ಈ ದಿನ ವಿಶೇಷ ಸಂದರ್ಶನ| ಬಸವಣ್ಣನ ಮೇಲೆ ಬ್ರಾಹ್ಮಣಿಕೆ ಹೇರುವ ಹುನ್ನಾರ: ಸಾಣೇಹಳ್ಳಿ ಶ್ರೀ

ವೈದಿಕ ಪರಂಪರೆ ಯಾವಾಗಲು ಏನು ಮಾಡುತ್ತ ಬಂದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆ ಪರಂಪರೆಯ ಪ್ರತಿರೂಪವಾಗಿ ಈ ಪಠ್ಯದಲ್ಲಿ ಕೆಲವು ಶಬ್ದಗಳು ಸೇರಿವೆ. ಆ ಪರಂಪರೆ ಸಮಾಜದಲ್ಲಿ ಮತ್ತಷ್ಟು ಕಲಹ ಉಂಟುಮಾಡುವಂತಹದ್ದು, ಸತ್ಯವನ್ನು ಮರೆಮಾಚುವಂತಹದ್ದು, ಇತಿಹಾಸಕ್ಕೆ ದ್ರೋಹ ಬಗೆಯುವಂತಹದ್ದು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಈ ದಿನ.ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Panditaradhya swamyji

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಭಗತ್ ಸಿಂಗ್, ಪೆರಿಯಾರ್‌, ನಾರಾಯಣ ಗುರು ಮುಂತಾದವರ ಪಠ್ಯವನ್ನೇ ಪುಸ್ತಕದಿಂದ ಕೈಬಿಟ್ಟು ಪೇಚಿಗೆ ಸಿಲುಕಿದ್ದ ಸರ್ಕಾರ ಇದೀಗ ಬಸವಣ್ಣನ ಇತಿಹಾಸವನ್ನೇ ತಿರುಚಿ ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿದೆ.

ಬಸವಣ್ಣನನ್ನೂ ಬ್ರಾಹ್ಮಣೀಕರಣಗೊಳಿಸುವ ಭರದಲ್ಲಿ ಬಸವಣ್ಣ "ಯಜ್ಞೋಪವೀತ ಧರಿಸಿ ಕಲ್ಯಾಣದ ಕಡೆಗೆ ನಡೆದರು" ಎಂಬ ಸಾಲುಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಸಾಲುಗಳು ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಣೇಹಳ್ಳಿ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ವಿವಾದಿತ ಪಠ್ಯವನ್ನು ಹಿಂಪಡೆಯುವಂತೆಯೂ ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ಈ ದಿನ.ಕಾಮ್‌ ಗೆ ವಿಶೇಷ ಸಂದರ್ಶನ ನೀಡಿದ್ದು, ಅವರ ಮಾತುಗಳು ಇಲ್ಲಿವೆ.

ಬಸವಣ್ಣನ ಕುರಿತ ಪಠ್ಯದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಬಸವಣ್ಣ ಬ್ರಾಹ್ಮಣೀಕರಣದ ವಿರುದ್ಧ ಇದ್ದವರು. ಶಾಸ್ತ್ರ, ಪಂಚಾಂಗ, ಜ್ಯೋತಿಷ್ಯವನ್ನು ಅವರಷ್ಟು ನೇರವಾಗಿ ಪ್ರತಿಭಟಿಸಿದವರು ಮತ್ತೊಬ್ಬರಿಲ್ಲ. ಮೌಢ್ಯಗಳನ್ನು ಪೂರ್ಣವಾಗಿ ನಿರಾಕರಿಸಿದವರು. ಸಮ ಸಮಾಜವನ್ನು ನೆಲೆಗೊಳಿಸಬೇಕು ಎಂಬುದು ಅವರ ಆಶಯವಾಗಿತ್ತು. ಆದರೇ ಅವರ ಈ ಎಲ್ಲ ವಿಚಾರಗಳಿಗೆ ಅಪಚಾರ ಮಾಡುವ ನಿಟ್ಟಿನಲ್ಲಿ ಪಠ್ಯದಲ್ಲಿ ಕೆಲವು ಅಂಶಗಳು ಸೇರಿವೆ. ಆ ಅಂಶಗಳ ಬಗ್ಗೆ ನಮ್ಮಂತವರೇ ಸುಮ್ಮನಾದರೆ ಬೇರೆ ಯಾರು ಮಾತನಾಡಬೇಕು, ಪ್ರತಿಭಟಿಸಬೇಕು?

