಿದ್ಯುಚ್ಛಕ್ತಿ ಮಸೂದೆ 2022ರ ತಿದ್ದುಪಡಿಯನ್ನು ಮಂಡಿಸುತ್ತಿದ್ದು, ವಿದ್ಯುಚ್ಛಕ್ತಿ ಮಸೂದೆ ಅಂಗೀಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

“ರೈತರ ಮೇಲೆ ಪರಿಣಾಮ ಬೀರುವ ವಿದ್ಯುತ್ ಮಸೂದೆಯಲ್ಲಿನ ನಿಬಂಧನೆಗಳ ಕುರಿತು, ಮೊದಲು ಎಲ್ಲ ರೈತ ಮುಖಂಡರು ಅಥವಾ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಚರ್ಚೆ ನಡೆಸಲಾಗುವುದು. ಎಸ್‌ಕೆಎಂ ಜೊತೆ ಚರ್ಚೆ ನಡೆದ ನಂತರವೇ ಮಸೂದೆಯನ್ನು ಸಂಸತ್ತಿನ ಮುಂದೆ ಇಡಲಾಗುವುದು” ಎಂದು ಕೇಂದ್ರ ಸರ್ಕಾರವು 2021ರ ಡಿಸೆಂಬರ್ 9ರಂದು ಎಸ್‌ಕೆಎಂಗೆ ಲಿಖಿತ ರೂಪದಲ್ಲಿ ಪತ್ರ ಬರೆದಿತ್ತು. ಆದರೆ, ಕಳೆದ ಎಂಟು ತಿಂಗಳಲ್ಲಿ ಎಸ್‌ಕೆಎಂ ಜೊತೆ ವಿದ್ಯುಚ್ಛಕ್ತಿ ಮಸೂದೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಕೇಂದ್ರ ಸಚಿವ ಸಂಪುಟ ಈಗಾಗಲೇ ಮಸೂದೆಗೆ ಅನುಮೋದನೆ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರವು ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ” ಎಂದು ಎಸ್‌ಕೆಎಂ ಆರೋಪಿಸಿದೆ.

Eedina App

ವಿದ್ಯುಚ್ಛಕ್ತಿ ಮಸೂದೆ 2022ರ ತಿದ್ದುಪಡಿ ಹಿಂಪಡೆಯುವಂತೆ ಬೇಡಿಕೆ ಸಲ್ಲಿಸಿ, ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದರು. 

ಈ ಸುದ್ದಿ ಓದಿದ್ದೀರಾ? ಹಾವೇರಿ | ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಬ್ಯಾಡಗಿ ಮೆಣಸಿನಕಾಯಿ

AV Eye Hospital ad

ವಿದ್ಯುಚ್ಛಕ್ತಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾದರೆ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿದ್ದು, ಆಗಸ್ಟ್ 9ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

ನಮ್ಮ ಬೇಡಿಕೆಗೆ ರಾಷ್ಟ್ರೀಯ ಸಮನ್ವಯ ಸಮಿತಿಯ ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳು ಬೆಂಬಲ ನೀಡಿದ್ದು, ಸರ್ಕಾರವು ಮಸೂದೆ ಮಂಡಿಸಿ, ಅಂಗೀಕರಿಸಿದರೆ ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳು ಕೆಲಸವನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ಎಸ್‌ಕೆಎಂ ತಿಳಿಸಿದೆ.

“ವಿದ್ಯುಚ್ಛಕ್ತಿ ಮಸೂದೆ 2022ರ ತಿದ್ದುಪಡಿಯಿಂದಾಗಿ, ವಿದ್ಯುತ್ ವಿತರಣಾ ವಲಯದಲ್ಲಿ ಖಾಸಗಿ ಕಂಪನಿಗಳು ಪ್ರವೇಶ ಮಾಡಲಿವೆ. ಖಾಸಗಿ ಕಂಪನಿಗಳು ವಿದ್ಯುತ್ ವಿತರಣಾ ಕೆಲಸ ವಹಿಸಿಕೊಂಡರೆ, ರೈತರಿಗೆ ಮತ್ತು ದೇಶದ ಇತರ ಎಲ್ಲ ವರ್ಗದ ಸಾಮಾನ್ಯರಿಗೆ ವಿದ್ಯುತ್ ದರ ಏರಿಸಿ, ಖಾಸಗಿ ಕಂಪನಿಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳುತ್ತವೆ. ‘ಕ್ರಾಸ್ ಸಬ್ಸಿಡಿ’ ವಿತರಣೆ ನಿಲ್ಲುವುದರ ಜೊತೆಗೆ ರೈತರಿಗೆ ಸಿಗುತ್ತಿದ್ದ, ಉಚಿತ ಅಥವಾ ಕಡಿಮೆ ದರದ ವಿದ್ಯುತ್ ಸೌಲಭ್ಯ ಕಡಿತಗೊಳ್ಳುತ್ತದೆ. ಹೀಗಾಗಿ ರೈತರಿಗೆ ಉತ್ಪಾದನಾ ವೆಚ್ಚ ಮತ್ತಷ್ಟು ಹೆಚ್ಚಾಗಿ, ಅವರ ಮೇಲೆ ಬರೆ ಬೀಳಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್ ದರ ಹೆಚ್ಚಾಗುತ್ತಲೇ ಇದ್ದು, ವಿದ್ಯುತ್ ನೌಕರರು ಮತ್ತು ಎಂಜಿನಿಯರ್‍‌ಗಳ ಹುದ್ದೆಗಳ ಮೇಲೂ ಪರಿಣಾಮ ಬೀರಲಿದೆ” ಎಂದು ಎಸ್‌ಕೆಎಂ ಮುಖಂಡರಾದ ಡಾ. ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರನ್, ಯುದ್ವೀರ್ ಸಿಂಗ್ ಹಾಗೂ ಯೋಗೇಂದ್ರ ಯಾದವ್ ಅವರು ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app