
- ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವಿಡಿಯೋ ವೈರಲ್
- ಗುರುವಾರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವ ಕೋರ್ಟ್
ಅಕ್ರಮ ಹಣ ವರ್ಗಾವಣೆ ಆರೋಪದಡಿ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಎಎಪಿ ಸಚಿವ ಸತ್ಯೇಂದ್ರ ಜೈನ್ ಅವರು, "ಕಾರಾಗೃಹದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧಿಸಬೇಕು" ಎಂದು ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
"ಇತ್ತೀಚೆಗೆ ಅವರು ತಿಹಾರ್ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿರುವ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಇವುಗಳನ್ನು ಬಿತ್ತರಿಸದಂತೆ ನಿರ್ಬಂಧ ವಿಧಿಸಬೇಕು" ಎಂದು ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಈ ಅರ್ಜಿಯನ್ನು ನ.24ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ದೆಹಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲೆ ತಿಳಿಸಿದ್ದಾರೆ.
ನ.22ರಂದು ತನಗೆ ಜೈಲಿನಲ್ಲಿ ಸರಿಯಾದ ಊಟ, ಮೂಲಸೌಕರ್ಯ ಸಿಗುತ್ತಿಲ್ಲ. ಸರಿಯಾದ ಊಟ ಸಿಗದೆ 28 ಕೆ.ಜಿ ಸಣ್ಣ ಆಗಿದ್ದೇನೆ ಎಂದು ಜೈನ್ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದರು. ಈ ಬೆನ್ನಲ್ಲೇ ಸತ್ಯೇಂದ್ರ ಜೈನ್, ಜೈಲಿನ ಆವರಣದಲ್ಲಿ ಹೊರಗಿನಿಂದ ತರಿಸಿದ ಆಹಾರ ಸೇವಿಸುತ್ತಿರುವ ವಿಡಿಯೋ ಕೂಡ ಇಂದು(ನ.23) ವೈರಲ್ ಆಗಿತ್ತು. ತುಂಬಾ ಜನ ಈ ವಿಡಿಯೋವನ್ನು ಟ್ಯಾಗ್ ಮಾಡಿ ಜೈನ್ ಅವರನ್ನು ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಚುನಾವಣಾ ಆಯುಕ್ತರ ನೇಮಕ| ಸಿಇಸಿ ಅರುಣ್ ಗೋಯೆಲ್ ನೇಮಕಾತಿ ಕಡತ ಸಲ್ಲಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ
ಅಲ್ಲದೆ, ಅತ್ಯಾಚಾರ ಪ್ರಕರಣ ಆರೋಪಿಯೊಬ್ಬನಿಂದ ಜೈಲು ಕೊಠಡಿಯಲ್ಲೇ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನೇ ಮಂದಿಟ್ಟುಕೊಂಡು ಬಿಜೆಪಿ ನಾಯಕರು ಎಎಪಿ ನಾಯಕರ ಕಾಲೆಳೆದಿದ್ದರು.