ಶರಣರ ಸಿದ್ಧಾಂತದಲ್ಲಿ ಬಂಡಾಯ ಪ್ರಜ್ಞೆ ಇದೆ. ಗಣಾಚಾರಿಗಳಾದ ನಾವು ಸುಮ್ಮನಿದ್ದರೆ ಈ ಪಠ್ಯವನ್ನು ಅವರು ಹಾಗೇ ಮುಂದುವರಿಸುತ್ತಾರೆ. ಮಕ್ಕಳಿಗೆ ತಪ್ಪು ಸಂದೇಶ ಹೋಗುತ್ತದೆ. ಎಳೆಯ ಮಕ್ಕಳ ಮನಸ್ಸಲ್ಲಿ ತಪ್ಪು ಸಂದೇಶ ಬಿತ್ತಿದರೆ ಅದು ಮುಂದಾಗಬಹುದಾದ ಅನಾಹುತಕ್ಕೆ ಕಾರಣವಾಗುತ್ತದೆ. ಆ ಪಠ್ಯವನ್ನು ಸಮಗ್ರವಾಗಿ ಓದಿ ನಾವು ಮುಖ್ಮಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ʼಇದರಲ್ಲಿನ ದೋಷಗಳನ್ನು ಸರಿಪಡಿಸಿ, ಇಲ್ಲವೇ ಹಳೆ ಪಠ್ಯ ಮುಂದುವರಿಸಿʼ ಎಂದು ಮನವಿ ಮಾಡಿದ್ದೇವೆ. ಹಳೆಯ ಪಠ್ಯದಲ್ಲೂ ಕೆಲವು ದೋಷಗಳಿವೆ. ಆದರೇ ಪರಿಷ್ಕೃತ ಪಠ್ಯದಲ್ಲಿ ಅತಿ ಹೆಚ್ಚು ದೋಷಗಳಿದ್ದು, ಎಲ್ಲವನ್ನೂ ಸರಿಪಡಿಸಬೇಕು.

school book

ಶೈವ ಗುರುಗಳ ಸಾನ್ನಿಧ್ಯದಲ್ಲಿ ಬಸವಣ್ಣ ಲಿಂಗಧೀಕ್ಷೆ ಪಡೆದರು, ಉಪನಯನದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಪಠ್ಯದಲ್ಲಿ ಬರೆಯಲಾಗಿದೆ. ಇದು ಸರಿನಾ?

ಪಠ್ಯದಲ್ಲಿರುವ ಈ ಅಂಶ ದೊಡ್ಡ ಅಪಚಾರ. ಬಸವಣ್ಣನವರು ಜನಿವಾರ ಸಂಸ್ಕೃತಿಯನ್ನೇ ನಿರಾಕರಿಸಿದವರು. ಅದರ ವಿರುದ್ಧವೇ ಅವರ ಹೋರಾಟ ಪ್ರಾರಂಭವಾದದ್ದು. ನನಗೆ ನೀಡುವ ಈ ಜನಿವಾರ ನನ್ನ ಹೆತ್ತ ತಾಯಿಗೆ ಏಕಿಲ್ಲ, ನನ್ನ ಸಹೋದರಿಯರಿಗೆ ಏಕಿಲ್ಲ, ನನ್ನ ಜೊತೆ ಆಡುವ ಬೇರೆ ಮಕ್ಕಳಿಗೇಕಿಲ್ಲ, ಅವರಿಗೇ ಇಲ್ಲದ ಜನಿವಾರ ನನಗೇಕೆ? ಇಂತಹ ಸಂಸ್ಕಾರವೇ ನನಗೆ ಬೇಡ ಎಂದು ನಿರಾಕರಿಸಿದ್ದರು.

ಆಗ ಪುರೋಹಿತ ಪರಂಪರೆಯ ಜನ ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂದು ಬಸವಣ್ಣನಿಗೆ ಬಹಿಷ್ಕಾರ ಹಾಕಿದರು. ಆದರೆ, ಬಸವಣ್ಣನವರು ʼನೀವು ನನಗೇನು ಬಹಿಷ್ಕಾರ ಹಾಕುವುದು, ನಾನೇ ನಿಮ್ಮ ಎಲ್ಲ ಸಂಪ್ರದಾಯಗಳಿಗೆ ಬಹಿಷ್ಕಾರ ಹಾಕುತ್ತೇನೆಂದುʼ, ಹುಟ್ಟಿದ ಮನೆ, ಊರು ಮತ್ತು ಜಾತಿಯಿಂದ ಹೊರಬಂದು ವಿಶ್ವಮಾನವರಾದರು. 

ಪಠ್ಯದಲ್ಲಿ ವೀರಶೈವ ಮತವನ್ನು ಬಸವಣ್ಣ ಅಭಿವೃದ್ಧಿಪಡಿಸಿದರು ಎನ್ನುವ ಮಾತಿದೆಯಲ್ಲ?

ಬಸವಣ್ಣ ಬಂಡಾಯ ಎದ್ದಿದ್ದೆ ಮೌಢ್ಯ ಮತ್ತು ಕಂದಾಚಾರಗಳ ವಿರುದ್ಧ. ಇಂತಹ ಅನೇಕ ಅಂಶಗಳು ಸನಾತನ ಧರ್ಮದಲ್ಲಿ ಕಂಡಾಗ ಇದಕ್ಕಿಂತ ಹೋಸದೇನನ್ನಾದರೂ ಮಾಡಲು ಸಾಧ್ಯವೇ? ಎಂದು ಯೋಚಿಸಿದಾಗ ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಬಸವಣ್ಣನಿಗೂ ಜ್ಞಾನೋದಯವಾಯಿತು. ಆ ಜ್ಞಾನೋದಯದ ಪರಿಣಾಮ ಅವರು ಇಷ್ಟಲಿಂಗದ ಜನಕರಾದರು. ಆದರೇ, ಪಠ್ಯದಲ್ಲಿ ಶೈವ ಗುರುಗಳು ಅವರಿಗೆ ಧೀಕ್ಷೆ ನೀಡಿದರು ಎಂದು ಬರೆಯಲಾಗಿದೆ.

ಯಾವ ಗುರುಗಳೂ ಬಸವಣ್ಣನವರಿಗೆ ಧೀಕ್ಷೆ ನೀಡಿರಲಿಲ್ಲ. ಅವರ ವಚನಗಳಲ್ಲಿ ಒಂದು ಮಾತಿದೆ "ಎನಗೆ ಲಿಂಗ ಪಥವ ತೋರಿದವರಾರು, ಜಂಗಮ ಪಥವ ತೋರಿದವರಾರು, ತೋರುವ ಮನವೇ ನೀವೆಂದರಿತೆ” ಎಂದು ಹೇಳುತ್ತಾರೆ. ಅವರಿಗೆ ಅರಿವೇ ಗುರುವಾಗಿತ್ತು. ಬಸವಣ್ಣನವರಿಗೆ ಯಾವ ಗುರು ಇರಲಿಲ್ಲ. ಇದ್ದಿದ್ದರೆ ಅವರ ವಚನಗಳಲ್ಲಿ ಅವರ ಪ್ರಸ್ತಾಪ ಇರುತ್ತಿತ್ತು. ಇದು ಈಗ ಸೃಷ್ಟಿ ಮಾಡಲಾಗಿರುವ ಗೊಂದಲ.

'ಕಾಯಕವೇ ಕೈಲಾಸ' ಎಂದು ಸಾರಿದವರು ಬಸವಣ್ಣನವರೇ?

ಇಲ್ಲಿ ಎರಡು ಅಂಶಗಳಿವೆ. ಕಾಯಕವೇ ಕೈಲಾಸ, ಕಾಯವೇ ಕೈಲಾಸ. ಕಾಯಕವೆಂದರೆ ಮಾಡುವ ಕೆಲಸ. ಬಸವಣ್ಣನವರ ವಚನಗಳಲ್ಲಿ ಕಂಡುಬರುವುದು ಕಾಯವೇ ಕೈಲಾಸ. ಶರೀರದ ಪಾವಿತ್ರ್ಯ ಉಳಿಸಿಕೊಂಡರೆ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಕಾಯಕದ ಬಗ್ಗೆ ಅವರು ಹೇಳಿಲ್ಲವೆಂದಲ್ಲ ಹೇಳಿದ್ದಾರೆ. ಆದರೇ ಪಠ್ಯದಲ್ಲಿ ಬಳಸಿರುವ ಪದವನ್ನು ಅವರು ಯಾವ ವಚನದಲ್ಲೂ ಬಳಸಿಲ್ಲ. ಅದನ್ನು ಬಳಸಿರುವವರು ಆಯ್ದಕ್ಕಿ ಮಾರಯ್ಯನವರು.

ತಪ್ಪು ತಪ್ಪು ಸಂದೇಶ ಹೋದರೆ ಯಾರದ್ದೊ ವಚನದ ಸಾಲನ್ನು ಇನ್ಯಾರದ್ದೋ ವಚನಕ್ಕೆ ಹಾಕಿದರೆ ಹೇಗೆ? ಇದನ್ನೇ ನಾವು ವಿರೋಧ ಮಾಡಿದ್ದು. ಸರಿಯಾದ ಅರಿವಿದ್ದರೆ, ವಚನ ಶಾಸ್ತ್ರದ ಪರಿಚಯವಿದ್ದರೆ ಈ ರೀತಿಯ ದೋಷಗಳು ಆಗುತ್ತಿರಲಿಲ್ಲ. ಪಠ್ಯ ರಚನೆಯ ನಂತರ ತಜ್ಞರ ಜೊತೆ ಚರ್ಚೆ ಮಾಡಬಹುದಿತ್ತು. ಲಿಂಗಾಯತ ಧರ್ಮ, ಬಸವ ತತ್ವದ ಬಗ್ಗೆ ಜ್ಞಾನ ಹೊಂದಿದವರ ಜೊತೆ ಚರ್ಚೆ ಮಾಡಬಹುದಿತ್ತು. ಅದ್ಯಾವುದನ್ನು ಮಾಡದೇ ತಮಗೆ ತೋಚಿದಂತೆ ಪಠ್ಯವನ್ನು ಬರೆದಿದ್ದಾರೆ. 

ಇಂದು ಬೆಳಗ್ಗೆ ಖಾಸಗಿ ಟಿವಿ ಮಾಧ್ಯಮವೊಂದರಲ್ಲಿ 'ಸ್ವಾಮೀಜಿ ಇದು ಬರಗೂರು ರಾಮಚಂದ್ರಪ್ಪರಿಗೂ ಮೊದಲಿದ್ದ ಇನ್ನೊಬ್ಬ ಅಧ್ಯಕ್ಷರ ಕಾಲದಲ್ಲಿ ಮುದ್ರಣವಾದ ಪಠ್ಯ. ಅದನ್ನು ಯಥಾವತ್ತಾಗಿಟ್ಟಿದ್ದಿವಿ' ಎಂದು ಹೇಳಿದರು. ನಾವು ಆ ಪಠ್ಯವನ್ನು ತರಿಸಿ ನೋಡಿದರೇ ಅದು ನಿಜ. ಆದರೇ, ಅಲ್ಲಿ ದೋಷಗಳಿರುವುದನ್ನು ಯಾರೂ ಗಮನಿಸಿಲ್ಲ. ಹಾಗಂತಾ ಈಗಲು ಅದನ್ನು ಯಥಾಸ್ಥಿತಿಯಲ್ಲಿಡಬೇಕೆಂದಿಲ್ಲ. ಭಗವಂತ ಬುದ್ದಿ ಕೊಟ್ಟಿದ್ದಾನೆ. ಬಸವಣ್ಣ ಶಿರವನ್ನು ಹೊನ್ನಕಳಶ ಎನ್ನುತ್ತಾರೆ, ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎಂದು ಹೇಳುತ್ತಾರೆ. ಹೀಗಿರುವಾಗ ಯಾವುದನ್ನು ಕೊಡಬೇಕು ಯಾವುದನ್ನು ಕೊಡಬಾರದು ಎಂಬ ಎಚ್ಚರ ನಮಗಿರಬೇಕು. ಆ ಎಚ್ಚರವಿಲ್ಲದೇ ಅಪ್ಪ ಹಾಕಿದ ಆಲದ ಮರ ಎಂದು ನೇಣುಹಾಕಿಕೊಳ್ಳಲು ಸಾಧ್ಯವೇ? 

school book

ಹಿಂದಿನ ಪಠ್ಯದಲ್ಲಿ 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಆಗಿನ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳ ವಿರುದ್ಧ ಬಸವಣ್ಣ ಹೋರಾಡಿದರು" ಎಂದು ಮುದ್ರಿಸಲಾಗಿತ್ತು. ಆದರೆ, ಈ ಸಾಲುಗಳನ್ನೂ ಪರಿಷ್ಕೃತ ಪಠ್ಯದಿಂದ ಕೈಬಿಡಲಾಗಿದೆ.

ಯಾವ ಸಾಲುಗಳನ್ನು ಬಿಟ್ಟಿದ್ದಾರೆ, ಯಾವುದನ್ನು ತೆಗೆದುಕೊಂಡಿದ್ದಾರೆ ಎನ್ನುವುದಕ್ಕಿಂತ ಕೊಟ್ಟಿರುವ ಪಠ್ಯ ಎಷ್ಟರ ಮಟ್ಟಿಗೆ ಬಸವ ತತ್ವಕ್ಕೆ ನ್ಯಾಯ ಒದಗಿಸುವಂತಹುದು? ಬಸವಣ್ಣನವರ ತತ್ವ ಸಿದ್ಧಾಂತವನ್ನು ನಾವು ಹೇಗೆ ಪ್ರತಿಪಾದಿಸುತ್ತಿದ್ದೇವೆ? ಎಂಬ ಎಚ್ಚರ ಇರುವುದು ಅಗತ್ಯ.

ಬಸವ ಧರ್ಮ, ಲಿಂಗಾಯತ ಧರ್ಮದ ಪರಿಚಯ ಮಾಡಿಕೊಡುವುದಾದರೇ ಮುಖ್ಯವಾಗಿ ಅವರು ಹೇಳಬೇಕಿರುವುದು ಅಷ್ಟಾವರಣ, ಪಂಚ ಆಚಾರ, ಷಟಸ್ಥಲಗಳು, ಕಾಯಕ, ದಾಸೋಹ ಮತ್ತು ಲಿಂಗಪೂಜೆ ಇವುಗಳ ಬಗ್ಗೆ ಮಾಹಿತಿ ಕೊಡಬೇಕಿತ್ತು. ಆದರೆ, ಅದನ್ನು ಬಿಟ್ಟು, ಬಸವಣ್ಣನವರಿಗೆ ಇಂತವರು ಧೀಕ್ಷೆ ಕೊಟ್ಟರು, ಬಸವಣ್ಣ ವೀರಶೈವ ಧರ್ಮವನ್ನು ಪುನರುತ್ಥಾನ ಮಾಡಿದ ಎಂದು ಹೇಳುವುದು ತತ್ವಕ್ಕೆ ಅಪಚಾರ ಮಾಡಿದಂತೆ. ಈಗಲೂ ಅವರದನ್ನು ಒಪ್ಪಲು ತಯಾರಿಲ್ಲ. ಈ ಬಗ್ಗೆ ಸರ್ಕಾರದಲ್ಲಿ ಕೆಲವರ ಬಳಿ ಮಾತನಾಡಿದಾಗ ಇಲ್ಲ ವ್ಯವಸ್ಥಿತವಾಗಿ ಮಾಡಿದ್ದೀವಿ ಎಂದು ಹೇಳುತ್ತಾರೆ. ಆದರೇ, ಇದು ವ್ಯವಸ್ಥಿತವಲ್ಲ. ಇದರ ಹಿಂದೆ ಯಾವುದೋ ಹುನ್ನಾರವಿದೆ. ಆ ಹುನ್ನಾರವನ್ನು ನಾವು ಬಯಲಿಗೆಳೆವ ಪ್ರಯತ್ನ ಮಾಡಬೇಕು. 

ವ್ಯವಸ್ಥಿತ ಹುನ್ನಾರ ಯಾವ ರೀತಿ ನಡೆಯುತ್ತಿದೆ?

ಹುನ್ನಾರ ಏನು ಎಂದರೇ… ವೈದಿಕ ಪರಂಪರೆ ಯಾವಾಗಲು ಏನು ಮಾಡುತ್ತ ಬಂದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆ ಪರಂಪರೆಯ ಪ್ರತಿರೂಪವಾಗಿ ಈ ಪಠ್ಯದಲ್ಲಿ ಕೆಲವು ಶಬ್ದಗಳು ಸೇರಿವೆ. ಆ ಪರಂಪರೆ ಯಾವಾಗಲೂ ಸಮಾಜಮುಖಿಯಾದಂತಹದಲ್ಲ. ಬದಲಾಗಿ ಸಮಾಜದಲ್ಲಿ ಮತ್ತಷ್ಟು ಕಲಹವನ್ನುಂಟುಮಾಡುವಂತಹದ್ದು, ಸತ್ಯವನ್ನು ಮರೆಮಾಚುವಂತಹದ್ದು, ಇತಿಹಾಸಕ್ಕೆ ದ್ರೋಹ ಬಗೆಯುವಂತಹದ್ದು. ವಾಸ್ತವವಾಗಿ ನಾವು ಮಕ್ಕಳಿಗೆ ಸತ್ಯವನ್ನೇ ಕೊಡಬೇಕು. ಇತಿಹಾಸವೇನಿದೆ ಅದನ್ನು ಹೇಳಬೇಕು. ಆದರೆ, ಈ ಪಠ್ಯದಲ್ಲಿ ತತ್ವವಿಲ್ಲ, ಸತ್ಯವಿಲ್ಲ, ಇತಿಹಾಸವಿಲ್ಲ. ಇಂತಹ ಪಠ್ಯಗಳು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತವೆ

ಹೊಸ ಪರಿಷೃತ ಪಠ್ಯ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೀರಿ. ಪ್ರತಿಕ್ರಿಯೆ ಬಂದಿದೆಯೇ?

ನಿನ್ನೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕರೆಮಾಡಿ "ಸ್ವಾಮೀಜಿ ಅದರಲ್ಲಿ ಎಲ್ಲ ಸರಿ ಇದೆ" ಎಂದರು. ಸಚಿವರೇ ಇನ್ನೊಮ್ಮೆ ನೀವು ಪೂರ್ಣವಾಗಿ ಓದಿಕೊಳ್ಳಿ, ಅಥವಾ ಬಸವ ತತ್ವಬಲ್ಲವರ ಹತ್ತಿರ ಮಾತನಾಡಿ, ಇಲ್ಲವಾದರೆ ನಮ್ಮ ಬಳಿ ಬಂದು ಚರ್ಚಿಸಿ ಎಂದು ಪ್ರತ್ಯುತ್ತರ ನೀಡಿದೆ. ʼಇಲ್ಲಾ ಸ್ವಾಮೀಜಿ ನಿಮ್ಮ ಬಳಿ ಬಂದು ಚರ್ಚಿಸುತ್ತೇನೆʼ ಎಂದು ಆಶ್ವಾಸನೆ ನೀಡಿದ್ದಾರೆ.

ನೂತನ ಪಠ್ಯ ಬಸವ ತತ್ವಕ್ಕೆ ಅಪಚಾರ ಮಾಡುವಂತಿದೆ, ಅಲ್ಲಿ ಬಳಸಿರುವ ಪ್ರತಿಯೊಂದು ಪದವನ್ನು ಹಿಡಿದು ನಾವು ಚರ್ಚಿಸಬಲ್ಲೆವು. ಆದರೆ ನಮ್ಮ ಉದ್ದೇಶ ನೈಜ ತತ್ವವನ್ನು ನೀವು ಪಠ್ಯದಲ್ಲಿ ಕೊಡಬೇಕು ಎಂಬುದೇ ಆಗಿದೆ ಎಂದು ಸಚಿವರಿಗೆ ವಿವರಿಸಿದೆವು. ಅದಕ್ಕುತ್ತರಿಸಿದ ಅವರು ಪುಸ್ತಕಗಳು ಆಗಲೇ ಮುದ್ರಣಗೊಂಡಿವೆ ಎಂದರು. ಉಳಿದ ಆಹಾರ ಹಂಚುವ ರೀತಿ ಪುಸ್ತಕಗಳನ್ನು ಹಂಚಲಾಗದು ಎಂಬ ಮಾತನ್ನು ಸೂಚ್ಯವಾಗಿ ಹೇಳಿದ್ದೇವೆ. ಅವರು ನಿಮ್ಮ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ. ಯಾವಾಗ ಬರುತ್ತಾರೋ ನೋಡಬೇಕು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮ್ಮ ಸಮಾಜದವರು, ನಿಮ್ಮ ಸಮಾಜದವರೇ ಬಸವಣ್ಣನ ಇತಿಹಾಸ ತಿರುಚಲು ನಿಂತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ?

ನಾವು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದು ನಮ್ಮ ಆಶಯ. ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎನ್ನುವ ತತ್ವವನ್ನು ನಾವು ಮೊದಲಿನಿಂದಲೂ ಪರಿಪಾಲನೆ ಮಾಡಿಕೊಂಡು ಬಂದಿದ್ದೇವೆ. ಹಾಗಾಗಿ ಇವರು ಮಾತ್ರ ನಮ್ಮವರು, ಇವರು ನಮ್ಮವರಲ್ಲ ಎಂಬ ಭಾವನೆ ನಮ್ಮಲ್ಲಿಲ್ಲ. ಸಿದ್ದರಾಮಯ್ಯನವರು ನಮ್ಮವರೇ, ಯಡಿಯೂರಪ್ಪನವರೂ ನಮ್ಮವರೇ, ಕುಮಾರಸ್ವಾಮಿಯವರೂ ನಮ್ಮವರೇ.

ನಾವು ಯಾರನ್ನೂ ಬೇರೆಯವರೆಂದು ಹೇಳೋದಿಲ್ಲ. ತಪ್ಪು ಮಾಡಿದಾಗ ನಮ್ಮವರೇ ಆಗಲಿ, ಬೇರೆಯವರೇ ಆಗಲಿ ನೇರವಾಗಿ ವಿರೋಧ ಮಾಡುವಂಥದ್ದು, ಅವರಿಗೆ ತಿಳಿವಳಿಕೆ ಹೇಳುವ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ. ಅದನ್ನು ಹೇಳುವ ಕೆಲಸ ನಾವು ಮಾಡಿದ್ದೇವೆ. 

ಕೆಲ ಸಾಹಿತಿಗಳು ಪಠ್ಯ ಪರಿಷ್ಕರಣೆ ವಿರೋಧಿಸಿ ತಮ್ಮ ಕಥೆ, ಕವನ, ಲೇಖನ ಹಿಂತೆಗೆದುಕೊಳ್ಳುತ್ತಿದ್ದಾರೆ. ನಿಮ್ಮ ಮುಂದಿನ ಹೋರಾಟ ಹೇಗಿರುತ್ತೆ?

ನಾವು ಕೆಲ ಸ್ವಾಮೀಜಿಗಳು, ಸಾಹಿತಿಗಳು, ವಿದ್ವಾಂಸರು ಹಾಗೂ ಸಾರ್ವಜನಿಕರ ಜತೆ ಚರ್ಚೆ ಮಾಡಿ ಮುಂದೆ ಏನು ಮಾಡಬೇಕೆಂದು ಚಿಂತಿಸುತ್ತೇವೆ. ತಕ್ಷಣಕ್ಕೆ ನಾವೊಬ್ಬರೇ ನಮ್ಮ ಅಭಿಪ್ರಾಯಗಳನ್ನು ಹೇಳೋದು ಸರಿಯಲ್ಲ. ಆದರೆ, ಪಠ್ಯ ವಾಪಸ್ ತೆಗೆದುಕೊಳ್ಳಲೇಬೇಕೆಂಬುದು ನಮ್ಮ ಹಕ್ಕೊತ್ತಾಯ. 

ಕಳೆದ ಮೂರ್ನಾಲ್ಕು ತಿಂಗಳಿಂದ ಕರ್ನಾಟಕದಲ್ಲಿ ಕೆಲ ಆತಂಕಕಾರಿ ಕೋಮುವಾದಿ ಘಟನೆಗಳು ನಡೆಯುತ್ತಿವೆ. ಇಂಥ ಸನ್ನಿವೇಶಗಳನ್ನು ನಾವು ಹೇಗೆ ಎದುರುಗೊಳ್ಳಬೇಕು?

ಇಂಥ ಸಂದರ್ಭದಲ್ಲಿ ಮನುಷ್ಯ ತಾಳ್ಮೆಯನ್ನು ಕಳೆದುಕೊಳ್ಳಬಾರದು. ತಾಳ್ಮೆಯನ್ನು ಕಳೆದುಕೊಂಡಾಗ ಇನ್ನಷ್ಟು ಅನಾಹುತಗಳಾಗುವ ಸಾಧ್ಯತೆ ಇದೆ. ತುಂಬಾ ವಿವೇಕದಿಂದ ವಾಸ್ತವತೆಯನ್ನು ಮನವರಿಕೆ ಮಾಡಿಕೊಡುವಂಥ ಪ್ರಯತ್ನ ಮಾಡಬೇಕು. ರಾಜಕಾರವಿರಲಿ, ಧರ್ಮಕಾರಣವಿರಲಿ. ಅವೆರಡೂ ಒಂದಾದಾಗ ಒಳ್ಳೆಯದೂ ಆಗುತ್ತದೆ, ಅಪಾಯಕಾರಿನೂ ಆಗುತ್ತದೆ. ಹೀಗಾಗಿ ಅವುಗಳಿಗೆ ತಿಳಿವಳಿಕೆ ನೀಡುವ ಕೆಲಸವನ್ನು ನಾವು ಮಾಡಬೇಕಾಗುತ್ತದೆ. 

ಈ ಸುದ್ದಿ ಓದಿದ್ದೀರಾ?: ಈ ದಿನ ಎಕ್ಸ್‌ಕ್ಲ್ಯೂಸಿವ್| ಹೋರಾಟಕ್ಕೆ ಮಣಿಯಲ್ಲ, ಪಠ್ಯ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಬಿ ಸಿ ನಾಗೇಶ್

ರಾಜ್ಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಿಪ್ಲವ ಉಂಟಾಗಿದೆ ಎಂದು ಸಾಹಿತಿಗಳು ಅಭಿಪ್ರಾಯಪಟ್ಟಿದ್ದಾರೆ.. ನಿಮ್ಮ ನಿಲುವು?

ಇದು ಎಲ್ಲ ಕಾಲಕ್ಕೂ ನಡೆದಿರುವಂತಹದ್ದು. ಬಲಿಷ್ಠರು ದುರ್ಬಲರ ಮೇಲೆ ದಬ್ಬಾಳಿಕೆ ಮಾಡುವುದು, ಬುದ್ಧಿವಂತರು ದಡ್ಡರ ಮೇಲೆ ಪ್ರಯೋಗ ಮಾಡುವಂತಹದ್ದರ ಬಗ್ಗೆ ಇತಿಹಾಸದಲ್ಲಿ ಹಲವು ನಿದರ್ಶನಗಳು ಕಂಡುಬಂದಿವೆ. ಇಂತಹ ಸಂದರ್ಭದಲ್ಲಿ ನಾವು ಅವುಗಳನ್ನು ಸರಿಯಾದ ಮಾರ್ಗದರ್ಶನದಲ್ಲಿ ಬದಲಾವಣೆ ಮಾಡುವ ಪ್ರಯತ್ನ ಮಾಡಬೇಕು. ಇತಿಹಾಸದಲ್ಲಿ ಏನೋ ಆಗಿದೆ ಎಂದು ಈಗ ಸೇಡು ತೀರಿಸಿಕೊಳ್ಳಲು ಮುಂದಾಗುವುದು ಸರಿಯಲ್ಲ. ಬದಲಾಗಿ ಶಾಂತಿ, ಸಮಾಧಾನ, ನೆಮ್ಮದಿಯನ್ನು ನೀಡುವಂತಹ ವಾತಾವರಣ ಕಲ್ಪಿಸುವಂತಹ ಪ್ರಯತ್ನ ಮಾಡಬೇಕಿದೆ. ತಪ್ಪುಗಳಾಗಿವೆ. ಈಗಲೂ ಆಗುತ್ತಿವೆ, ಮುಂದೆಯೂ ಆಗುತ್ತವೆ. ಅವುಗಳನ್ನು ನಾವು ಪುನರುಚ್ಚಾರ ಮಾಡುವುದಕ್ಕಿಂತ ಪರಿವರ್ತನೆ ಮಾಡುವುದು ಹೇಗೆ ಎಂದು ಆಲೋಚಿಸಬೇಕು. 

ಸಮಾಜದಲ್ಲಿ ತಾರತಮ್ಯ ಪೋಷಿಸುವಂತವರು, ಸಾಮರಸ್ಯ ಹಾಳುಮಾಡುವಂತವರು ವ್ಯವಸ್ಥಿತವಾಗಿ ಕೆಲ ಮಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಡಬೇಕಿರುವ ಸಮಾನ ಮನಸ್ಕರು ಒಗ್ಗಟ್ಟಿನ ಕೊರತೆಯಿಂದ ದೂರವಾಗುತ್ತಿದ್ದಾರೆಯೇ?

ಇತ್ತೀಚಿನ ವರ್ಷಗಳಲ್ಲಿ ಬಂಡಾಯ ಪ್ರಜ್ಞೆ, ಹೋರಾಟ ಪ್ರಜ್ಞೆ ಬಹಳ ದೂರವಾಗುತ್ತಿದೆ. ಹೊತ್ತು ಬಂದಹಾಗೆ ಕೊಡೆ ಹಿಡಿಯುವಂತಹ ಪ್ರವೃತ್ತಿ ಬಂಡಾಯ ಪ್ರಜ್ಞೆ, ವೈಚಾರಿಕ ಪ್ರಜ್ಞೆಯಲ್ಲಿದ್ದೇವೆ ಎಂದು ಹೇಳುವವರಿಗೇ ಬಂದಿದೆ. ಆಯಾ ಸಂದರ್ಭಕ್ಕೆ ತಕ್ಕಂತೆ ವರ್ತನೆ ಮಾಡುವ ಪರಿಸ್ಥಿತಿ ಬಂದಿರುವುದರಿಂದ ತಲೆ ಎತ್ತಿ, ಧ್ವನಿ ಎತ್ತಿ ಮಾತನಾಡಲು ಮುಜಗುರವಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಂತ ಅದು ಪೂರ್ಣ ನಾಶವಾಗಿದೆಯೇ ಎಂದರೇ ಇಲ್ಲ, ಇವತ್ತಿಗೂ ಕೂಡ ಬಂಡಾಯ ಪ್ರಜ್ಞೆಯನ್ನು ವೈಚಾರಿಕ ಪ್ರಜ್ಞೆಯನ್ನು ಸಾಮಾಜಿಕ ಕಳಕಳಿಯನ್ನು ಉಳಿಸಿಕೊಂಡಂತಹವರು ಬಹಳ ಜನರಿದ್ದಾರೆ. ಅದು ನಿಜಕ್ಕೂ ಸಂತೋಷಪಡಬೇಕಾದ ಸಂಗತಿ.

ಕೆಲ ಮಠಾಧೀಶರು ತಮ್ಮ ಹಿತಾಸಕ್ತಿಯ ಶಕ್ತಿಗಳ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನು ಹೇಗೆ ನೋಡುತ್ತೀರಿ.. ಏನು ಹೇಳಲು ಬಯಸುತ್ತೀರಿ? 

ಮಠ ಎಂದರೇ ಎಲ್ಲರಿಗೂ ಮಾರ್ಗದರ್ಶನ ಮಾಡಬೇಕಿರುವ ಕೇಂದ್ರ. ಎಲ್ಲ ವರ್ಗದ ವ್ಯಕ್ತಿಗಳಿಗೂ ಅವರು ಮಾರ್ಗದರ್ಶನ ಮಾಡಬೇಕು. ವಿಷಾದ ಸಂಗತಿ ಎಂದರೇ ಮಾರ್ಗದರ್ಶನ ಮಾಡುವಂತಹವರೆ ಕೈ ಕೈ ಮಿಲಾಯಿಸುವ ಸ್ಥಿತಿ ಬಂದಿದೆ. ಆ ತಪ್ಪುಗಳನ್ನು ಹಾಗೇ ಮುಚ್ಚಿಟ್ಟುಕೊಂಡು ನಮಗೇನು ಲಾಭವಾಗುತ್ತದೆ ಎನ್ನುವುದನ್ನು ಎದುರು ನೋಡುವಂತಹ ಜನ ಜಾಸ್ತಿಯಾಗಿದ್ದಾರೆ. ಹಾಗಾಗಿ ಅನೇಕ ಮಠಾಧೀಶರ ಬಗ್ಗೆ ಜನರು ಬೇರೆ ಬೇರೆ ರೀತಿಯಲ್ಲಿ ಮಾತನಾಡುವುದನ್ನು ನಾವು ಕೇಳಿದ್ದೇವೆ. ಎಲ್ಲರೂ ಒಂದೇ ಅಲ್ಲ. ಈ ಪೈಕಿ ಬಹಳ ಜನ ಸುಧಾರಣೆಯಾದವರಿದ್ದಾರೆ. ಹೋರಾಟ ಮನೋಭಾವದವರಿದ್ದಾರೆ. ಅಂತವರನ್ನು ನಾವು ಬೆಳೆಸಬೇಕಾಗಿದೆ. 

ಸಮಾಜ ಮತ್ತು ಸರ್ಕಾರಕ್ಕೆ ನಿಮ್ಮ ಸಲಹೆ ಏನು?

ಈ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಾವು ಹೇಳುವಂತಹದ್ದೇನೆಂದರೆ ಪಠ್ಯದಲ್ಲಿ ಆಗಿರುವ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಬೇಕು. ಸರಿಪಡಿಸಲು ಸಾಧ್ಯವಿಲ್ಲದಿದ್ದರೆ ಹಿಂದೆ ಇದ್ದ ಪಠ್ಯವನ್ನೇ ತಾತ್ಕಾಲಿಕವಾಗಿ ಮುಂದುವರಿಸಬೇಕು. ಪಠ್ಯ ರಚನಾ ಸಮಿತಿಯಲ್ಲಿ ಎಂತಹವರಿರಬೇಕು ಎಂಬುದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು.

ಪಠ್ಯ ಪರಿಷ್ಕರಣಾ ಸಮಿತಿಯಲ್ಲಿರುವವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಾಗಿರಬೇಕು, ಅವರಿಗೆ ಸಾಮಾಜಿಕ ಕಳಕಳಿ ಇರಬೇಕು, ಆಳವಾದ ಅಧ್ಯಯನ ಇರಬೇಕು. ಜೊತೆಗೆ ಸತ್ಯದ ಪ್ರತಿಪಾದಕರಾಗಿರಬೇಕು. ಯಾವುದೇ ಪಕ್ಷ ನಿಷ್ಠೆ ಅವರಿಗೆ ಇರಬಾರದು. ತತ್ವ ನಿಷ್ಠೆ ಇರಬೇಕು. ಅಂತಹವರನ್ನು ಪಠ್ಯ ರಚನಾ ಸಮಿತಿಗೆ ನೇಮಕ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಇಂತಹ ಅವಾಂತರಗಳು ಕಡಿಮೆಯಾಗುತ್ತವೆ. 

ಈಗಿನ ಸಮಿತಿ ಅಧ್ಯಕ್ಷರ ಬಗ್ಗೆ ತುಂಬಾ ಮಾತುಗಳು ಕೇಳಿಬರುತ್ತಿವೆ. ನಿನ್ನೆ ಮುಖ್ಯಮಂತ್ರಿಗಳು ಅದರ ಬಗ್ಗೆ ನಾವು ಗಂಭೀರ ಚಿಂತನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಸರ್ಕಾರ ಈ ಬಗ್ಗೆ ಚಿಂತಿಸಲಿ, ಈಗಿರುವ ಪಠ್ಯ ಪರಿಷ್ಕರಣೆ ಸಮಿತಿಯನ್ನು ಬದಲಾಯಿಸಿ ಹೊಸ ಸಮಿತಿ ನೇಮಕ ಮಾಡಲಿ. ಈ ವರ್ಷ ಪಠ್ಯ ಪರಿಷ್ಕರಣೆ ಆಗದಿದ್ದರೇನಾಯಿತು, ಮುಂದಿನ ವರ್ಷಕ್ಕೆ ಒಳ್ಳೆಯ ಪಠ್ಯ ಕೊಡುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ಈ ಮೂಲಕ ಸರ್ಕಾರಕ್ಕೆ ನಾವು ಮನವಿ ಮಾಡಿಕೊಳ್ಳುತ್ತೇವೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app